ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯೆಯ ನಡೆ ಖಂಡನೀಯ: ಮುನೀರ್ ಕಾಟಿಪಳ್ಳ

ಮುನೀರ್ ಕಾಟಿಪಳ್ಳ
ಮಂಗಳೂರು, ಎ.27: ಪೆಹಲ್ಗಾಮ್ ಘಟನೆಯ ಬಳಿಕ ಮುಸ್ಲಿಮ್ ದ್ವೇಷವನ್ನು ಕೆರಳಿಸುವ ಪ್ರಯತ್ನವನ್ನು ಬಲಪಂಥೀಯ ಗುಂಪುಗಳು ದೇಶಾದ್ಯಂತ ಎಗ್ಗಿಲ್ಲದೆ ನಡೆಸುತ್ತಿರುವ ಮಧ್ಯೆ ಮುಸ್ಲಿಂ ದ್ವೇಷದ ಕ್ರೂರ ರಾಜಕಾರಣ ಸಮಾಜದ ಉನ್ನತ ಸ್ಥರದಲ್ಲಿರುವ ವೈದ್ಯರು, ಉದ್ಯಮಿಗಳು, ಇಂಜಿನಿಯರ್ಗಳನ್ನೂ ಬಿಟ್ಟಿಲ್ಲ ಎಂಬುದಕ್ಕೆ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯೆಯ ನಡೆ ಸಾಕ್ಷಿಯಾಗಿದೆ.
ವೈದ್ಯೆಯ ಈ ನಡೆ ಖಂಡನೀಯ ಎಂದು ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೇಶದ ಹಲವೆಡೆ ಮುಸ್ಲಿಮರನ್ನು ನೇರ ಗುರಿಯಾಗಿಸಿ ನಾನಾ ಘಟನೆಗಳು ವರದಿಯಾಗುತ್ತಿರುವ ಸಂದರ್ಭದಲ್ಲೇ ಸಂಘಪರಿವಾರದ ಪ್ರಯೋಗ ಶಾಲೆ ಎಂಬಂತಿರುವ ಪುತ್ತೂರಿನಲ್ಲಿ ವೈದ್ಯರು, ಅವರ ಸಂಘವು ಕೋಮುವಾದಿ, ಬಲಪಂಥೀಯ ಶಕ್ತಿಗಳ ಜೊತೆ ಸೇರಿ ಮುಸ್ಲಿಮರ ಮೇಲೆ ಕ್ರಮ, ಬಂಧನಕ್ಕೆ ಒತ್ತಾಯಿಸಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ ನಿರ್ಲಜ್ಜ ಘಟನೆ ನಡೆದಿರುವುದು ಅಕ್ಷಮ್ಯ. ತಾಯಿ ಮತ್ತು ಮಗ ಪುತ್ತೂರು ಸರಕಾರಿ ಆಸ್ಪತ್ರೆಗೆ ತೆರಳಿದ ವೇಳೆ ರೌಂಡ್ಸ್ಗೆ ಬಂದ ವೈದ್ಯೆಯು ತಾಯಿ-ಮಗನನ್ನು ಅನ್ಪಡ್ ಎಂಬ ಪದ (ಮತೀಯ ಪೂರ್ವಾಗ್ರಹ ಹೊಂದಿದವರಿಗೆ ಮುಸ್ಲಿಮರು ಅಂದರೆ ಅನಾಗರಿಕರು) ಬಳಕೆ ಮಾಡಿದ್ದಾರೆ. ಇದರಿಂದ ಆಕ್ರೋಶಿತರಾದ ಅವರು ವೈದ್ಯೆ ಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಅದನ್ನು ವಿವಾದಗೊಳಿಸಲಾಗಿದೆ.
ಈ ಘಟನೆಯನ್ನು ಪೊಲೀಸರು ನಿರ್ವಹಿಸಿದ ರೀತಿ ಸಮಾಧಾನ ತಂದಿರದಿದ್ದರೆ, ತಾಯಿ-ಮಗನ ನಡೆ ಅತಿರೇಕದ್ದು ಅಂತ ಅನಿಸಿದ್ದರೆ ಸರಕಾರಿ ವೈದ್ಯೆಯು ತನ್ನ ಇಲಾಖೆಯ ಮೇಲಾಧಿಕಾರಿ ಅಥವಾ ಜಿಲ್ಲಾಡಳಿತ ಅಥವಾ ವೈದ್ಯರ ಸಂಘಕ್ಕೆ ದೂರು ನೀಡಬಹುದಿತ್ತು. ವೈದ್ಯರ ಸಂಘವೂ ಈ ಕುರಿತು ತನ್ನದೇ ವಿಧಾನಗಳ ಮೂಲಕ ಘನತೆಯಿಂದ ಕ್ರಮಗಳನ್ನು ಜರುಗಿಸಬೇಕಿತ್ತು. ಈ ಹಿಂದೆ ವೈದ್ಯರು ಹಾಗೂ ಗ್ರಾಹಕರ ನಡುವೆ ಗಲಾಟೆಗಳು, ಸಮಸ್ಯೆಗಳು ನಡೆದಾಗ ಹೀಗೆಯೆ ನಡೆದಿತ್ತು. ಆದರೆ ಈ ಬಾರಿ ಅಸಮಾನ್ಯ ಪ್ರತಿಕ್ರಿಯೆ ವೈದ್ಯರ ಸಂಘ ತೆಗೆದುಕೊಂಡಿತು. ಕಾರಣ, ಜಗಳ ನಡೆದದ್ದು ಮುಸ್ಲಿಂ ಜೊತೆಗೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ಇತ್ಯರ್ಥವಾದ ಬಳಿಕ ವೈದ್ಯರು, ವೈದ್ಯರ ಸಂಘ ತುರ್ತು ಕಾರ್ಯಾಚರಣೆಗೆ ಇಳಿದಿದೆ. ಪುತ್ತೂರು ತಾಲೂಕಿನಾದ್ಯಂತ ಹೊರ ರೋಗಿ ಸೇವೆ ಸ್ಥಗಿತಗೊಳಿಸಿದೆ. ಕೋಮುವಾದಿ, ಮುಸ್ಲಿಂ ವಿರೋಧಿ ಸಂಘಟನೆಗಳು, ಪ್ರಮುಖರ ಜೊತೆ ಸೇರಿ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿವೆ. ಮುಸ್ಲಿಂ ತಾಯಿ-ಮಗನ ಮೇಲೆ ಜಾಮೀನು ರಹಿತ ಮೊಕದ್ದಮೆ ದಾಖಲಿಸಬೇಕು ಎಂದು ಹಠಕ್ಕೆ ಬಿದ್ದಿದೆ. ಈ ಒತ್ತಡದಿಂದ ಪೊಲೀಸರು ಎಫ್ಐಆರ್ ಹಾಕಿದ್ದಾರೆ. ಇಷ್ಟು ಸಾಲದು ಎಂಬಂತೆ ತಾಯಿ-ಮಗನನ್ನು ತಕ್ಷಣ ಬಂಧಿಸಬೇಕು ಎಂದು ರಸ್ತೆ ತಡೆಯನ್ನೂ ಮಾಡಲಾಗಿದೆ. ಮುಸ್ಲಿಂ ದ್ವೇಷ, ಸಾಮಾನ್ಯ ಮುಸ್ಲಿಮರ ಕುರಿತು ಎಷ್ಟೊಂದು ಅಸಹನೆಯನ್ನು ವ್ಯವಸ್ಥಿತವಾಗಿ ಮೂಡಿಸಲಾಗುತ್ತಿದೆ ಎಂಬುದಕ್ಕೆ ಪುತ್ತೂರು ವೈದ್ಯರು, ಅವರ ಸಂಘ ಹಾಗೂ ಸಂಘ ಪರಿವಾರದ ಜಂಟಿ ಕಾರ್ಯಾಚರಣೆ ಒಂದು ಪ್ರಬಲ ಸಾಕ್ಷಿಯಾಗಿದೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ವಾಗ್ವಾದಕ್ಕೆ ವೈದ್ಯರು ದಿಢೀರ್ ಮುಷ್ಕರ ಹೂಡುವುದು, ವೈದ್ಯರ ಸಂಘ ನೇತೃತ್ವ ಕೊಡುವುದು, ಸಂಬಂಧ ಪಟ್ಟವರಿಗೆ ದೂರು, ಮನವಿ ಕೊಡುವ ಬದಲಿಗೆ ಸಂಘ ಪರಿವಾರಕ್ಕೆ ದೂರು ಕೊಡುವುದು, ಅವರೊಂದಿಗೆ ಜಂಟಿಯಾಗಿ ಪ್ರತಿಭಟನೆಗೆ ಇಳಿಯುವುದು ಅಂದರೆ ಏನರ್ಥ? ವೈದ್ಯರು, ನಾಗರಿಕರ ನಡುವಿನ ಸಾಮಾನ್ಯ ಏರುಮಾತನ್ನು ಹಿಂದು-ಮುಸ್ಲಿಂ ಎಂದು ಬಣ್ಣ ಬಲಿಯುವುದು ಎಷ್ಟು ಸರಿ? ಸರಕಾರಿ ವೈದ್ಯರೂ ಈ ರೀತಿ ನಡೆದುಕೊಳ್ಳಬಹುದೆ? ವೈದ್ಯರು, ವೈದ್ಯರ ಸಂಘಗಳಿಗೆ ಇಂತಹ ದಿಢೀರ್ ಮುಷ್ಕರ ಹೂಡುವ ಅವಕಾಶ ಇದೆಯೇ ಇತ್ಯಾದಿ ಪ್ರಶ್ನೆಗಳಿಗೆ ಸರಕಾರ ಉತ್ತರಿಸಬೇಕಿದೆ. ವೃತ್ತಿನಿಷ್ಟ, ಹಿರಿಯ ವೈದ್ಯರುಗಳ ಪ್ರತಿಕ್ರಿಯೆ ಏನು? ಮುಸ್ಲಿಮರು ಅಂದರೆ ಯಾರು, ಹೇಗೆ ಬೇಕಾದರು ನಡೆಸಿಕೊಳ್ಳಬಹುದೆ? ಇದು ಜನಾಂಗ ತಾರತಮ್ಯ ಅಲ್ಲವೆ ಎಂದು ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.