ಪುತ್ತೂರು: ಮಹಿಳಾ ಪೊಲೀಸ್ ಠಾಣೆ ಬಳಿ ಮುಖ್ಯರಸ್ತೆಯ ಮಧ್ಯದಲ್ಲಿ ಕುಳಿತು ಪ್ರತಿಭಟನೆ
ವೈದ್ಯರ ಸಂಘ, ಬಿಜೆಪಿ - ಸಂಘಪರಿವಾರ ಸಂಘಟನೆಯ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ಎ.26ರಂದು ಬೆಳಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಬಳಿ ಮುಖ್ಯರಸ್ತೆಯ ಮಧ್ಯದಲ್ಲಿ ಕುಳಿತು ಸುಗಮ ಸಂಚಾರಕ್ಕೆ ಮತ್ತು ಇತರ ವೈದ್ಯಕೀಯ ತುರ್ತು ಸೇವೆಗೆ ಅಡ್ಡಿ ಸಹಿತ ಪೊಲೀಸರ ಕರ್ತವ್ಯಕ್ಕೂ ಅಡ್ಡಿಪಡಿಸಿರುವ ಆರೋಪದಲ್ಲಿ ಪ್ರತಿಭಟನಾಕಾರರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎ.25ರಂದು ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅಶಾಜ್ಯೋತಿ ಪುತ್ತೂರಾಯ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ನೀಡಿದ ದೂರಿನಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆದರೆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿಲ್ಲ ಎಂಬ ಕಾರಣವನ್ನು ಮುಂದಿಟ್ಟು ಎ.26ರಂದು ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯ ಮುಂಭಾಗ ವೈದ್ಯರ ಸಂಘ, ಬಿಜೆಪಿ ಮತ್ತು ಸಂಘ ಪರಿವಾರ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾಕಾರರು ಮಹಿಳಾ ಪೊಲೀಸ್ ಠಾಣೆಯ ಮುಂಭಾಗದಿಂದ ಬೊಳುವಾರು- ದರ್ಬೆ ಮುಖ್ಯ ರಸ್ತೆಗೆ ಏಕಾಏಕಿ ಬಂದು ರಸ್ತೆಯ ಮಧ್ಯದಲ್ಲಿ ಕುಳಿತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಹಾಗೂ ಇತರ ವೈದ್ಯಕೀಯ ತುರ್ತು ಸೇವೆಗೆ ಅಡ್ಡಿಪಡಿಸಿದ್ದಲ್ಲದೇ, ರಸ್ತೆಯಲ್ಲಿ ಕುಳಿತು ಪೊಲೀಸರಿಗೆ ದಿಕ್ಕಾರ ಘೋಷಣೆ ಕೂಗಿರುತ್ತಾರೆ.
ಈ ಸಂದರ್ಭ ಇಲಾಖಾ ಅಧಿಕಾರಿಗಳು ರಸ್ತೆ ತಡೆಯಬೇಡಿ. ಆರೋಪಿಗಳನ್ನು ದಸ್ತಗಿರಿ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರೂ ಕೂಡ ಪೊಲೀಸರ ಮಾತನ್ನು ಕೇಳದ ಪ್ರತಿಭಟನಕಾರರು ಸಾರ್ವಜನಿಕ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿ ಅಂದಾಜು ಒಂದು ಗಂಟೆಗಳ ಕಾಲ ರಸ್ತೆಯನ್ನು ತಡೆದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟು ಮಾಡಿದ್ದಾರೆ. ಅಲ್ಲದೆ ಪೊಲೀಸರ ಕರ್ತವ್ಯಕ್ಕೆಅಡ್ಡಿಪಡಿಸಿರುವ ಆರೋಪದ ಮೇಲೆ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಾಗಿದೆ.