ಉಡುಪಿ- ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗ ಯೋಜನೆಯ ತಪ್ಪು ಮಾಹಿತಿ: ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿಗಳ ಒಕ್ಕೂಟ ಆರೋಪ
ಮಂಗಳೂರು, ಜ.15: ಉಡುಪಿ- ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣ ಮಾರ್ಗ ಯೋಜನೆಯ ಗುತ್ತಿಗೆದಾರ ಯುಟಿಕೆಎಲ್ -ಸ್ಟರ್ಲೈಟ್ ಕಂಪೆನಿಯವರು ಕಾಮಗಾರಿಗೆ ಸಂಬಂಧಿಸಿ ನಿರಂತರವಾಗಿ ಮಾಧ್ಯಮಗಳಲ್ಲಿ ಸುಳ್ಳು ಮತ್ತು ತಪ್ಪು ಮಾಹಿತಿ ನೀಡಿ ಯೋಜನೆಯ ಸತ್ಯ ವಿಚಾರಗಳನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಉಡುಪಿ- ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿಗಳ ಒಕ್ಕೂಟ ಆರೋಪಿಸಿದೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಧುರೀಣರಾದ ಚಂದ್ರಹಾಸ ಶೆಟ್ಟಿ ಇನ್ನಾ ಅವರು ಪ್ರಸ್ತಾವಿತ ವಿದ್ಯುತ್ ಯೋಜನೆ ಮಾರ್ಗ ವ್ಯಾಪ್ತಿಯಲ್ಲಿನ ಶೇ 95ಕ್ಕಿಂತ ಹೆಚ್ಚಿನ ಭೂಮಾಲಕರು ಯೋಜನಾ ಮಾರ್ಗವನ್ನು ವಿರೋಧಿಸುತ್ತಿದ್ದಾರೆ. ಗುತ್ತಿಗೆ ವಹಿಸಿಕೊಂಡ ಕಂಪೆನಿಯವರು ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ನೀಡಿ ದ್ದಾರೆ. ಅಲ್ಲಿ ಆ ರೀತಿ ಕಾಮಗಾರಿಯ ಪ್ರಗತಿ ಇಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸರಕಾರದ ಇಂಧನ ಸಚಿವಾಲಯದ ಕೇಂದ್ರೀಯ ವಿದ್ಯುತ್ ಪ್ರಾಧಿಕಾರ (ಸಿಇಎ )ದ ಡಿಸೆಂಬರ್ 2024 ರ ಪ್ರಗತಿ ವರದಿಯಲ್ಲಿ ನಂ.39 ಆಫ್ ಸಿಇಎ ಸ್ಟೇಟಸ್) ದಾಖಲಾಗಿರುವಂತೆ ಕರ್ಣಾಟಕ ರಾಜ್ಯದಲ್ಲಿನ ವಿದ್ಯುತ್ ಮಾರ್ಗದ 177 ಟವರ್‌ಗಳ ಪೈಕಿ 128 ಟವರ್‌ಗಳ ವ್ಯಾಪ್ತಿಯಲ್ಲಿ ಜನರಿಂದ ತೀವ್ರ ವಿರೋಧ ಕಂಡು ಬಂದಿದೆ. ಉಳಿದೆಡೆ ಟವರ್ ಬೇಸ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಸರಕಾರಿ ಜಾಗದಲ್ಲಿ ಮತ್ತು ಕಂಪೆನಿಯ ಬಣ್ಣದ ಮಾತಿಗೆ ಮರುಳಾಗಿರುವ 2-3 ಭೂಮಾಲಕರ ಜಾಗದಲ್ಲಿ ಮಾತ್ರ ಟವರ್‌ನ ಬೇಸ್ ಕಾಮಗಾರಿ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಯೋಜನೆ ಮಂಜೂರಾತಿ ಪಡೆದು 6ವರ್ಷದ ನಂತರವೂ ಮಂಗಳೂರು ಮತ್ತು ಕುಂದಾಪುದ ವಲಯ ಅರಣ್ಯ ಇಲಾಖೆ ಯಿಂದ 2 ನೇ ಹಂತದ ಅನುಮತಿ ಇನ್ನೂ ಸಿಕ್ಕಿಲ್ಲ ಎನ್ನುವುದು ಈ ಯೋಜನೆ ಎಷ್ಟೊಂದು ಅಪಾಯಕಾರಿ ಎನ್ನುವುದನ್ನು ಸಾಬೀತುಪಡಿಸುತ್ತದೆ. ಸಂರಕ್ಷಿತಾ ಅರಣ್ಯ ಪ್ರದೇಶದಲ್ಲಿರುವ ಕಾನೂನಿನ ಅವಕಾಶಕ್ಕಿಂತ ಹೆಚ್ಚು ಮರಗಳನ್ನು ಈ ಯೋಜನಾ ಮಾರ್ಗಕ್ಕಾಗಿ ಕಡಿಯಬೇಕಾಗಿರುವ ಕಾರಣದಿಂದ ಅರಣ್ಯ ಅರಣ್ಯ ಇಲಾಖಾಧಿಕಾರಿಗಳು ಇನ್ನೂ ಯೋಜನೆಗೆ ಅನುಮತಿ ನೀಡದೆ ತಮ್ಮ ಕರ್ತವ್ಯ ಬದ್ಧತೆ ಉಳಿಸಿಕೊಂಡಿದ್ದಾರೆ ಎಂದು ಚಂದ್ರಹಾಸ ಶೆಟ್ಟಿ ಹೇಳಿದ್ದಾರೆ.
ಭಾರತ ಸರಕಾರದ ವಿದ್ಯುತ್ ಸಚಿವಾಲಯದ ಅನುಮತಿ ದಾಖಲೆ ಮತ್ತು ಗಜೆಟ್ ನೋಟಿಫಿಕೇಶನ್ ದಾಖಲೆಯಲ್ಲಿ ನಮೂದಾಗಿರುವ ಯೋಜನಾ ಮಾರ್ಗ ವನ್ನು ಬಿಟ್ಟು ಇದೀಗ ಪ್ರತ್ಯೇಕ ಮಾರ್ಗ ಬಂಟ್ವಾಳ ತಾಲೂಕಿನ ಅರ್ಲ ಮತ್ತು ಪಂಜಿಕಟ್ಟು, ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಮೂಲಕ ವಿದ್ಯುತ್ ಲೈನ್ ಕಾಮಗಾರಿ ಕೈಗೊಳ್ಳಲು ಕಂಪೆನಿಗೆ ಅನುಮತಿ ನೀಡಿದವರು ಯಾರು ಎಂದು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದ್ದಾರೆ.
ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ತಪ್ಪು ಮಾಹಿತಿ ನೀಡಿ , ನಿರಾಕ್ಷೇಪಣಾ ಪತ್ರ ಪಡೆದು ನಿಷೇಧಿತ ವಲಯದಲ್ಲಿ ಟವರ್ ಅಳವಡಿಸಲು ತೆಂಕ-ಬಡಗ ಎಡಪದವು ಮತ್ತು ತೆಂಕ ಬಡಗ ಮಿಜಾರು ಪ್ರದೇಶ ಕಾಮಗಾರಿ ನಡೆಸಲು ಪ್ರಯತ್ನ ಮಾಡುತ್ತಿರುವುದಕ್ಕೆ ಕಂಪೆನಿಯವರು ಸ್ಪಷ್ಟ ದಾಖಲೆ ಒದಗಿಸಲಿ ಎಂದು ಹೇಳಿದ್ದಾರೆ.
ಟವರ್ ಆಳದಡಿಸುವ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಮಾಡಬಹುದು ಎಂದು ಹೇಳುವ ಕಂಪೆನಿಯವರು ಪ್ರಸ್ತಾವಿತ ಯೋಜನಾ ಮಾರ್ಗ ವ್ಯಾಪ್ತಿಯ ಇನ್ನಾ, ಬಳ್ಕುಂಜೆ, ಉಳೆಪಾಡಿ, ಏಳಿಂಜೆ ಮಿಜಾರ್ , ಕುಳವೂರು ಮುಂತಾದ ಹೊಳೆ ಬದಿಯ ಸಮೃದ್ಧ ನೀರು ನಿಲ್ಲುವ ಭತ್ತ ಮತ್ತು ಅಡಿಕೆಗೆ ಪ್ರಶಸ್ತ್ಯವಾದ ಪ್ರದೇಶಗಳಲ್ಲಿ ವಿವಿಧ ಬೆಳೆಗಳನ್ನು ಬೆಳೆದು ತೋರಿಸಲಿ ಎಂದು ಸವಾಲು ಹಾಕಿದ್ದಾರೆ.
ಉಡುಪಿ-ದ.ಕ. ಜಿಲ್ಲೆಯ ಕೋಟಿಗಟ್ಟಲೆ ಮೌಲ್ಯದ ಸಹಸ್ರಾರು ಎಕ್ರೆ ಕೃಷಿ ಭೂಮಿಯನ್ನು ನಾಶ ಮಾಡಿ,ಸಹಸ್ರಾರು ಕುಟುಂಬಗಳನ್ನು ಬೀದಿಗೆ ತಳ್ಳಿ ಅನುಷ್ಠಾನಗೊಳಿಸಲಿರುವ ಯೋಜನೆಗೆ ರಾಜ್ಯದ ವಂತಿಗೆಯಾಗಿ ಶೇ 37ರಷ್ಟು ಕೊಡ ಬೇಕಾಗಿದೆ. ಅದರೆ ಈ ಯೋಜನೆಯಿಂದ ನಮ್ಮ ರಾಜ್ಯಕ್ಕೆ ಯಾವುದೇ ಲಾಭ ಇಲ್ಲ ಎಂದು ಒಕ್ಕೂಟದ ಧುರೀಣರು ಹೇಳಿದ್ದಾರೆ.
ಮುಖ್ಯ ಮಂತ್ರಿಯ ಭೇಟಿ: ಜ. 17ರಂದು ಮಂಗಳೂರಿಗೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಯಾಗಿ ತಮ್ಮ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಲಾಗುವುದು. ತಮ್ಮ ಅಧ್ಯಕ್ಷತೆಯಲ್ಲಿ ಇಂಧನ ಸಚಿವರು ಹಾಗೂ ಸಂಬಂಧಿತ ಇಲಾಖೆ ಮುಖ್ಯಸ್ಥರು ಮತ್ತು ಭೂಮಾಲಕರುಗಳ ನಿಯೋಗದ ಜೊತೆಗೆ ಪರಿಣಾಮ ಕಾರಿ ಸಭೆ ನಡೆಸಿ ಯೋಜನೆ ಅನುಷ್ಠಾನದ ಬಗ್ಗೆ ಸ್ಪಷ್ಟ ತೀರ್ಮಾನಕ್ಕೆ ಬರುವಂತೆ ಮುಖ್ಯ ಮಂತ್ರಿ ಅವರನ್ನು ಆಗ್ರಹಿಸಲಾಗುವುದು ಎಂದು ಚಂದ್ರಹಾಸ ಶೆಟ್ಟಿ ಇನ್ನಾ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಲೆಕ್ಸ್ ಸಿಕ್ವೇರಾ, ಜೆಸಿಂತಾ ಲೊಬೊ, ಅಲ್ಫೊನ್ಸ್ ಡಿ ಸೋಜ ನಿಡ್ಡೋಡಿ ಉಪಸ್ಥಿತರಿದ್ದರು.