ಕೋಟೆಕಾರ್ ಪ.ಪಂ.ಸಾಮಾನ್ಯ ಸಭೆ: ಅಭಿವೃದ್ಧಿ ಕಾಮಗಾರಿಯದ್ದೇ ಚರ್ಚೆ

ಉಳ್ಳಾಲ: ಬಹು ನೀರಾವರಿ ಯೋಜನೆ, ಸರ್ಕಾರಿ ಜಾಗ, ಚೆಕ್ ವಿತರಣೆ, ಅಭಿವೃದ್ಧಿ ಕಾಮಗಾರಿ, ರಸ್ತೆ, ಶಾಸಕರ ಭೇಟಿ, ಹಿಂದುರುದ್ರ ಭೂಮಿ ಮುಂತಾದ ವಿಷಯಗಳ ಬಗ್ಗೆ ಪರ ವಿರೋಧ ಚರ್ಚೆಗಳು ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಕೋಟೆಕಾರ್ ಪ.ಪಂ.ನ ಅಧ್ಯಕ್ಷ ದಿವ್ಯ ಸತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸುಜಿತ್ ಮಾಡೂರು, ಫಲಾನುಭವಿಗಳಿಗೆ ಚೆಕ್ ವಿತರಣೆಯಲ್ಲಿ ತಾರತಮ್ಯ ಬೇಡ. ಎಲ್ಲರಿಗೂ ಏಕಕಾಲದಲ್ಲಿ ನೀಡುವಂತೆ ಮಾಡಬೇಕು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ದಿವ್ಯ ಸತೀಶ್ ಅವರು ಎಸ್ ಎಫ್ ಸಿ ಯೋಜನೆ ಯಡಿ ಚೆಕ್ ವಿತರಣೆ ಇನ್ನೂ ಆಗಬೇಕಾಗಿದೆ.ಸದ್ಯಕ್ಕೆ ಮುನ್ಸಿಪಾಲಿಟಿ ಅನುದಾನ ದಿಂದ ಬಿಡುಗಡೆ ಮಾಡಿದ ಚೆಕ್ ಮಾತ್ರ ವಿತರಣೆ ಮಾಡಲಾಗಿದೆ ಎಸ್ ಎಫ್ ಸಿ ಯೋಜನೆ ಯಡಿ ಮುಂದಿನ ಹಂತದಲ್ಲಿ ಚೆಕ್ ವಿತರಣೆ ಮಾಡಲಾಗುವುದು ಎಂದರು.
ಅನುದಾನ: ಎಲ್ಲಾ ವಾರ್ಡ್ ಗೆ ಅಭಿವೃದ್ಧಿ ಕಾಮಗಾರಿ ಗೆ ಅನುದಾನ ಐದು ಲಕ್ಷ ಇಟ್ಟಿದ್ದೀರಿ.ಅಧ್ಯಕ್ಷರ ವಾರ್ಡ್ ಗೆ 15 , ಉಪಾಧ್ಯಕ್ಷ ರ ವಾರ್ಡ್ ಗೆ 10 ಲಕ್ಷ ಅನುದಾನ ಇಟ್ಟಿದ್ದೀರಿ. ಈ ಅನುದಾನದಲ್ಲಿ ಎಲ್ಲಾ ಕಾಮಗಾರಿ ಆಗದು.ಅಧ್ಯಕ್ಷರಿಗೆ ಶೇ.10 ರಷ್ಟು ಹೆಚ್ಚು ಅನುದಾನ ತನ್ನ ಬಳಿ ಇಟ್ಟುಕೊಳ್ಳಲು ಅವಕಾಶ ಇದೆ. ಆದರೆ ಆ ಹಣವನ್ನು ಬೇರೆ ವಾರ್ಡ್ ಗೆ ಬಳಸಿ ಅಭಿವೃದ್ಧಿ ಕಾಮಗಾರಿ ಮಾಡಬಹುದು ಎಂದು ಸುಜಿತ್ ಮಾಡೂರು ತಿಳಿಸಿದರು.
ಈ ವೇಳೆ ಮಾತನಾಡಿದ ಧೀರಜ್ ಅವರು ಅಧ್ಯಕ್ಷರಿಗೆ ತನ್ನ ಬಳಿ10 ಶೇ.ದಷ್ಟು ಹೆಚ್ಚು ಅನುದಾನ ಇಡಬಹುದು ಎಂಬ ನಿಯಮ ಇಲ್ಲ ಎಂದರು.
ಕೌನ್ಸಿಲರ್ ಅಹ್ಮದ್ ಅಜ್ಜಿನಡ್ಕ ಅವರು, ಎಲ್ಲಾ ವಾರ್ಡ್ ಗೆ ಸಮಾನ ಆಗಿ ಅನುದಾನ ಇಡುವುದು ಬೇಡ. ಮತದಾರರು ಜಾಸ್ತಿ ಇರುವ ವಾರ್ಡ್ ಗಳಿಗೆ ಜಾಸ್ತಿ ಅನುದಾನ ನೀಡಿ. ಮತದಾರರು ಕಡಿಮೆ ಇರುವ ವಾರ್ಡ್ ಗೆ ಅನುದಾನ ಕಡಿಮೆ ಇಡಿ ಎಂದರು.
ರಸ್ತೆ: 11 ವಾರ್ಡ್ ಮಾಡೂರು ನಲ್ಲಿ ಸರ್ಕಾರಿ ಜಾಗ ದ ಸರ್ವೆ ಕಾರ್ಯ ಆಗಿದೆ. ಆದರೆ ರಸ್ತೆ , ಬಯಲು ರಂಗ ಮಂಟಪ ನಿರ್ಮಾಣ ಯಾಕಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಪಕ್ಷೇತರ ಸದಸ್ಯ ಹರೀಶ್ ಅವರು ಈ ವ್ಯವಸ್ಥೆ ಶೀಘ್ರ ಮಾಡಿ ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ದಿವ್ಯ ಸತೀಶ್ ಅವರು ಮುಂಭಾಗದಲ್ಲಿ ಮನೆ ಇದೆ.ಆ ಮನೆ ಒಡೆದು ರಸ್ತೆ ಮಾಡುವುದು ಆಗುತ್ತದೆಯೇ, ಅವರ ಮೇಲೆ ಕರುಣೆ ಇಲ್ಲವೇ ಎಂದು ಪ್ರಶ್ನಿಸಿದರು.
ಈ ವೇಳೆ ಮಾತನಾಡಿದ ಹರೀಶ್ ಅವರು ಈ ಮನೆಯ ಡೋರು ನಂಬರ್ 2014 ರಲ್ಲಿ ಒಬ್ಬರ ಹೆಸರಿ ನಲ್ಲಿ ನೀಡಲಾಗಿದೆ.ಹಕ್ಕು ಪತ್ರ ಇನ್ನೊಬ್ಬರ ಹೆಸರಿನಲ್ಲಿ ನೀಡಿದ್ದು ಹೇಗೆ ಪ್ರಶ್ನಿಸಿದ ಅವರು, ಪ.ಪಂ ವತಿ ಯಿಂದ ಕ್ರೀಡೆಗೆ ಮೈದಾನ ಜೊತೆಗೆ ಬಯಲು ರಂಗ ಮಂಟಪ ಆಗಬೇಕು. ಪೈಪ್ ಲೈನ್ ಕಾಮಗಾರಿ ಪೂರ್ಣ ಆಗಬೇಕು ಎಂದು ಆಗ್ರಹ ವ್ಯಕ್ತಪಡಿಸಿದರು.
ಸರಕಾರಿ ಜಾಗ: ಕೋಟೆಕಾರ್ ಗ್ರಾಮ ದಲ್ಲಿರುವ ಸರಕಾರಿ ಜಾಗ ಎಷ್ಟಿದೆ ಎಂದು ಸರ್ವೆ ಮಾಡಿ ಆರ್ ಟಿಸಿ ತೆಗೆಯಲು ಆರು ತಿಂಗಳ ಹಿಂದೆ ಹೇಳಿದ್ದೇವೆ,ಈ ಕೆಲಸ ಆಗಿದೆಯಾ ಎಂದು ಕೌನ್ಸಿಲರ್ ಸುಜಿತ್ ಮಾಡೂರು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಮಾಲಿನಿ ಅವರು 21-11-2024 ರಂದು ಈ ಬಗ್ಗೆ ತಹಶೀಲ್ದಾರ್ ಪುಟ್ಟರಾಜು ಅವರ ಗಮನಕ್ಕೆ ತಂದಿದ್ದೇವೆ ಎಂದರು.
ಶಾಸಕರ ಭೇಟಿ: ಕುಡಿಯುವ ನೀರಿಗೆ ಅನುದಾನ, ಸದಸ್ಯರ ತಿಂಗಳ ಭತ್ಯೆ ಹೆಚ್ಚಳ ಹಾಗೂ ಅಭಿವೃದ್ಧಿ ಕಾಮಗಾರಿ ಗೆ ಸಂಬಂಧಿಸಿ ಶಾಸಕ ಯುಟಿ ಖಾದರ್ ಅವರನ್ನು ಭೇಟಿ ಮಾಡಲು ಕಳೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.ಆದರೆ ಈವರೆಗೆ ಭೇಟಿ ಆಗಿಲ್ಲ ಎಂದು ಸುಜಿತ್ ಮಾಡೂರು ಹೇಳಿದರು.
ಈ ವೇಳೆ ಅಹ್ಮದ್ ಅಜ್ಜಿನಡ್ಕ ಅವರು ಸ್ಪೀಕರ್ ಯುಟಿ ಖಾದರ್ ಬ್ಯುಸಿ ಇರುತ್ತಾರೆ.ಅವರು ಉಳ್ಳಾಲ ತಾಲೂಕು ವ್ಯಾಪ್ತಿಗೆ ಬಂದಾಗ ಅವರನ್ನು ಭೇಟಿ ಮಾಡೋಣ ಎಂದರು.
ಹಿಂದೂ ರುದ್ರ ಭೂಮಿ: ಮಾಡೂರು ಹಿಂದೂ ರುದ್ರ ಭೂಮಿ ಯಲ್ಲಿರುವ ವಿಶ್ರಾಂತಿ ಕೊಠಡಿ ವಿಸ್ತರಣೆ, ದಾಸ್ತಾನು ಕೊಠಡಿ ನಿರ್ಮಿಸುವ ಬಗ್ಗೆ ಕಳೆದ ಸಭೆಯಲ್ಲಿ ನಿರ್ಣಯಿಸಲಾಗಿತ್ತು.ಆದರೆ ಈವರೆಗೆ ಯಾಕೆ ಆಗಿಲ್ಲ ಎಂದು ಧೀರಜ್ ಪ್ರಶ್ನಿಸಿದರು.
ಈ ವೇಳೆ ಪ.ಪಂ.ಕಿರಿಯ ಅಭಿಯಂತರ ದಿನೇಶ್ ಅವರು ಇದಕ್ಕೆ ಅಂದಾಜು 8.80 ಲಕ್ಷ ಬೇಕು. ಈ ಕಾರಣದಿಂದ ಬಾಕಿಯಾಗಿದೆ ಎಂದು ಸಭೆಗೆ ತಿಳಿಸಿದರು.
ಖಾಯಂ ಅಭಿಯಂತರ ಬೇಕು: ಕೋಟೆಕಾರ್ ಪಟ್ಟಣ ಪಂಚಾಯತ್ ನ ಕಿರಿಯ ಅಭಿಯಂತರ ದಿನೇಶ್ ಅವರನ್ನು ವಾರದಲ್ಲಿ ಮೂರು ದಿನ ಉಳ್ಳಾಲ ನಗರ ಸಭೆ ಗೆ ನಿಯೋಜನೆ ಮಾಡಿರುವುದನ್ನು ರದ್ದು ಪಡಿಸ ಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಗೆ ಪತ್ರ ಬರೆಯಲು ನಿರ್ಣಯಿಸಲಾಗಿತ್ತು. ಇದು ಯಾಕೆ ಆಗಿಲ್ಲ ಎಂದು ಸುಜಿತ್ ಮಾಡೂರು ಪ್ರಶ್ನಿಸಿದರು.
ಈ ವೇಳೆ ಮಾತನಾಡಿದ ಅಧ್ಯಕ್ಷ ದಿವ್ಯ ಸತೀಶ್ ಅವರು ಉಳ್ಳಾಲ ಉರೂಸ್ ಮುಗಿಯುವವರೆಗೆ ಅವರು ಉಳ್ಳಾಲ ದಲ್ಲಿ ಇರುತ್ತಾರೆ.ಇದರ ಬಳಿಕ ಕೋಟೆಕಾರ್ ಪಟ್ಟಣ ಪಂಚಾಯತ್ ನಲ್ಲಿ ಖಾಯಂ ಆಗಿ ಕೆಲಸ ಮಾಡಲಿದ್ದಾರೆ ಎಂದರು.
ಕುಡಿಯುವ ನೀರು: ಬಹು ನೀರಾವರಿ ಕುಡಿಯುವ ನೀರಿನ ಯೋಜನೆ ಆಗಿಲ್ಲ, ಪೈಪ್ ಲೈನ್ ಕಾಮಗಾರಿ ಕೆಲವು ಕಡೆ ಬಾಕಿ ಇವೆ.ಮಳೆಗಾಲ ಬರುವ ಸಮಯ ಹತ್ತಿರವಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಚರಂಡಿಯ ಹೂಳೆತ್ತುವ,ಕಸ, ಹುಲ್ಲು ಕಡ್ಡಿ ತೆಗೆಯುವ ಕೆಲಸ ಆಗಬೇಕು ಎಂದು ಅಹ್ಮದ್ ಅಜ್ಜಿನಡ್ಕ ಅವರು ಅಧ್ಯಕ್ಷರ ಗಮನ ಸೆಳೆದರು.
ಸಭೆಯಲ್ಲಿ ಉಪಾಧ್ಯಕ್ಷ ಪ್ರವೀಣ್, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.