ಅಮೃತ್ ಯೋಜನೆ ಕಾಮಗಾರಿಗಳಿಂದ ಗೊಂದಲ ನಿವಾರಣೆಗೆ ಟಾಸ್ಕ್ ಫೋರ್ಸ್ ರಚಿಸಿ: ಸ್ಪೀಕರ್ ಯು.ಟಿ.ಖಾದರ್ ಸೂಚನೆ

ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಅಮೃತ್ 2.0 ಪೈಪ್ ಲೈನ್ ಕಾಮಗಾರಿ ಯಿಂದಾಗಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಸರಿದೂಗಿಸಲು, ನೀರಾವರಿ ಇಲಾಖೆ ಹಾಗೂ ಪಟ್ಟಣ ಪಂಚಾಯತ್ ಅಧಿಕಾರಿಗಳು ಟಾಸ್ಕ್ ಫೋರ್ಸ್ ರಚಿಸಿ ತಿಂಗಳಿಗೊಂದು ಸಭೆಯನ್ನು ಕಡ್ಡಾಯ ನಡೆಸಬೇಕು. ಕೋಟೆಕಾರು ಆಯಾಯ ವಾರ್ಡುಗಳಿಗೆ ಭೇಟಿ ನೀಡಿ ಕೌನ್ಸಿಲರುಗಳೊಂದಿಗೆ ಸಮಾಲೋಚಿಸಿ ಕಾಮಗಾರಿಗಳನ್ನು ನಡೆಸಬೇಕು ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಕೋಟೆಕಾರು ಪಟ್ಟಣ ಪಂಚಾಯತ್ ನಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿ ಬುಧವಾರ ನಡೆಸಿದ ಕುಂದು ಕೊರತೆಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಸ್ತೆಗಳನ್ನು ಅಗೆದರೆ ಅದನ್ನು ಶೀಘ್ರವೇ ದುರಸ್ತಿಗೊಳಿಸಬೇಕು. ಜನಪ್ರತಿನಿಧಿಗಳ ದೂರವಾಣಿ ಕರೆಗಳಿಗೆ ಸ್ಪಂಧಿಸಬೇಕು. ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಕಾಮಗಾರಿಗಳನ್ನು ನಡೆಸಬೇಕಿದೆ. ಹಲವು ವಾರ್ಡು ಗಳಲ್ಲಿ ಕೆಲ ಮನೆಗಳನ್ನು ಬಿಟ್ಟು ಪೈಪ್ ಲೈನ್ ಹಾಕಲಾಗಿದೆ. ಇದನ್ನು ಆಯಾಯ ವಾರ್ಡುಗಳ ಕೌನ್ಸಿಲರ್ ಗಳ ಜೊತೆಗೆ ಚರ್ಚಿಸಿ ಪ್ರತಿಯೊಂದು ಮನೆಗೂ ನೀರಿನ ಹಕ್ಕು ಒದಗಿಸಬೇಕಾಗಿರುವುದು ಸ್ಥಳೀಯ ಆಡಳಿತ ಹಾಗೂ ನೀರಾವರಿ ಇಲಾಖೆಯವರ ಜವಾಬ್ದಾರಿಯಾಗಿದೆ. ಯಾವುದೇ ಮನೆಯನ್ನು ಕಡೆಗಣಿ ಸದ ರೀತಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವಂತೆಯೂ, ತುರ್ತಾಗಿ ಗೊಂದಲಗಳನ್ನು ಪರಿಹರಿಸುವ ಉದ್ದೇಶದಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿಕೊಂಡು ನೀರಿನ ವಿಚಾರಕ್ಕೆ ಸಂಬಂಧಿಸಿ ಟಾಸ್ಕ್ ಫೋರ್ಸ್ ರಚಿಸಿಕೊಂಡು ತಿಂಗಳಿಗೆ ಪರಿಶೀಲನಾ ಸಭೆಯನ್ನು ರಚಿಸಬೇಕು ಎಂದು ತಿಳಿಸಿದರು.
ಕುಡಿಯುವ ನೀರಿನ ಕಾಮಗಾರಿಯಲ್ಲಿ ಏನಾದರೂ ಎಡವಟ್ಟು ಆದಲ್ಲಿ ಅದಕ್ಕೆ ಇಂಜಿನಿಯರ್ ಜವಾಬ್ದಾರಿ. ಕಾಟಾಚಾರಕ್ಕೆ ಸುಪರ್ ವೈಸರ್ ಗಳನ್ನು ನೇಮಕ ಮಾಡಬೇಡಿ. ಜವಾಬ್ದಾರಿ ಯುತ ಕೆಲಸ ಮಾಡುವ ಸುಪರ್ ವೈಸರ್ ಗಳನ್ನು ಮಾತ್ರ ಜತೆಗಿಟ್ಟುಕೊಳ್ಳಿ. ಗುತ್ತಿಗೆ ವಹಿಸಿಕೊಂಡವರು, ಸುಪರ್ ವೈಸರ್ ಗಳಿಂದ ಎಡವಟ್ಟು ಆದಲ್ಲಿ ಅದಕ್ಕೆ ಇಂಜಿನಿಯರ್ ಜವಾಬ್ದಾರರು ಎಂದು ಎಚ್ಚರಿಕೆ ನೀಡಿದರು.
ಪೈಪ್ ಲೈನ್ ಕಾಮಗಾರಿ ಅವ್ಯವಸ್ಥೆ ಬಗ್ಗೆ ಕೌನ್ಸಿಲರ್ ಗಳು ನೀಡಿದ ದೂರನ್ನು ಆಲಿಸಿದ ಸ್ಪೀಕರ್ ಯುಟಿ ಖಾದರ್ ಅವರು, ಇನ್ನೂ ಯಾವುದೇ ದೂರು ಕುಡಿಯುವ ನೀರಿಗೆ ಸಂಬಂಧಿಸಿ ಬರಬಾರದು. ಪೈಪ್ ಲೈನ್ ಕಾಮಗಾರಿಗೆ ನಯಾ ಪೈಸೆ ವಸೂಲಿ ಮಾಡುವಂತಿಲ್ಲ. ಸಾರ್ವಜನಿಕರಿಂದ ವಸೂಲಿ ಮಾಡಿದ ಹಣ ವಾಪಸ್ ನೀಡಬೇಕು. ಡಾಮರು ಹೋದ ರಸ್ತೆಗೆ ಡಾಮರೀಕರಣ, ಕಾಂಕ್ರೀಟ್ ರಸ್ತೆ ಹಾಳಾದ ರಸ್ತೆಗೆ ಕಾಂಕ್ರೀಟೀಕರಣ ಮಾಡಿ ಸಮರ್ಪಕವಾಗಿ ಮುಚ್ಚುವಂತೆ ಸೂಚನೆ ನೀಡಿದರು.
ಇದೇ ವೇಳೆ ಅಧ್ಯಕ್ಷ ದಿವ್ಯ ಸತೀಶ್ ಅವರು ಪೈಪ್ ಲೈನ್ ಕಾಮಗಾರಿ ಮಾಡುವರು ಸಿಮೆಂಟ್, ಪೈಪ್ ನ ತುಂಡುಗಳನ್ನು, ಮಣ್ಣುಗಳನ್ನು ಚರಂಡಿಗೆ ಹಾಕುತ್ತಿದ್ದಾರೆ.ಇದರಿಂದ ಮಳೆಗಾಲದಲ್ಲಿ ನೀರು ಬ್ಲಾಕ್ ಆಗಿ ಸಮಸ್ಯೆ ಆಗುತ್ತದೆ.ಇದನ್ನು ಗಮನಿಸಿ ಚರಂಡಿಗೆ ಬಿದ್ದ ಸಿಮೆಂಟ್, ಮಣ್ಣನ್ನು ತೆರವು ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳ ಗಮನ ಸೆಳೆದರು.
ಗ್ರಾಮ ಪಂಚಾಯತ್ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆ ಗೆ ಏರಿದರೆ ಸಾಕಾಗದು. ಸವಲತ್ತುಗಳನ್ನು ಜನರ ಬಳಿ ತಲುಪಿಸಬೇಕು.ಪ್ರಥಮ ಹಂತದಲ್ಲಿ ಕುಡಿಯುವ ನೀರು ಸಮಸ್ಯೆ ಇತ್ಯರ್ಥ ಪಡಿಸುವಂತೆ ಸ್ಪೀಕರ್ ಯುಟಿ ಖಾದರ್ ಪ.ಪಂ.ಅಧಿಕಾರಿಗೆ ಕರೆ ನೀಡಿದರು
ತಿಂಗಳ ಭತ್ಯೆ ಹೆಚ್ಚಿಸಿ: ಗ್ರಾಪಂ ಸದಸ್ಯ ರಿಗೂ ಮಾಸಿಕ ಭತ್ಯೆ ಎರಡು ಸಾವಿರ ಸಿಗುತ್ತದೆ.ನಮಗೆ ಮಾಸಿಕ ಭತ್ಯೆ ಸಿಗುವುದು ಕೇವಲ 800 ಮಾತ್ರ.ಇದನ್ನು ಹೆಚ್ಚಳ ಮಾಡಬೇಕು ಎಂದು ಸದಸ್ಯರು ಈ ಸಂದರ್ಭದಲ್ಲಿ ಆಗ್ರಹಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಯುಟಿ ಖಾದರ್ ಅವರು ಈ ಬಗ್ಗೆ ಸಂಬಂಧ ಪಟ್ಟ ಸಚಿವರ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ, ಮುಖ್ಯಾಧಿಕಾರಿ ಮಾಲಿನಿ, ಉಪಾಧ್ಯಕ್ಷ ಪ್ರವೀಣ್ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಸೊಳ್ಳೆಂಜೀರು ಉಪಸ್ಥಿತರಿದ್ದರು.
ವಾಟರ್ ಬೋರ್ಡ್ ಎಇಇ ಅಜೆಯ್ ಸಮಸ್ಯೆಗಳನ್ನು ಆಲಿಸಿದರು.