ದಲಿತ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಯ ಶೀಘ್ರ ಬಂಧನಕ್ಕೆ ಒತ್ತಾಯ

ಮಂಗಳೂರು: ಬಂಟ್ವಾಳ ತಾಲೂಕಿನ ವಿಟ್ಲ ಮಾಣಿಲ ಗ್ರಾಮದ ಮುರುವದಲ್ಲಿ ದಲಿತ ವಿದ್ಯಾರ್ಥಿನಿ ಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಮಹೇಶ್ ಭಟ್ ಎಂಬಾತನನ್ನು ಬಂಧಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಪ್ರೊ.ಕೃಷ್ಣಪ್ಪ ಬಣ ಆಗ್ರಹಿಸಿದೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರಿ ಅವರು ಲೈಂಗಿಕ ಕಿರುಕುಳ ನೀಡಿ ಜಾತಿ ನಿಂದನೆ ಎಸಗಿರುವ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಫೋಕ್ಸೊ ಸೆಕ್ಷನ್ ಹಾಗೂ ದಲಿತ ದೌರ್ಜನ್ಯ ಕಾಯಿದೆಯ ಅನ್ವಯ ಪ್ರಕರಣ ದಾಖಲಾಗಿದ್ದರೂ ಕೂಡ ಪೊಲೀಸ್ ಇಲಾಖೆ ಈ ಕುರಿತು ಕ್ರಮ ಜರುಗಿಸದೇ ಇರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದರು.
ಆರೋಪಿ ರಾಜಕೀಯ ಹಾಗೂ ಸಾಮಾಜಿಕವಾಗಿ ಪ್ರಬಲ ವ್ಯಕ್ತಿಯಾಗಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಲಾದರೂ ಕೂಡ ಪೊಲೀಸರು ಆರೋಪಿಯನ್ನು ಬಂಧಿಸುವ ಕೆಲಸಕ್ಕೆ ಮುಂದಾಗಿಲ್ಲ. ಒಂದೇ ಒಂದು ಬಾರಿ ಆರೋಪಿಯ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಈ ಕುರಿತು ದ.ಕ. ಎಸ್‌ಪಿಯ ಗಮನಕ್ಕೂ ತರಲಾಗಿದೆ ಎಂದು ಮಾಹಿತಿ ನೀಡಿದರು.
ಆರೋಪಿಯು ಬಾಲಕಿಗೆ ಬೆದರಿಕೆ ಹಾಕಿದ್ದಾನೆ .ಇದರಿಂದಾಗಿ ಮಾನಸಿಕವಾಗಿ ವಿದ್ಯಾರ್ಥಿನಿ ಕುಗ್ಗಿ ಹೋಗಿದ್ದಾಳೆ. ಪ್ರಕರಣ ದಾಖಲಾಗಿ ಒಂದು ವಾರವಾದರೂ ಗಂಭೀರ ಪ್ರಕರಣವೆಂದು ಪೊಲೀಸ್ ಇಲಾಖೆ ಪರಿಗಣಿಸಿಲ್ಲ ಎಂದು ಆರೋಪಿಸಿದರು.
ಆರೋಪಿಯ ಪರ ಪೊಲೀಸ್ ಇಲಾಖೆ ಸಹಕಾರ ನೀಡುತ್ತಿರುವುದು ಖಂಡನೀಯ. ಆರೋಪಿಯನ್ನು ತಕ್ಷಣ ಬಂಧಿಸದೆ ಇದ್ದರೆ ಮುಂದಿನ ದಿನಗಳಲ್ಲಿ ಪ್ರಬಲ ಪ್ರತಿಭಟನೆ ನಡೆಸಲು ಸಮಿತಿ ನಿರ್ಧಾರ ಮಾಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ಸಂಘಟನಾ ಸಂಚಾ ಲಕ ಕೃಷ್ಣಾನಂದ ಡಿ, ಖಜಾಂಚಿ ನಾಗೇಶ್ ಚಿಲಿಂಬಿ, ದಲಿತ ಕಲಾ ಮಂಡಳಿಯ ಕಮಲಾಕ್ಷ ಬಜಾಲ್, ಮಂಗಳೂರು ತಾಲೂಕು ಸಂಚಾಲಕ ರಾಘವೇಂದ್ರ ಎಸ್ ಪೇಜಾವರ, ಮಂಗಳೂರು ಸಂಘಟನಾ ಸಂಚಾಲಕ ರುಕ್ಕಯ್ಯ ಕರಂಬಾರು ಉಪಸ್ಥಿತರಿದ್ದರು.