ನಿಟ್ಟೆ ಲೆಮಿನಾ ಫೌಂಡ್ರಿ ಸಂಸ್ಥೆ ಕಾರ್ಮಿಕ ಅವಘಡದಲ್ಲಿ ನಿಧನ
ಮಂಗಳೂರು : ಸೋಮವಾರ ರಾತ್ರಿ ನಡೆದ ಅವಘಡದಲ್ಲಿ ಅಸ್ವಸ್ಥಗೊಂಡಿದ್ದ ಕಾರ್ಕಳದ ನಿಟ್ಟೆ ಲೆಮಿನಾ ಫೌಂಡ್ರಿ ಸಂಸ್ಥೆಯ ಕಾರ್ಮಿಕ, ಸಿಪಿಎಂ ಸದಸ್ಯ ಉಮೇಶ್ ಪೂಜಾರಿ (35) ಬುಧವಾರ ಮಧ್ಯಾಹ್ನ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸೋಮವಾರ ರಾತ್ರಿ ಪಾಳಿಯ ಕೆಲಸದಲ್ಲಿದ್ದಾಗ ಸಂಭವಿಸಿದ ಅವಘಡದಲ್ಲಿ ಉಮೇಶ್ ಪೂಜಾರಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಮನೆಗೆ ತೆರಳಿದ ಉಮೇಶ್ ಮಂಗಳವಾರ ಮನೆಯಲ್ಲಿ ವಿಶ್ರಾಂತಿ ಪಡೆದು ಬುಧವಾರ ಮತ್ತೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಮನೆಗೆ ವಾಪಸಾಗಿದ್ದರು. ಆದರೆ ಕೆಲವು ಸಮಯದ ಬಳಿಕ ಕುಸಿದು ಬಿದ್ದು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಸಂತಾಪ ಸಭೆ: ಇತ್ತೀಚಿಗಷ್ಟೇ ಮದುವೆಯಾಗಿದ್ದ ಉಮೇಶ್ ಮನೆಯ ಆಧಾರಸ್ತಂಭವಾಗಿದ್ದು, ಅವರ ಪತ್ನಿ 5 ತಿಂಗಳ ಗರ್ಭಿಣಿಯಾಗಿದ್ದರು. ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಉಮೇಶ್ ಎಲ್ಲರೊಂದಿಗೆ ಬೆರೆತು ಬಾಳುವ ಗುಣವನ್ನು ಹೊಂದಿದ್ದರು. ಅವರ ಅಕಾಲಿಕ ಮರಣವು ಕುಟುಂಬಕ್ಕೆ, ಕಾರ್ಮಿಕರಿಗೆ, ಸಂಸ್ಥೆಗೆ ತುಂಬಲಾರದ ನಷ್ಟವಾಗಿದೆ ಎಂದು ಗುರುವಾರ ನಿಟ್ಟೆ ಲೆಮಿನಾ ಸಂಸ್ಥೆಯ ಹೊರಾಂಗಣದಲ್ಲಿ ಜರಗಿದ ಸಂತಾಪ ಸಭೆಯಲ್ಲಿ ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.