ಸಮಾಜಮುಖಿ ಕೆಲಸವೇ ನಿಜವಾದ ದೇಶಪ್ರೇಮ: ಸ್ಪೀಕರ್ ಯು.ಟಿ. ಖಾದರ್
ಸುಳ್ಯದಲ್ಲಿ ಉತ್ತಮ ಶಿಕ್ಷಕರಿಗೆ ಎಂ.ಬಿ.ದೇವಕಿ ಬಾಲಕೃಷ್ಣ ಎಕ್ಸಲೆನ್ಸ್ ಅವಾರ್ಡ್ ಪ್ರದಾನ

ಸುಳ್ಯ: ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಗುರುತಿಸಿ ಅವರಿಗಾಗಿ ಮಾಡುವ ಕೆಲಸ ನಿಜವಾದ ದೇಶ ಪ್ರೇಮ. ಇದನ್ನು ಎಂ.ಬಿ.ಸದಾಶಿವ ಅವರು ಮಾಡುತ್ತಿದ್ದಾರೆ ಎಂದು ಕರ್ನಾಟಕ ವಿಧಾನ ಸಭಾ ಸಭಾಪತಿ ಯು.ಟಿ.ಖಾದರ್ ಹೇಳಿದರು.
ಸುಳ್ಯದ ಸಾಂದೀಪ್ ವಿಶೇಷ ಶಾಲೆಯಲ್ಲಿ ಎಂ.ಬಿ.ಫೌಂಡೇಶನ್ ಸುಳ್ಯ ಇದರ ಆಶ್ರಯದಲ್ಲಿ ನಡೆದ ಉತ್ತಮ ಶಿಕ್ಷಕರಿಗೆ ಎಂ.ಬಿ.ದೇವಕಿ ಬಾಲಕೃಷ್ಣ ಎಕ್ಸಲೆನ್ಸ್ ಅವಾರ್ಡ್ 2024-25 ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ತಂದೆ-ತಾಯಿ ಹೆಸರಲ್ಲಿ ನಾವು ಮಾಡುವ ಸಮಾಜಮುಖಿ ಕೆಲಸಗಳು ಸಮಾಜದ ದೊಡ್ಡ ಕೆಲಸ. ಎಂ.ಬಿ.ಸದಾಶಿವ ಅವರ ಕೆಲಸಗಳು ಇಂದಿನ ಯುವ ಜನತೆಗೆ ಮಾದರಿ ಎಂದ ಅವರು ಇಲ್ಲಿನ ಸಾಂದೀಪ್ ವಿಶೇಷ ಶಾಲೆಗೆ ಸರಕಾರ ಅಥವಾ ಸಿಎಸ್‍ಆರ್ ಮೂಲಕ ಅನುದಾನಕ್ಕೆ ನಾನು ಸಹಕಾರ ನೀಡುತ್ತೇನೆ ಎಂದರು.
ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ, ಸುಳ್ಯ ನ.ಪಂ.ಅಧ್ಯಕ್ಷೆ ಶಶಿಕಲಾ ಎ.ನೀರಬಿದಿರೆ, ಸದಸ್ಯೆ ಕಿಶೋರಿ ಶೇಟ್, ತಹಶೀಲ್ದಾರ್ ಮಂಜುಳಾ, ಕ್ಷೇತ್ರ ಶಿಕ್ಷಣಾಕಾರಿ ಕೃಷ್ಣಪ್ಪ ಎಂ., ಸಿಡಿಪಿಒ ಶೈಲಜಾ, ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ.ಮುಸ್ತಫಾ, ಚರ್ಚ್ ಧರ್ಮಗುರು ವಂ.ವಿಕ್ಟರ್ ಡಿಸೋಜಾ, ರೋಟರಿ ಕ್ಲಬ್ ಅಧ್ಯಕ್ಷೆ ಯೋಗಿಯಾ ಗೋಪಿನಾಥ್, ಎಂ.ಬಿ.ಫೌಂಡೇಶನ್ ಕೋಶಾ„ಕಾರಿ ಪುಷ್ಪ ರಾಧಾಕೃಷ್ಣ, ಪ್ರಮುಖರಾದ ನೇತ್ರಾವತಿ ಪಡ್ಡಂಬೈಲು, ಮಂಜುಶ್ರೀ ರಾಘವ, ಯಶಸ್ವಿನಿ ಪಿ.ಭಟ್, ಲತೀಫ್ ಹರ್ಲಡ್ಕ, ಸೂರಯ್ಯ, ನಿಹಾಲ್ ಎಂ.ಎಸ್., ಎಂ.ಬಿ.ಜಯರಾಮ, ಎಂ.ಬಿ.ಸವಿತಾ, ಕಾರ್ಯದರ್ಶಿ ಸವಿತಾಲಕ್ಷ್ಮೀ ಮಾರ್ಗದರ್ಶಕರಾದ ಇಂದಿರಾ ದೇವಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ಸಾಂದೀಪ್ ವಿಶೇಷ ಶಾಲಾ ಮುಖ್ಯಗುರು ಹರಿಣಿ ಸದಾಶಿವ ವರದಿ ವಾಚಿಸಿದರು. ಫೌಂಡೇಶನ್ ಅಧ್ಯಕ್ಷ ಎಂ.ಬಿ.ಸದಾಶಿವ ಪ್ರಾಸ್ತಾವಿಕ ಮಾತನಾಡಿದರು. ಟ್ರಸ್ಟಿ ಶರೀಫ್ ಜಟ್ಟಿಪಳ್ಳ ಸ್ವಾಗತಿಸಿದರು. ಮಮತಾ ಕಾರ್ಯಕ್ರಮ ನಿರೂಪಿಸಿದರು.
ಪ್ರಶಸ್ತಿ ಪ್ರದಾನ: ಕೋಲ್ಚಾರು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಜಲಜಾಕ್ಷಿ ಹಾಗೂ ಸುಳ್ಯ ಸಂತ ಬ್ರಿಜಿಡ್ ಶಾಲಾ ಶಿಕ್ಷಕಿ ವಲ್ಸ ಅವರಿಗೆ ಎಂ.ಬಿ.ದೇವಕಿ ಬಾಲಕೃಷ್ಣ ಎಕ್ಸಲೆನ್ಸ್ ಅವಾರ್ಡ್ ಪ್ರಶಸ್ತಿಯನ್ನು ಅತಿಥಿಗಳು ಪ್ರದಾನ ಮಾಡಿ ಗೌರವಿಸಿದರು. ಕ್ಷೇತ್ರ ಸಮನ್ವಾಕಾರಿ ಶೀಥಲ್, ಮಮತಾ ಅಭಿನಂದನಾ ಮಾತನಾಡಿದರು. ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ನಟರಾಜ್ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಹಾಡು, ನೃತ್ಯ ಕಾರ್ಯಕ್ರಮ ನಡೆಯಿತು.