ಆ.17ರಂದು ದುಬೈ ಬಿಸಿಎಫ್ ನಿಂದ ವಿದ್ಯಾರ್ಥಿ ವೇತನ, ಹೊಲಿಗೆ ಯಂತ್ರ ವಿತರಣೆ
ಮಂಗಳೂರು, ಆ. 16: ದುಬೈನ ಬ್ಯಾರೀಸ್ ಕಲ್ಚರಲ್ ಫೋರಂ (ಬಿಸಿಎಫ್) ವತಿಯಿಂದ ಈ ವರ್ಷ ಪಿಯುಸಿಯಿಂದ ಸ್ನಾತಕೋತ್ತರ ಪದವಿ ವರೆಗೆ 300ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಆ.17ರಂದು ನಗರದ ಪುರಭವನದಲ್ಲಿ ಆಯೋಜಿಸಲಾಗಿದೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಬಿಸಿಎಫ್ ವಿದ್ಯಾರ್ಥಿ ವೇತನ ಸಮಿತಿಯ ಅಧ್ಯಕ್ಷ ಎಂ.ಇ.ಮೂಳೂರು, ಕಾರ್ಯಕ್ರಮದಲ್ಲಿ ಉಡುಪಿ ಹಾಗೂ ದ.ಕ. ಜಿಲ್ಲೆಯ 35 ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಪೂರಕವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಗುವುದು ಎಂದರು.
ಬೆಳಗ್ಗೆ 9 ಗಂಟೆಗೆ ಕೆರಿಯರ್ ಗೈಡೆನ್ಸ್ ಬಗ್ಗೆ ಕಾರ್ಯಾಗಾರ ನಡೆಯಲಿದ್ದು, ಯುಇಇ ಲಂಡನ್ ಅಮೆರಿಕನ್ ಸಿಟಿ ಕಾಲೇಜಿನ ನಿರ್ದೇಶಕ ಡಾ.ಪ್ರೊ.ಕಾಪು ಮುಹಮ್ಮದ್ ಮತ್ತು ಮನಾಲ್ ಕಾಪು ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ.
ವಿಧಾಸಭೆ ಅಧ್ಯಕ್ಷ ಯು.ಟಿ.ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ವಹಿಸಲಿದ್ದಾರೆ. ಬಳಿಕ 11 ಗಂಟೆಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಎಸೆಸೆಲ್ಸಿ, ಪಿಯುಸಿ ಮತ್ತು ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಗುವುದು ಎಂದು ಅವರು ಹೇಳಿದರು.
ಕಳೆದ 24 ವರ್ಷಗಳಿಂದ ಬಿಸಿಎಫ್ ನಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದುಬೈ ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್, ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮುಹಮ್ಮದ್, ಉಪಾಧ್ಯಕ್ಷ ಅಬ್ದುಲ್ ಲತೀಫ್ ಮುಲ್ಕಿ, ಮುಖ್ಯ ಸಲಹೆಗಾರ ಅಬೂ ಸ್ವಾಲಿಹ್ ಹುಸೇನ್, ಕಾರ್ಯಕಾರಿ ಸದಸ್ಯ ಅಶ್ರಫ್ ಸತ್ತಿಕಲ್ ಮೊದಲಾದವರು ಉಪಸ್ಥಿತರಿದ್ದರು.