ಕ್ರಿಕೆಟ್ ಎಲ್ಲರನ್ನೂ ಒಗ್ಗೂಡಿಸುವ ಕ್ರೀಡೆ: ವಿದ್ವತ್ ಕಾವೇರಪ್ಪ
► 'ನಿಟ್ಟೆಫಿಸಿಯೋ ಪ್ರೀಮಿಯರ್ ಲೀಗ್ 2025' ಉದ್ಘಾಟನೆ ►ದಕ್ಷಿಣ ಭಾರತ ಅಂತರ್ ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾಟ

ಕೊಣಾಜೆ: ಕ್ರಿಕೆಟ್ ಎನ್ನುವುದು ಎಲ್ಲರನ್ನೂ ಒಗ್ಗೂಡಿಸುವ ಸಾಮರಸ್ಯದ ಕ್ರೀಡೆ. ಜೊತೆಗೆ ನಮ್ಮಲ್ಲಿ ಹೊಸ ಚೈತನ್ಯ, ಹೊಸ ಹೊಸ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ. ಶಿಸ್ತು ಮತ್ತು ಮೌಲ್ಯಗಳನ್ನು ಕಲಿಸುವ ಆಟವಾಗಿ ಕ್ರಿಕೆಟ್ ಹೊರಹೊಮ್ಮಿದ್ದು, ಇದರಲ್ಲಿ ಫಿಸಿಯೋಥೆರಪಿಗಳ ಪಾತ್ರ ಬಹುಮುಖ್ಯವಾಗಿದೆ. ತಮ್ಮ ಶ್ರಮಮೀರಿ ಮತ್ತೆ ಕ್ರೀಡಾ ಆಟಗಾರರು ಸ್ಪರ್ಧೆಗಳಲ್ಲಿ ಮುನ್ನುಗ್ಗುವಂತೆ ಪ್ರೋತ್ಸಾಹಿಸಿ, ಸ್ಪೂರ್ತಿಯಾಗು ತ್ತಾರೆ ಎಂದು ಭಾರತೀಯ ಕ್ರಿಕೆಟ್ ತಂಡದ ಆಟಗಾರ ವಿದ್ವತ್ ಕಾವೇರಪ್ಪ ಅವರು ಹೇಳಿದರು.
ಅವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ವಿಭಾಗದ ಆಶ್ರಯದಲ್ಲಿ ದಕ್ಷಿಣ ಭಾರತ ಅಂತರ್ ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾಟ ' ನಿಟ್ಟೆ ಫಿಸಿಯೋ ಪ್ರೀಮಿಯರ್ ಲೀಗ್ 2025' ಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ನಿಟ್ಟೆ ಪರಿಗಣಿತ ವಿವಿಯ ಕುಲಾಧಿಪತಿ ವಿನಯ್ ಹೆಗ್ಡೆ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕ್ರೀಡಾಳುಗಳಿಗೆ ಆರೋಗ್ಯದ ಸಲಹೆಯನ್ನು ನೀಡುತ್ತಾ ಸದಾ ಸ್ಫೂರ್ತಿಯಾಗಿ ಬೆನ್ನಿಗೆ ನಿಲ್ಲುವವರು ಫಿಸಿಯೋ ಥೆರಪಿಗಳು, ಆಟಗಾರರ ಸಂಧಿಗ್ದ ಸ್ಥಿತಿಗಳಲ್ಲಿ ಮರಳಿ ಕ್ರೀಡಾ ಕ್ಷೇತ್ರಕ್ಕೆ ಹೋಗುವಂತಹ ಜೀವನ ನೀಡುವ ಫಿಸಿಯೋಥೆರಪಿಗಳ ಸೇವೆ ಸದಾ ಸ್ಮರಣೀಯ ಎಂದು ಅವರು ಹೇಳಿದರು.
ನಿಟ್ಟೆ ಸಹಕುಲಾಧಿಪತಿ ಡಾ.ಎಂ.ಶಾಂತರಾಮ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಕ್ರೀಡೆಯಾಗಿ ರೂಪುಗೊಂಡಿದೆ. ನಿಟ್ಟೆ ಮೈದಾನದಲ್ಲಿ ನಡೆಯುವ ದಕ್ಷಿಣ ಭಾರತ ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಾಟದಲ್ಲಿ ವಿವಿದ ರಾಜ್ಯಗಳ ತಂಡಗಳು ಭಾಗವಹಿಸಿವೆ. ಪ್ರತಿಯೊಬ್ಬರಲ್ಲಿರುವ ಕ್ರೀಡಾ ಮನೋಭಾವನೆಯು ಮುಂದಿನ ಬದುಕಿಗೆ ಸ್ಪೂರ್ತಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ನಿಟ್ಟೆ ವಿವಿ ಕುಲಪತಿ ಡಾ.ಎಂ.ಎಸ್ .ಮೂಡಿತ್ತಾಯ, ಕುಲಸಚಿವ ಡಾ.ಹರ್ಷ ಹಾಳ ಹಳ್ಳಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕರುಣಾಕರ್ ಶೆಟ್ಟಿ, ಕ್ಷೇಮ ಡೀನ್ ಡಾ. ಸಂದೀಪ್ ರೈ, ಎ.ಬಿ ಶೆಟ್ಟಿ ದಂತ ವಿದ್ಯಾಲಯದ ಡೀನ್ ಡಾ. ಮಿತಾ ಹೆಗ್ಡೆ, ಸಂಘಟನಾ ಕರ‍್ಯದರ್ಶಿ ಪುಷ್ಪರಾಜ್ ಕುಲಾಲ್ ಉಪಸ್ಥಿತರಿದ್ದರು.
ಫಿಸಿಯೋಥೆರಪಿ ಕಾಲೇಜು ಪ್ರಾಂಶುಪಾಲರಾದ ಡಾ.ಧನೇಶ್ ಕುಮಾರ್ ಕೆ.ಯು ಸ್ವಾಗತಿಸಿದರು. ಸಮೀನಾ ಮನ್ನಾ ನಿರೂಪಿಸಿದರು. ಪ್ರೊ.ರಾಕೇಶ್ ಕೃಷ್ಣ ವಂದಿಸಿದರು.
ಕರ್ನಾಟಕ ರಾಜ್ಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿರುವ ವಿದ್ವತ್ ಕಾವೇರಪ್ಪ ಮೂಲತ: ಮಡಿಕೇರಿ ಗೋಣಿಕೊಪ್ಪದವರು. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಪಂಜಾಬ್ ಕಿಂಗ್ಸ್ ತಂಡದ ಸದಸ್ಯರಾಗಿದ್ದಾರೆ. ಈ ಬಾರಿ ಫ್ರಕ್ಚರ್ ಪರಿಣಾಮ ತಂಡವನ್ನು ಪ್ರತಿನಿಧಿಸಲು ಅಸಾಧ್ಯವಾಗಿದೆ. ಇದೀಗ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖನಾಗಿದ್ದು ಮುಂದಿನ ವರ್ಷದ ಐಪಿಎಲ್ ಗಾಗಿ ಅಭ್ಯಾಸವನ್ನು ಬೆಂಗಳೂರಿನಲ್ಲಿ ಪಡೆಯುತ್ತಿದ್ದಾರೆ. ಮಂಗಳೂರಿನಲ್ಲೇ ತರಬೇತಿಯನ್ನು ಪಡೆದು ಕೊಂಡಿದ್ದ ವಿದ್ವತ್ ಅವರಿಗೆ ಮಂಗಳೂರಿನ ನಂಟು ಹಲವು ವರ್ಷಗಳಿಂದ ಇದೆ. ಫಾದರ್ ಮುಲ್ಲರ್ ಕ್ರೀಡಾಂಗಣದಲ್ಲಿ ಸಾಕಷ್ಟು ಬಾರಿ ಕ್ರಿಕೆಟ್ ಅಭ್ಯಾಸವನ್ನು ಪಡೆದುಕೊಂಡಿದ್ದೇನೆ. ಆದ್ದರಿಂದ ಮಂಗಳೂರಿನ ನಂಟು ಇಂದು ನಿನ್ನೆಯದ್ದಲ್ಲ ಅನ್ನುತ್ತಾರೆ ವಿದ್ವತ್ ಕಾವೇರಪ್ಪ.