ಕಾವೂರು ರಿಕ್ಷಾ ಚಾಲಕನ ಅಸಹಜ ಸಾವಿನ ಸಿಒಡಿ ತನಿಖೆಗೆ ಆಗ್ರಹ

ಮಂಗಳೂರು, ಎ.2: ಕಾವೂರಿನಲ್ಲಿ ಮಾ.14ರಂದು ರಿಕ್ಷಾ ಚಾಲಕ ರಾಧಾಕೃಷ್ಣ (ಬಾಬಾ) ಎಂಬವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವನ್ನು ಸಿಒಡಿ ತನಿಖೆಗೆ ಒಳಪಡಿಸುವಂತೆ ರಾಧಾಕೃಷ್ಣ ಅವರ ಸೋದರಿಯರಾದ ರಾಧಾದಾಸ್ ಮತ್ತು ಜಯಂತಿ ಸರಕಾರವನ್ನು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು ರಾಧಾಕೃಷ್ಣ ಅವರು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಈ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿತ್ತು.
ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಆತನ ಲಿವರ್, ಕಿಡ್ನಿ,ಹೃದಯ ಚೆನ್ನಾಗಿತ್ತು ಎಂದು ಹೇಳಿದ್ದಾರೆ. ವರ್ಷದ ಹಿಂದೆ ರಾಧಾಕೃಷ್ಣ ನಿಗೆ ಅಮಿತ ಜೋಗಿ ಎಂಬವರ ಪರಿಚಯ ಆಗಿದ್ದು, ಆಕೆ ಅವನಿಗೆ ಬೆದರಿಕೆ ಹಾಕಿ ಹಾರ ಬದಲಾಯಿಸಿಕೊಂಡಿದ್ದಾಳೆ. ರಿಜಿಸ್ಟರ್ಡ್ ಅಥವಾ ಸಂಪ್ರಾದಾಯಿಕ ಮದುವೆಯಾಗಲಿ ಇವರೊಂದಿಗೆ ಆಗಿಲ್ಲ ಎಂದು ರಾಧಾದಾಸ್ ಅವರು ಕಾವೂರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ತನ್ನ ತಮ್ಮನಲ್ಲಿ 8 ಲಕ್ಷ ರೂ. ಮೊತ್ತದ ಎಲ್‌ಐಸಿ ಬಾಂಡ್ ಇದ್ದು, ಅದರಲ್ಲಿ ಮಹಿಳೆ ಅಮಿತ ಜೋಗಿ ತನ್ನ ನಾಮಿನಿ ಮಾಡಿಸಿದ್ದಾಳೆ. ತಾನು ತಮ್ಮನಿಗೆ 80 ಸಾವಿರ ರೂ.ನಗದು, 3 ಲಕ್ಷ ಬ್ಯಾಂಕ್‌ನಿಂದ ಸಾಲ ಪಡೆದು ಇಲೆಕ್ಟ್ರಿಕ್ ರಿಕ್ಷಾ ತೆಗೆದುಕೊಟ್ಟಿದ್ದು, ಅದಕ್ಕೂ ಆತನ ಪತ್ನಿ ಎಂದು ಹೇಳಿಕೊಳ್ಳುವ ಅಮಿತ ಜೋಗಿ ನಾಮಿನಿ ಮಾಡಿದ್ದಲ್ಲದೆ, ತಮ್ಮ ಮರಣದ ಬಳಿಕ ಆ ರಿಕ್ಷಾವನ್ನು ಆಕೆ ವಶಕ್ಕೆ ತೆಗೆದುಕೊಂಡಿದ್ದಾಳೆ ಎಂದು ಸೋದರಿ ಜಯಂತಿ ಆರೋಪಿಸಿದರು. ಅಮಿತ ಜೋಗಿ ವಿರುದ್ಧ ಕಾವೂರು ಪೊಲೀಸರಿಗೆ ದೂರು ನೀಡಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದರು.
ಸುದ್ದಿಗೋಷ್ಠಿಯಲ್ಲಿ ನಿವೃತ್ತ ಶಿಕ್ಷಕಿ ತಿಲೋತ್ತಮ ನಾಯಕ್, ನಿತ್ಯಾನಂದ ಉಪಸ್ಥಿತರಿದ್ದರು.