ಮಂಗಳೂರು ಸಿಸಿಬಿ ಪೊಲೀಸರಿಂದ ಡ್ರಗ್ಸ್ ಸಾಗಾಟ ಪ್ರಕರಣದ ತನಿಖೆ ಚುರುಕು; ದಿಲ್ಲಿಗೆ ತೆರಳಿರುವ ತನಿಖಾ ತಂಡ

ಸಾಂದರ್ಭಿಕ ಚಿತ್ರ
ಮಂಗಳೂರು, ಮಾ.17: ಡ್ರಗ್ಸ್ ಕಳ್ಳ ಸಾಗಾಣಿಕೆಯ ಜಾಲದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರಿಗೆ ಇದೀಗ ವಿಮಾನದಲ್ಲಿ ಡ್ರಗ್ಸ್ಗಳನ್ನು ಸುಲಭವಾಗಿ ಸಾಗಿಸಲು ನಿಲ್ದಾಣದಲ್ಲಿ ಭದ್ರತಾ ಲೋಪ ಇರುವುದು ಬೆಳಕಿಗೆ ಬಂದಿದೆ.
ಭದ್ರತಾ ಲೋಪದ ಕಾರಣದಿಂದಾಗಿ ಪೆಡ್ಲರ್ಗಳು ಸುಲಭವಾಗಿ ಡ್ರಗ್ಸ್ಗಳನ್ನು ಸಾಗಿಸುತ್ತಿದ್ದರು ಎನ್ನುವ ವಿಚಾರ ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.
ನಿಷೇಧಿತ ಡ್ರಗ್ಸ್ ಎಂಡಿಎಂಎಯನ್ನು ಬೆಂಗಳೂರಿನಲ್ಲಿ ವಶಪಡಿಸಿಕೊಂಡ ಮಂಗಳೂರಿನ ಸಿಸಿಬಿ ಪೊಲೀಸರು ಇದೀಗ ಹೆಚ್ಚಿನ ಮಾಹಿತಿ ಕಲೆ ಹಾಕಲು ಹೊಸದಿಲ್ಲಿಗೆ ತೆರಳಿದ್ದಾರೆ ಎಂಬ ವಿಚಾರ ಗೊತ್ತಾಗಿದೆ.
ವಿಮಾನ ನಿಲ್ದಾಣಗಳಲ್ಲಿ ಕಠಿಣ ಭದ್ರತಾ ತಪಾಸಣೆಯ ವ್ಯವಸ್ಥೆ ಇದ್ದರೂ ದಕ್ಷಿಣ ಆಫ್ರಿಕಾದ ಮಹಿಳೆಯರ ಟ್ರಾಲಿ ಬ್ಯಾಗ್ಗಳಲ್ಲಿ ಇದ್ದ ಡ್ರಗ್ಸ್ ಯಾಕೆ ಪತ್ತೆಯಾಗಲಿಲ್ಲ ? ಎಂಬುದು ಪೊಲೀಸರ ಸಂಶಯಕ್ಕೆ ಕಾರಣವಾಗಿದೆ. ವಿಮಾನ ನಿಲ್ದಾಣಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾದ ದೃಶ್ಯಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಮಾರ್ಚ್ 14ರಂದು ಬೆಂಗಳೂರಿನ ವಿಮಾನ ನಿಲ್ದಾಣದಿಂದ ಹೊರಬಂದು ಟ್ಯಾಕ್ಸಿಯಲ್ಲಿ ಪ್ರಯಾಣಿಸಿದ್ದ ದಕ್ಷಿಣ ಆಫ್ರಿಕಾದ ಇಬ್ಬರು ಮಹಿಳೆಯರಾದ ಬಾಂಬಾ ಫಾಂಟಾ ಹಾಗೂ ಅಬಿಗೇಲ್ ಅಡ್ನೋಯಿಸ್ ಎಂಬವರನ್ನು ಮಂಗಳೂರಿನ ಸಿಸಿಬಿ ಎಸಿಪಿ ಮನೋಜ್ ನಾಯ್ಕ್ ನೇತೃತ್ವದ ತಂಡವು ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಯ ಹತ್ತಿರದ ನೀಲಾದ್ರಿ ನಗರದಲ್ಲಿ ಬಂಧಿಸಿತ್ತು.
ಇವರಿಂದ ಸುಮಾರು 75 ಕೋಟಿ ರೂ. ಬೆಲೆ ಬಾಳುವ 37.87 ಕೆ.ಜಿಗಳಷ್ಟು ನಿಷೇಧಿತ ಮಾದಕ ವಸ್ತು ಎಂಡಿಎಂಎಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಟ್ರಾಲಿ ಬ್ಯಾಗ್ನಲ್ಲಿ ಮಾದಕ ವಸ್ತುವನ್ನು ಸಾಗಿಸುವ ಯತ್ನದಲ್ಲಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು.
ಆರೋಪಿ ಮಹಿಳೆಯರಿಬ್ಬರು ದಿಲ್ಲಿಯಿಂದ 37 ಸಲ ಬೆಂಗಳೂರಿಗೆ ಹಾಗೂ ಮುಂಬೈಗೆ 22 ಸಲ ತೆರಳಿದ್ದರು. ಮಹಿಳೆಯರಿಬ್ಬರ ಬಂಧನದಿಂದ ದೇಶದ ಮಹಾನಗರಗಳಲ್ಲಿ ಡ್ರಗ್ಸ್ ಕಳ್ಳಸಾಗಣೆಯ ದೊಡ್ಡ ಜಾಲ ಇರುವುದು ಬೆಳಕಿಗೆ ಬಂದಿದೆ.
ಬಂಧಿತ ಬಾಂಬಾ ಫಾಂಟಾ ಹಾಗೂ ಅಬಿಗೇಲ್ ಅಡ್ನೋಯಿಸ್ ಮೊದಲೇ ಪರಿಚಿತರು. ಅವರು ನೈಜೀರಿಯಾ ಪ್ರಜೆಗಳಿಗೆ ಮಾತ್ರ ಬೆಂಗಳೂರಿನಲ್ಲಿ ಮಾದಕ ಪದಾರ್ಥ ಪೂರೈಸುತ್ತಿದ್ದರು. ನೈಜೀರಿಯಾ ಪ್ರಜೆಗಳು ಆ ಡ್ರಗ್ಸ್ ಅನ್ನು ಸ್ಥಳೀಯ ಪೆಡ್ಲರ್ಗಳಿಗೆ ಪೂರೈಸುತ್ತಿದ್ದರು. ಅವರು ಅದನ್ನು ಮಂಗಳೂರು ಸೇರಿದಂತೆ ಇತರ ನಗರಗಳಲ್ಲಿರುವ ಪೆಡ್ಲರ್ಗಳಿಗೆ ಪೂರೈಕೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.