ಎಸೆಸ್ಸೆಲ್ಸಿ ಪರೀಕ್ಷೆಗೆ ಅವಕಾಶ ನಿರಾಕರಣೆ ಪ್ರಕರಣ: ಇಬ್ಬರು ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರು

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಪದ್ಮುಂಜ ಸರಕಾರಿ ಪ್ರೌಢಶಾಲೆಯಲ್ಲಿ ಈ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಿಂದ 2 ಹೆಣ್ಣುಮಕ್ಕಳಿಗೆ ಕಲಿಕೆಯಲ್ಲಿ ಹಿಂದುಳಿದಿದ್ದಾರೆಂಬ ಕಾರಣಕ್ಕೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ ಎಂಬ ಪ್ರಕರಣದ ವಿದ್ಯಾರ್ಥಿನಿಯರು ಬುಧವಾರ ಪರೀಕ್ಷೆಗೆ ಹಾಜರಾಗಿದ್ದಾರೆ.
ಶೇಕಡಾ ನೂರು ಫಲಿತಾಂಶದ ಕಾರಣಕ್ಕೆ ಕಲಿಕೆಯಲ್ಲಿ ಹಿಂದುಳಿದಿರುವ ತಮಗೆ ಅವಕಾಶ ನಿರಾಕರಿಸ ಲಾಗಿದೆ ಎಂದು ದೂರು ನೀಡಿರುವ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ವಿದ್ಯಾರ್ಥಿನಿಯರಿಬ್ಬರಿಗೂ ಪ್ರವೇಶ ಪತ್ರವನ್ನು ಒದಗಿಸಿದ್ದರು. ಆ ಬಳಿಕವೂ ವಿದ್ಯಾರ್ಥಿ ನಿಯರು ಪರೀಕ್ಷೆ ಬರೆಯಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರನ್ನು ಸತತ ಮನವೊಲಿಸಿ ಬುಧವಾರ ಪರೀಕ್ಷೆ ಬರೆಯಲು ವಿನಂತಿಸಲಾಗಿತ್ತು. ಅದರಂತೆ ಕರಾಯ ಪ್ರೌಢ ಶಾಲೆಯಲ್ಲಿ ನಡೆದ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ವಿದ್ಯಾರ್ಥಿನಿಯರು ವಿಜ್ಞಾನ ಪರೀಕ್ಷೆಯನ್ನು ಬರೆದಿರುತ್ತಾರೆ. ಇನ್ನುಳಿದ ಒಂದು ಪರೀಕ್ಷೆಯನ್ನು ಬರೆದರೆ, ಈಗಾಗಲೇ ಪರೀಕ್ಷೆಗೆ ಹಾಜರಾಗದೆ ಉಳಿದ ನಾಲ್ಕು ಪರೀಕ್ಷೆಗಳನ್ನು ಮುಂದಿನ 2 ಹಂತಗಳಲ್ಲಿ ಬರೆಯಲು ಅವಕಾಶವಿರುತ್ತದೆ.
ಪ್ರಕರಣದ ಬಗ್ಗೆ ಬಂದ ದೂರನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಇಬ್ಬರು ವಿದ್ಯಾರ್ಥಿನಿಯರು ಬುಧವಾರ ವಿಜ್ಞಾನ ವಿಷಯದ ಪರೀಕ್ಷೆಯನ್ನು ಬರೆದಿದ್ದು, ಉಳಿದ ಒಂದು ಪರೀಕ್ಷೆಯನ್ನು ಮೊದಲ ಹಂತದಲ್ಲಿ ಬರೆದರೆ, ಬರೆಯದೆ ಉಳಿದ ನಾಲ್ಕು ಪಠ್ಯಗಳ ಪರೀಕ್ಷೆಗಳನ್ನು ಎರಡನೇ ಹಂತದಲ್ಲಿ ಬರೆಯಬಹುದಾಗಿದೆ. ಅದೆರಡು ಹಂತಗಳಲ್ಲೂ ತೃಪ್ತಿಕರ ಅಂಕ ಬಾರದಿದ್ದರೆ ಮೂರನೇ ಹಂತದ ಪರೀಕ್ಷೆಯನ್ನು ಬರೆಯಲು ಅವಕಾಶವಿದೆ. ಒಟ್ಟಾರೆ ಪದ್ಮುಂಜ ಸರಕಾರಿ ಪ್ರೌಢ ಶಾಲೆಯ ಪರೀಕ್ಷೆ ಬರೆಯದ ಪ್ರಕರಣವು ಪ್ರಸಕ್ತ ತನಿಖಾ ಹಂತದಲ್ಲಿದೆ ಎಂದು ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಶ್ವರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.