ಮನಪಾ, ರಾ.ಹೆ.ಇಲಾಖೆಯಿಂದ ಆದಿವಾಸಿ ಕೊರಗ ಸಮುದಾಯಕ್ಕೆ ಅನ್ಯಾಯ: ಡಾ. ಕೃಷ್ಣಪ್ಪ ಕೊಂಚಾಡಿ

ಮಂಗಳೂರು: ಸಾಣೂರು ಬಿಕರ್ಣಕಟ್ಟೆ ಹೆದ್ದಾರಿ ಅಗಲೀಕರಣಕ್ಕಾಗಿ ವಾಮಂಜೂರಿನ ಮಂಗಳ ಜ್ಯೋತಿಯಲ್ಲಿ ನೂರಾರು ವರ್ಷಗಳಿಂದ ವಾಸವಾಗಿರುವ ಕೊರಗ ಸಮುದಾಯದ ಕುಟುಂಬಗಳನ್ನು ಬೀದಿಗೆ ತಳ್ಳುವ ಮಹಾನಗರ ಪಾಲಿಕೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಧೋರಣೆ ಅಮಾನುಷ ಮತ್ತು ತೀವ್ರ ಖಂಡನಿಯ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಡಾ. ಕೃಷ್ಣಪ್ಪಕೊಂಚಾಡಿ ಹೇಳಿದರು.
ಮನಪಾ ಅಧಿಕಾರಿಗಳು ನೀಡಿದ ಭರವಸೆಯನ್ನು ಮರೆತು ಬುಲ್ಡೋಜರ್ ಕಾರ್ಯಾಚರಣೆ ನಡೆಸಲು ಮುಂದಾಗಿರುವ ಮತ್ತು ಹೆದ್ದಾರಿ ಇಲಾಖೆಯ ಅಧಿಕಾರಿಗಳ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಮಂಗಳೂರು ಮಹಾನಗರ ಪಾಲಿಕೆಯ ಮುಂದೆ ಮಂಗಳವಾರ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕೇವಲ ಕೊರಗಜ್ಜ ಗುಡಿಗೆ ಮಾತ್ರ ನೋಟಿಸು ನೀಡಿ ಜುಜುಬಿ 5 ಲಕ್ಷ ರೂ.ಪರಿಹಾರವನ್ನು ಘೋಷಿಸಿರುವ ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಉಳಿದಂತೆ ಅಲ್ಲಿ 70 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ವಾಸಿಸು ತ್ತಿರುವ ಕೊರಗ ಕುಟುಂಬಗಳಿಗೆ ಯಾವುದೇ ನೋಟಿಸು, ಪರ್ಯಾಯ ವ್ಯವಸ್ಥೆ, ಪರಿಹಾರವನ್ನು ನೀಡದೆ, ಏಕಾಏಕಿ ಬುಲ್ಡೋಜರ್ ಕಾರ್ಯಾಚರಣೆಯನ್ನು ನಡೆಸಲು ಮುಂದಾಗಿರುವುದನ್ನು ಅವರು ಖಂಡಿಸಿದರು.
ಸ್ಥಳೀಯ ಘಟಕದ ಅಧ್ಯಕ್ಷ ಕರಿಯ. ಕೆ ಮಾತನಾಡಿ ಕಮಿಷನರ್ ಮತ್ತು ಹೆದ್ದಾರಿ ಇಲಾಖೆ ಕೊಟ್ಟ ಮಾತಿಗೆ ವ್ಯತಿರಿಕ್ತವಾಗಿ ಮನೆ ಉರುಳಿಸಲು ಬುಲ್ಡೋಜರ್ ಕಳುಹಿಸಿದೆ. ಬುಲ್ಡೋಜರ್ ಎಂಬುದು ಜಾಗತಿಕವಾಗಿ ಅನ್ಯಾಯ, ದೌರ್ಜನ್ಯ, ದಬ್ಬಾಳಿಕೆಗಳ ಸಂಕೇತವಾಗಿದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆದ್ದಾರಿ ಇಲಾಖೆ ಅಧಿಕಾರಿಗಳು ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿದರು.
ಸಾಮಾಜಿಕ ಹೋರಾಟಗಾರ ಸುನಿಲ್ ಕುಮಾರ್ ಬಜಾಲ್, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಮಿತಿ ಸದಸ್ಯ ಕೃಷ್ಣ ಇನ್ನಾ, ಸಿಐಟಿಯು ದ.ಕ. ಜಿಲ್ಲಾ ಮುಖಂಡ ವಸಂತ ಆಚಾರಿ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಕೆ. ಯಾದವ ಶೆಟ್ಟಿ ಮಾತನಾಡಿದರು.
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಮಾರ್ಗದರ್ಶಕ ಯೋಗೀಶ್ ಜಪ್ಪಿನ ಮೊಗರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಟನೆಯ ನೇತೃತ್ವವನ್ನು ಸಂಘಟನೆಯ ಜಿಲ್ಲಾ ಕೋರ್ ಗ್ರೂಪ್‌ನ ಸದಸ್ಯರಾದ ರವೀಂದ್ರ ವಾಮಂಜೂರು, ವಿಕಾಸ್, ಮಂಜುಳಾ, ಶೇಖರ ವಾಮಂಜೂರು, ಜಯಮಧ್ಯ, ಪೂರ್ಣೇಶ್, ತುಳಸಿ, ದಿನೇಶ್, ಕೃಷ್ಣ ಕತ್ತಲ್‌ಸಾರ್, ವಿನೋದ್, ಪುನೀತ್, ಲಿಖಿತ್, ವಿಘ್ನೇಶ್ ವಹಿಸಿದ್ದರು.