ಗಿರೀಶ್ ಕಾಸರವಳ್ಳಿ, ಯೆನೆಪೋಯ ಅಬ್ದುಲ್ಲ ಕುಂಞಿ ಸಹಿತ ವಿವಿಧ ಕ್ಷೇತ್ರದ ಸಾಧಕರಿಗೆ ಸಂದೇಶ ಪ್ರಶಸ್ತಿ
ಫೆ.10ರಂದು ಪ್ರಶಸ್ತಿ ಪ್ರದಾನ
ಗಿರೀಶ್ ಕಾಸರವಳ್ಳಿ - ಯೆನೆಪೋಯ ಅಬ್ದುಲ್ಲ ಕುಂಞಿ
ಮಂಗಳೂರು, ಜ.16: ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವಾದ ಸಂದೇಶದ ವತಿಯಿಂದ ವಿವಿಧ ಕ್ಷೇತ್ರದ ಸಾಧಕರಿಗೆ ನೀಡಲಾಗುವ ಪ್ರಶಸ್ತಿಗೆ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಯೆನೆಪೋಯ ಸೆಂಟರ್ ಫಾರ್ ಡೆವಲಪ್ಮೆಂಟ್ ಸ್ಟಡೀಸ್ ಸಂಸ್ಥೆಯ ಪ್ರಾಯೋಜಕ ಯನೆಪೋಯ ಅಬ್ದುಲ್ಲ ಕುಂಞಿ ಸಹಿತ ವಿವಿಧ ಗಣ್ಯರು ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ಫೆ. 10ರಂದು ಸಂಜೆ 5.30ಕ್ಕೆ ನಂತೂರಿನ ಸಂದೇಶ ಪ್ರತಿಷ್ಠಾನದ ಆವರಣದಲ್ಲಿ ನಡೆಯಲಿದೆ.
ಮಂಗಳೂರು ಪ್ರೆಸ್ಕ್ಲಬ್ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಸಂದೇಶ ಫೌಂಡೇಶನ್ ಫಾರ್ ಕಲ್ಚರ್ ಆ್ಯಂಡ್ ಎಜುಕೇಶನ್ನ ನಿರ್ದೇಶಕ ವಂ. ಸುದೀಪ್ ಪೌಲ್, ಸಂದೇಶ ಸಾಹಿತ್ಯ ಪ್ರಶಸ್ತಿ ಕನ್ನಡ ಭಾಷೆಯಲ್ಲಿ ಬಿ.ಆರ್. ಲಕ್ಷ್ಮಣ ರಾವ್, ಕೊಂಕಣಿ ಭಾಷೆಯಲ್ಲಿ ಐರಿನ್ ಪಿಂಟೋ, ತುಳು ಭಾಷೆಯಲ್ಲಿ ಡಾ. ಗಣೇಶ್ ಅಮೀನ್ ಸಂಕಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಸಂದೇಶ ಮಾಧ್ಯಮ ಪ್ರಶಸ್ತಿಗೆ ಡಿ.ವಿ. ರಾಜಶೇಖರ್, ಕೊಂಕಣಿ ಸಂಗೀತ ಪ್ರಶಸ್ತಿಗೆ ರೋಶನ್ ಡಿಸೋಜಾ, ವಿಶೇಷ ಪ್ರಶಸ್ತಿಗೆ ಡಾ.ಕೆ.ವಿ. ರಾವ್ ಆಯ್ಕೆಯಾಗಿದ್ದಾರೆ.
ಸಂದೇಶ ವಿಷೇಷ ಗೌರವ ಪ್ರಶಸ್ತಿಗೆ ಮೈಕಲ್ ಡಿಸೋಜಾ ಹಾಗೂ ವಿಶೇಷ ಯುವ ಪ್ರತಿಭಾ ಪ್ರಸಸ್ತಿಗೆ ರಮೋನ ಇವೆಟ್ ಪಿರೇರಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದವರು ವಿವರ ನೀಡಿದರು.
ಕರ್ನಾಟಕ ಪ್ರಾಂತೀಯ ಕಥೋಲಿಕ್ ಧರ್ಮಾಧ್ಯಕ್ಷರ ಮಂಡಳಿಯ ಆಶ್ರಯದಲ್ಲಿರುವ ಸಂದೇಶ ಸಂಸ್ಥೆಯಿಂದ ನೀಡಲಾ ಗುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಬಳ್ಳಾರಿಯ ಬಿಷಪ್ ಮತ್ತು ಸಂಸ್ಥೆ ಅಧ್ಯಕ್ಷ ಅತಿ ವಂ. ಡಾ. ಹೆನ್ರಿ ಡಿಸೋಜಾ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಿವಮೊಗ್ಗ ಬಿಷಪ್ ಅತಿ ವಂ. ಡಾ. ಫ್ರಾನ್ಸಿಸ್ ಸೆರಾವೊ, ಬೆಳ್ತಂಗಡಿ ಬಿಷಪ್ ಅತಿ ವಂ. ಡಾ. ಲಾರೆನ್ಸ್ ಮುಕ್ಕುಯಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ಸಂಸ್ಥೆಯ ಟ್ರಸ್ಟಿ ವಂ. ಐವನ್ ಪಿಂಟೋ, ಸಂದೇಶ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಡಾ. ನಾ. ದಾಮೋದರ ಶೆಟ್ಟಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ಗೋಷ್ಟಿಯಲ್ಲಿ ಪ್ರಶಸ್ತಿ ಆಯ್ಕೆ ಸಮಿತಿ ಡಾ.ನಾ. ದಾಮೋದರ ಶೆಟ್ಟಿ, ಬಿ.ಎ. ಮುಹಮ್ಮದ್ ಹನೀಫ್, ಸೈಮನ್ ಕುವೆಲ್ಲೋ, ರೂಪಕಲಾ ಆಳ್ವ ಉಪಸ್ಥಿತರಿದ್ದರು.