ಇ-ಆಟೋ ರಿಕ್ಷಾ ಸಂಚಾರಕ್ಕೆ ಕೇಂದ್ರ ಮಾರ್ಗ ಸೂಚಿಯಂತೆ ಆದೇಶ: ದ.ಕ. ಜಿಲ್ಲಾಧಿಕಾರಿ ಸ್ಪಷ್ಟನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇ-ಅಟೋ ಸಂಚಾರಕ್ಕೆ ಸಂಬಂಧಿಸಿ ಕೇಂದ್ರದ ಮಾರ್ಗಸೂಚಿ ಪ್ರಕಾರವೇ ಆದೇಶ ನೀಡಲಾಗಿದೆ. ಯಾವುದೇ ರೀತಿಯ ಏಕಪಕ್ಷೀಯ ನಿರ್ಧಾರ ಮಾಡಲಾಗಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಪಷ್ಟನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡದಲ್ಲಿ ಇ-ಆಟೊಗಳಿಗೆ ಪ್ರತ್ಯೇಕ ಅಥವಾ ವಿಶೇಷ ಆದೇಶ ಹೊರಡಿಸಿಲ್ಲ ಎಂದರು.
ಮೋಟಾರು ವಾಹನ ಕಾಯಿದೆ 66 ಪ್ರಕಾರ ಎಲ್‌ಪಿಜಿ ಮತ್ತು ಸಿಎನ್‌ಜಿ ವಾಹನಗಳಿಗೆ ಪರವಾನಗಿ ನೀಡಲಾಗುತ್ತದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ 1993-94ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ವಾಹನಗಳ ಮಿತಿಯನ್ನು ನಿರ್ಬಂಧಿಸಲು ಕಾಯ್ದೆಯ ಸೆಕ್ಷನ್ 115ರಡಿ ವಲಯ ಪರಿಕಲ್ಪನೆಯಡಿ ಆಟೋ ರಿಕ್ಷಾಗಳಿಗೆ ವಲಯ 1 (ನಗರ)ಹಾಗೂ ವಲಯ 2 (ಗ್ರಾಮಾಂತರ) ರಂತೆ ಪರವಾನಿಗೆ ನೀಡುವ ಅವಕಾಶ ಕಲ್ಪಿಸಿದ್ದರು. ಕೆಲ ವರ್ಷಗಳ ಹಿಂದೆ ಎಲೆಕ್ಟ್ರಿಕ್ ಆಟೊಗಳು ರಸ್ತೆಗಿಳಿಯಲು ಆರಂಭವಾದಾಗ ಅದೇ ವಲಯ1-2 ನಿಯಮ ಇ-ಆಟೊಗಳಿಗೂ ಅನ್ವಯ ಮಾಡಲಾಗಿತ್ತು. ಇ-ಆಟೊ ಗಳಿಗೆ ದ.ಕ.ದಲ್ಲಿ ಮಾತ್ರ ಈ ನಿರ್ಬಂಧ ಇದ್ದುದನ್ನು ಪ್ರಶ್ನಿಸಿ ಇ-ಆಟೊ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ಕಾನೂನಾತ್ಮಕವಾಗಿ ಆದೇಶ ಹೊರಡಿಸುವಂತೆ ಕೋರ್ಟ್ ನಿರ್ದೇಶನ ನೀಡಿತ್ತು. ಅದರಂತೆ, ಕಾಯ್ದೆ ಪ್ರಕಾರ ದೇಶಾದ್ಯಂತ ಇ-ಆಟೊಗಳಿಗೆ ಪರವಾನಿಗೆ ನಿರ್ಬಂಧ ಇಲ್ಲದಿರುವ ಆದೇಶವನ್ನೇ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಮಾಡಲಾಗಿತ್ತು. ಈ ಆದೇಶವನ್ನು ಪೆಟ್ರೋಲ್, ಸಿಎನ್‌ಜಿ, ಎಲ್‌ಪಿಜಿ ಆಟೊ ಚಾಲಕರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆ ಆದೇಶವನ್ನು ನ್ಯಾಯಾಲಯದ ಆದೇಶದಂತೆ, ದೇಶಾದ್ಯಂತ ಪ್ರಸ್ತುತ ಜಾರಿಯಲ್ಲಿರುವ ಕಾನೂನು ಪ್ರಕಾರ ಮಾಡಲಾಗಿದೆ ಎಂದು ಅವರು ಹೇಳಿದರು.
ಈಗಾಗಲೇ ಇ-ಅಟೋರಿಕ್ಷಾ ಮತ್ತು ಸಿಎನ್‌ಜಿ-ಎಲ್‌ಪಿಜಿ ರಿಕ್ಷಾ ಚಾಲಕರು ಮತ್ತು ವಕೀಲರು ನನ್ನ ಸಮ್ಮುಖದಲ್ಲೇ ಸಮಗ್ರ ವಿಚಾರಣೆಯನ್ನು ಮಂಡಿಸಿದ್ದು, ಕಾನೂನು ಪ್ರಕಾರ ಇ-ಅಟೋ ಓಡಾಟಕ್ಕೆ ಅನುಮತಿ ನೀಡುವ ಬಗ್ಗೆ ಚಿಂತನೆ ನಡೆಸಲಾ ಗಿತ್ತು. ಇದಾದ ಬಳಿಕ ನಗರ ಪೊಲೀಸರು, ಮಂಗಳೂರು ಮಹಾನಗರಪಾಲಿಕೆಯಿಂದ ರಸ್ತೆಯ ಒತ್ತಡ, ಪಾರ್ಕಿಂಗ್ ವ್ಯವಸ್ಥೆ ಸಂಬಂಧಪಟ್ಟಂತೆ ಮಾಹಿತಿ ಪಡೆದುಕೊಳ್ಳಲಾಯಿತು. ಈ ಎರಡು ಸಂಸ್ಥೆಗಳು ಪೂರಕ ಸ್ಪಂದನೆ ನೀಡಿದ ಕಾರಣ ಇ-ಅಟೋ ರಿಕ್ಷಾಕ್ಕೆ ಅನುಮತಿ ನೀಡಲಾಗಿದೆ ಎಂದವರು ಹೇಳಿದರು.
ಈ ಸಂದರ್ಭ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಮಲ್ಲಾಡ್ ಉಪಸ್ಥಿತರಿದ್ದರು.
ಸೆ.5ರಂದು ರಿಕ್ಷಾ ಚಾಲಕರ ಸಭೆ
ರಿಕ್ಷಾ ಚಾಲಕರ ಬೇಡಿಕೆಗಳ ಕುರಿತಂತೆ ಚರ್ಚಿಸಲು ಎಲ್ಲ ಆಟೊ ಸಂಘಟನೆಗಳೊಂದಿಗೆ ಸೆ.5ರಂದು ಸಭೆ ನಡೆಸಲಾಗು ವುದು. ಜಿಲ್ಲೆಯಲ್ಲಿ ಎಲ್‌ಪಿಜಿ, ಸಿಎನ್‌ಐ ಹಾಗೂ ಪೆಟ್ರೋಲ್ ಅಟೋರಿಕ್ಷಾಗಳಿಗೆ ಸಂಬಂಧಿಸಿ ದ.ಕ. ಜಿಲ್ಲೆಯಲ್ಲಿ ಊರ್ಜಿತ ದಲ್ಲಿರುವ ವಲಯ ಪರಿಕಲ್ಪನೆಯನ್ನು ತೆಗೆಯಬೇಕೆಂಬ ಬೇಡಿಕೆಯನ್ನು ಪರಿಗಣಿಸಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.
ಕೆತ್ತಿಕಲ್ ಗುಡ್ಡ ಕುಸಿತದ ಪ್ರಕರಣಕ್ಕೆ ಸಂಬಂಧಿಸಿ ತಜ್ಞ ತಂಡ ಪರಿಶೀಲನೆ ನಡೆಸಿದ್ದು, ಮೇಲಿನಿಂದ ನೀರು ಬೀಳದ ಹಾಗೆ ತುರ್ತು ಕ್ರಮಗಳನ್ನು ಕೈಗೊಳ್ಳಲು ಸೂಚಿಸಿರುವಂತೆ ಸ್ಥಳೀಯಾಡಳಿತ ಕ್ರಮ ವಹಿಸಿದೆ. ಶಾಶ್ವತ ಪರಿಹಾರದ ಕುರಿತಂತೆ ಸಮಗ್ರ ಅಧ್ಯಯನ ನಡೆಸಲು ಸಮಯಾವಕಾಶವನ್ನು ತಜ್ಞರ ತಂಡ ಕೋರಿದೆ. ಗುಡ್ಡದ ಮೇಲಿನ 9 ಮನೆಗಳನ್ನು ಸ್ಥಳಾಂತರ ಮಾಡಲಾಗಿದೆ. ಅವರಿಗೆ ವಾಸ್ತವ್ಯಕ್ಕೆ ಪೂರಕವಾಗುವಂತೆ ತಲಾ 20000 ರೂ. ಪರಿಹಾರವನ್ನು ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯ ಮಾರ್ಗಸೂಚಿಗಳನ್ನು ಮೀರಿ ಜಿಲ್ಲಾಡಳಿತ ಒದಗಿಸುತ್ತಿದೆ. ಗುಡ್ಡದಲ್ಲಿ ಮಣ್ಣು ತೆಗೆಯುವ ಕೆಲಸ 2018-19ರಲ್ಲಿಯೇ ಶೇ. 90ರಷ್ಟು ನಡೆದಿರುವ ಬಗ್ಗೆ ಸ್ಯಾಟಲೈಟ್ ಛಾಯಾಚಿತ್ರಗಳ ವರದಿಯನ್ನು ನೀಡಲಾಗಿದ್ದು, ಈ ಕುರಿತಂತೆ ಸಂಬಂಧಪಟ್ಟವರ ಮೇಲೆ ಕ್ರಮ ಆಗಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.