ಸಂಬಾರತೋಟ ಬಾವಿಗಳಲ್ಲಿ ತೈಲ ಮಿಶ್ರಿತ ನೀರು: ಸಹಾಯಕ ಆಯುಕ್ತರ ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ, ಪರಿಶೀಲನೆ
ಕೊಣಾಜೆ: ಮುಡಿಪು ಸಮೀಪದ ಸಂಬಾರ ತೋಟ ಪರಿಸರದ ಬಾವಿಗಳಲ್ಲಿ, ಕೊಳವೆಬಾವಿಗಳಲ್ಲಿ ತೈಲಾಂಶ ಮಿಶ್ರಿತ ನೀರು ಪತ್ತೆಯಾಗಿ ಸ್ಥಳೀಯರಿಗೆ ಎದುರಾಗಿದ್ದ ಸಮಸ್ಯೆಗೆ ಸಂಬಂಧಿಸಿದಂತೆ ಮಂಗಳೂರು ಉಪವಿಭಾಗ ಸಹಾಯಕ ಆಯುಕ್ತರಾದ ಹರ್ಷವರ್ಧನ್ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಬುಧವಾರ ಮುಡಿಪುವಿನ ಸಂಬಾರತೋಟ ಪರಿಸರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಬಳಿಕ ಬಾವಿ ಹಾಗೂ ಕೊಳವೆ ಬಾವಿಯ ನೀರನ್ನು ಪರಿಶೀಲಿಸಿದ ಸಹಾಯಕ ಆಯುಕ್ತರಾದ ಹರ್ಷವರ್ಧನ್ ಅವರು ತಹಶೀಲ್ದಾರ್ ಹಾಗು ಇತರ ಅಧಿಕಾರಿಗಳೊಂದಿಗೆ ಚರ್ಚಿಸಿದರು.
'ಈಗಾಗಲೇ ಬಾವಿಯ ನೀರನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದ್ದು ಕೆಲವೇ ದಿನಗಳಲ್ಲಿ ವರದಿ ಬರಲಿದೆ. ವರದಿಯನ್ನು ಪರಿಶೀಲಿಸಿ ಅದರ ಸಾಧ್ಯತೆ ಬಾಧ್ಯತೆಗಳನ್ನು ನೋಡಿಕೊಂಡು ಜಿಲ್ಲಾಡಳಿತ ನೇತೃತ್ವದಲ್ಲಿ ಸಭೆ ನಡೆಸಿ ಬೇಕಾದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಅಲದೆ ಸ್ಥಳೀಯರಿಗೆ ನೀರಿನ ತೊಂದರೆಯಾಗದಂತೆ ಪಂಚಾಯತಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಬಳಿಕ ಸಮೀಪದ ಪೆಟ್ರೋಲ್ ಪಂಪ್ ಗೆ ಕೂಡಾ ಭೇಟಿ ನೀಡಿದ ಅಧಿಕಾರಿಗಳ ತಂಡವು ಪರಿಶೀಲನೆ ನಡೆಸಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಪುಟ್ಟರಾಜು, ಹಿರಿಯ ಜಿಯಾಲಾಜಿಸ್ಟ್ ಶೇಖ್ ದಾವೂದ್, ಕಂದಾಯ ನಿರೀಕ್ಷಕರಾದ ಕೆ.ಪ್ರಮೋದ್ ಕುಮಾರ್ , ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹಮ್ಮದ್ ರಫೀಕ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ತೌಫಿಕ್ ಹಾಗೂ ಪಂಚಾಯತಿ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.