ವಿದ್ಯಾರ್ಥಿ ನ್ಯಾಯ ಯಾತ್ರೆ - ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಎನ್ಎಸ್ಯುಐ ಹೋರಾಟ

ಮಂಗಳೂರು, ಎ.2: ರಾಜ್ಯದಲ್ಲಿ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಎನ್ಎಸ್ಯುಐ ನೇತೃತ್ವದಲ್ಲಿ ಕೈಗೊಳ್ಳಲಾದ ವಿದ್ಯಾರ್ಥಿ ನ್ಯಾಯ ಯಾತ್ರೆಗೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ ದೊರಕಿದೆ ಎಂದು ಎನ್ಎಸ್ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ವಿತ್ ಕಟೀಲ್ ತಿಳಿಸಿದ್ದಾರೆ.
ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎನ್ಎಸ್ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ನೇತೃತ್ವದಲ್ಲಿ ಮಾರ್ಚ್ 17ರಂದು ಆರಂಭಗೊಂಡ ವಿದ್ಯಾರ್ಥಿ ನ್ಯಾಯಯಾತ್ರೆಯು ಎ.17ರಂದು ಕೊನೆಗೊಳ್ಳಲಿದೆ. ಒಂದು ತಿಂಗಳ ಅವಧಿಯ ನ್ಯಾಯ ಯಾತ್ರೆಯಲ್ಲಿ ರಾಜ್ಯದ 35 ವಿಶ್ವವಿದ್ಯಾನಿಲಯಗಳ 22 ಲಕ್ಷ ವಿದ್ಯಾರ್ಥಿಗಳಿಗೆ ಧ್ವನಿಯಾಗಲಿದೆ ಎಂದರು.
ಸಮಾನ ಶಿಕ್ಷಣ , ಪ್ರಾಮಾಣಿಕ ವಿದ್ಯಾರ್ಥಿ ನೀತಿಗಳು , ಆರ್ಥಿಕ ನೆರವು, ಕೌಶಲ್ಯ ವಿಕಾಸ ಮತ್ತು ಭದ್ರತಾ ಉದ್ಯೋಗ ಅವಕಾಶಗಳು ನಮ್ಮ ಗುರಿಯಾಗಿದೆ ಎಂದು ಹೇಳಿದರು.
ನ್ಯಾಯಯಾತ್ರೆಯಲ್ಲಿ ವಿದ್ಯಾರ್ಥಿಗಳನ್ನು ಭೇಟಿಯಾಗಿ ಅವರು ಎದುರಿಸುತ್ತಿರುವ ಶೈಕ್ಷಣಿಕ ಸಮಸ್ಯೆಗಳ ಮಾಹಿತಿಯನ್ನು ಪಡೆಯಲಾಗುವುದು ಎಂದರು.
ವಿದ್ಯಾರ್ಥಿಗಳ ಹಿತಕ್ಕಾಗಿ ಈಗಾಗಲೇ 25 ಅಜೆಂಡಾವನ್ನು ಸಿದ್ಧಪಡಿಸಲಾಗಿದೆ. ಉನ್ನತ ಶಿಕ್ಷಣ ಸಚಿವರಿಗೆ ಈ ಇದರ ಬಗ್ಗೆ ತಿಳಿಸಲಾಗಿದೆ. ಪದವಿ ತರಗತಿಗಳಲ್ಲಿ ಈಗಿರುವ ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆ ಯಾಗಬೇಕಾಗಿದೆ. ಸೆಮಿಸ್ಟರ್ ವ್ಯವಸ್ಥೆಯಲ್ಲಿ ಸಮಸ್ಯೆ ಇದೆ. ಇದನ್ನು ಸರಿಪಡಿಸಬೇಕಾಗಿದೆ. ವಿದ್ಯಾರ್ಥಿ ವೇತನ ಸರಿಯಾಗಿ ವಿದ್ಯಾರ್ಥಿಗಳಿಗೆ ತಲುಪುತ್ತಿಲ್ಲ. ಹಾಸ್ಟೆಲ್ ವ್ಯವಸ್ಥೆಯ ಸುಧಾರಣೆ, ವೃತ್ತಿ ಮಾರ್ಗ ದರ್ಶನ ಮತ್ತು ಉದ್ಯೋಗಾವಕಾಶಗಳ ಹೆಚ್ಚಳ, ಡ್ರಗ್ಸ್ಮತ್ತು ರ್ಯಾಗಿಂಗ್ ಪಿಡುಗು ನಿರ್ಮೂಲನೆ, ವಿದ್ಯಾರ್ಥಿನಿಯರ ಸುರಕ್ಷತೆಗೆ ಯೋಜನೆ, ಸರಕಾರಿ ವಿದ್ಯಾ ಸಂಸ್ಥೆಗಳ ಬಲವರ್ಧನೆ, ಕರ್ನಾಟಕ ವಿದ್ಯಾರ್ಥಿ ಹಿತ ಮಸೂದೆ ಜಾರಿಯಾಗಬೇಕು, ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಗಟ್ಟುವಿಕೆ ಪ್ರಧಾನ ವಿಚಾರಗಳಾಗಿವೆ ಎಂದು ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಸಮಸ್ಯೆಗಳನ್ನು ತಿಳಿಸಲು ವಿದ್ಯಾರ್ಥಿ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಸಹಾಯವಾಣಿ (7400840069) ಮೂಲಕ ವಿದ್ಯಾರ್ಥಿಗಳು ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿದ್ದಾರೆ.
ಡ್ರಗ್ಸ್ ಚಟಕ್ಕೆ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಹಾಸ್ಟೆಲ್, ಪಿಜಿಯಲ್ಲಿ ಇರುವವರು ಹೆಚ್ಚಾಗಿ ಡ್ರಗ್ಸ್ ಸೇವನೆ ಚಟ ಅಂಟಿಕೊಂಡಿದ್ದಾರೆ. ಬೇರೆ ಬೇರೆ ರಾಜ್ಯಗಳ ವಿದ್ಯಾರ್ಥಿಗಳಿಂದ ಡ್ರಗ್ಸ್ ಪ್ರಭಾವ ಜಾಸ್ತಿ ಯಾಗುತ್ತಿದೆ. ರ್ಯಾಗಿಂಗ್ ತಡೆಗಟ್ಟಲು ಎನ್ಎಸ್ಯುಐ ವತಿಯಿಂದ ರ್ಯಾಗಿಂಗ್ ನಿಗ್ರಹ ಘಟಕ ರಚನೆಯಾಗಲಿದೆ ಎಂದರು.
ವಿದ್ಯಾರ್ಥಿಗಳಿಗೆ ಭೌತಿಕ ಅಂಕಪಟ್ಟಿಯನ್ನು ಒದಗಿಸಬೇಕು. ಈ ನಿಟ್ಟಿನಲ್ಲಿ ವಿವಿಧ ವಿವಿಯ ಕುಲಪತಿ ಯವರಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎನ್ಎಸ್ಯುಐ ರಾಷ್ಟ್ರೀಯ ಸಂಯೋಜಕ ಹೃತಿಕ್ ರವಿ, ಪ್ರಧಾನ ಕಾರ್ಯದರ್ಶಿ ಮನೀಶ್ ರಾಜ್, ಶಿವಕುಮಾರ್, ದ.ಕ.ಜಿಲ್ಲಾ ಎನ್ಎಸ್ಯು ಐ ಅಧ್ಯಕ್ಷ ಸುಹಾನ್ ಆಳ್ವ, ಪ್ರಮುಖರಾದ ಸುಖಾಲಿಂದರ್ ಸಿಂಗ್, ಸಫ್ವಾನ್ ಕುದ್ರೋಳಿ, ಸೊಹಾನ್ ಜೋಶ್ವ ರೆಗೊ, ಸಾಹಿಲ್ ಮಂಚಿಲ, ಫಾರೂಕ್ ಮೊದಲಾದವರು ಉಪಸ್ಥಿತರಿದ್ದರು