ಮಂಗಳೂರು: ಹಸುವಿನ ಕೆಚ್ಚಲು ಕೊಯ್ದ ಘಟನೆಯನ್ನು ಖಂಡಿಸಿ ಬಿಜೆಪಿ ಪ್ರತಿಭಟನೆ
ಮಂಗಳೂರು: ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಘಟನೆಯನ್ನು ಖಂಡಿಸಿ ದ.ಕ. ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರು ಮಾತನಾಡಿ, ರಾಜ್ಯ ಸರಕಾರ ಗೋವುಗಳಿಗೆ ರಕ್ಷಣೆ ನೀಡುತ್ತಿಲ್ಲ. ಕೇವಲ ಬೂಟಾಟಿಕೆಯ ಮಾತುಗಳನ್ನಾಡುತ್ತಿದೆ. ಚಾಮರಾಜಪೇಟೆಯಲ್ಲಿ ನಡೆದ ಈ ಘಟನೆಯು ಮಾನವ ಸಮಾಜ ತಲೆತಗ್ಗಿಸುಂತದ್ದು. ದುಷ್ಕರ್ಮಿಗಳು ಹಸುಗಳ ಕೆಚ್ಚಲುಗಳನ್ನು ಕೊಯ್ದಿದ್ದಾರೆ. ಕಾಲುಗಳಿಗೆ ಮಚ್ಚಿನಿಂದ ಕೊಚ್ಚಿದ್ದಾರೆ. ಸಿಸಿ ಕೆಮರಾ ಬಂದ್ ಮಾಡಿ ಕೃತ್ಯ ಮಾಡಿದ್ದಾರೆ. ಸರಕಾರ ಯಾರೋ ಒಬ್ಬ ಬಿಹಾರದವರನ್ನು ಅರೆಸ್ಟ್ ಮಾಡಿದ್ದಾರೆ. ಕಣ್ಣಿಗೆ ಮಣ್ಣೆರೆಚಲು ಅರೆಸ್ಟ್ ಮಾಡಿದ್ದಾರೆ. ನಿಜವಾದ ಎಲ್ಲಾ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ನಮ್ಮಲ್ಲಿ ಮನುಷ್ಯರಿಗೂ ರಕ್ಷಣೆ ಇಲ್ಲ. ಗೋವುಗಳಿಗೆ ರಕ್ಷಣೆ ಇಲ್ಲದಾಗಿದೆ. ಗಾಯಗೊಂಡಿರುವ ಹಸುಗಳ ಮಾಲಕರಿಗೆ ತಲಾ ಕನಿಷ್ಠ ಐದು ಲ.ರೂ ನೀಡಬೇಕು. ಸರಕಾರ ನಿರಂತರ ಗೋ ರಕ್ಷಣೆಯಲ್ಲಿ ವಿಫಲವಾಗಿದೆ ಎಂದರು.
ಇನ್ನೋರ್ವ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಮಾತನಾಡಿ ಗೋವು ಪೂಜಿಸುವವರಲ್ಲಿ ಭಯ ಹುಟ್ಟಿಸಲು ಈ ಕೃತ್ಯ ನಡೆಸಲಾಗಿದೆ. ಕಾಂಗ್ರೆಸ್ ಸರಕಾರದಿಂದ ಸಮಾಜ ವಿರೋಧಿ ಕೃತ್ಯ ನಡೆಸುತ್ತಿರುವವರಿಗೆ ಬೆಂಬಲ ಸಿಗುತ್ತಿದೆ ಎಂಬುದಕ್ಕೆ ಇಂತಹ ಘಟನೆಗಳು ಸಾಕ್ಷಿ ಎಂದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ,ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮತ್ತಿತರರು ಪಾಲ್ಗೊಂಡಿದ್ದರು.