ಬೀದಿಬದಿ ವ್ಯಾಪಾರಿಗಳ ಹೋರಾಟ ಹತ್ತಿಕ್ಕಲು ಶಾಸಕ ವೇದವ್ಯಾಸ ಕಾಮತ್ ಕುಮ್ಮಕ್ಕು: ಸುನೀಲ್ ಕುಮಾರ್ ಬಜಾಲ್ ಆರೋಪ
ಮಂಗಳೂರು, ಜ.13: ನಗರದ ಬೀದಿ ವ್ಯಾಪಾರಿಗಳ ಐಕ್ಯತೆಯನ್ನು ಮುರಿದು ಹೋರಾಟವನರನು ಹತ್ತಿಕ್ಕಲು ಶಾಸಕ ವೇದವ್ಯಾಸ ಕಾಮತ್ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಆರೋಪಿಸಿದರು.
ನಗರದ ಬೀದಿ ವ್ಯಾಪಾರ ವಲಯದ ಎದುರು ಅವೈಜ್ಞಾನಿಕ, ಅಸುರಕ್ಷಿತ ಮತ್ತು ಅಸಮರ್ಪಕ ಬೀದಿ ವ್ಯಾಪಾರ ವಲಯ ದಲ್ಲಿ ವ್ಯಾಪಾರ ಮಾಡಲು ಬಲವಂತ ಮಾಡುತ್ತಿರುವ ನಗರ ಪಾಲಿಕೆ ಅಧಿಕಾರಿಗಳ ದಬ್ಬಾಳಿಕೆ ಖಂಡಿಸಿ ಸಿಐಟಿಯು ಅಧೀನದ ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ವತಿಯಿಂದ ಸೋಮವಾರ ನಡೆದ ಪ್ರತಿಭಟನೆಯನ್ನು ಉದ್ಧೇಶಿಸಿ ಅವರು ಮಾತನಾಡುತ್ತಿದ್ದರು.
ಬೀದಿ ವ್ಯಾಪಾರಿಗಳ ಹೋರಾಟ ಹತ್ತಿಕ್ಕಲಿಕ್ಕಾಗಿ ಬೀದಿ ವ್ಯಾಪಾರಿಗಳ ಐಕ್ಯತೆಯನ್ನು ಒಡೆದು ಅವರನ್ನು ಅತಂತ್ರಗೊಳಿಸಿ ಬಡ ಬೀದಿ ವ್ಯಾಪಾರಿಗಳನ್ನು ಸಂಕಷ್ಟಕ್ಕೆ ತಳ್ಳುವುದೇ ಶಾಸಕ ಕಾಮತ್‌ರ ಸಾಧನೆ ಎಂದು ಟೀಕಿಸಿದ ಸುನೀಲ್ ಕುಮಾರ್ ಬಜಾಲ್ ಬೀದಿ ವ್ಯಾಪಾರಿಗಳ ಹಕ್ಕುಗಳನ್ನು ರಕ್ಷಣೆ ಮಾಡಲು ಹೋರಾಟವನ್ನು ತೀವ್ರಗೋಳಿಸುತ್ತೇವೆ ಎಂದರು.
ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸಿಐಟಿಯು ಮುಖಂಡ ಯೋಗೀಶ್ ಜಪ್ಪಿನಮೊಗರು ಮಾತನಾಡಿದರು.
ಸಂಘದ ಮುಖಂಡರಾದ ವಿಜಯ ಜೈನ್, ಸಿಕಂದರ್ ಬೇಗ್, ಹಂಝ, ಶಿವಪ್ಪ, ಹಸನ್ ಕುದ್ರೋಳಿ, ರಫೀಕ್, ಮೇಬಲ್ ಡಿಸೋಜ, ಫೀಲೋಮಿನ, ಅಬ್ದುಲ್ ಖಾದರ್, ಹನೀಫ್ ಬೆಂಗ್ರೆ, ಗುಡ್ಡಪ್ಪ, ಮುತ್ತುರಾಜ್, ಗಂಗಮ್ಮ ಉಪಸ್ಥಿತರಿದ್ದರು.