ಪಣಂಬೂರು| ಲಾರಿ ಢಿಕ್ಕಿ ಹೊಡೆದು ರಸ್ತೆಗೆ ಎಸೆಯಲ್ಪಟ್ಟಿದ್ದ ಗಾಯಾಳುವನ್ನು ಆಸ್ಪತ್ರೆಗೆ ಬಸ್ ನಲ್ಲೇ ಕರೆದುಕೊಂಡು ಹೋದ ಸಿಬ್ಬಂದಿ
ಮಾನವಿಯತೆಗೆ ಸಾಕ್ಷಿಯಾದ ಬಸ್ ಚಾಲಕ ಶರಣ್, ನಿರ್ವಾಹಕ ಮುನವ್ವರ್
ಪಣಂಬೂರು: ಲಾರಿ ಢಿಕ್ಕಿ ಹೊಡೆದು ರಸ್ತೆಗೆ ಎಸೆಯಲ್ಪಟ್ಟಿದ್ದ ಗಾಯಾಳುವನ್ನು ಖಾಸಗಿ ಬಸ್ ಸಿಬ್ಬಂದಿ ತಮ್ಮ ಬಸ್ ನಲ್ಲೇ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಪಣಂಬೂರು ಎಂಸಿಎಫ್ ಬಳಿ ರವಿವಾರ ವರದಿಯಾಗಿದೆ.
ಗಾಯಾಳುವನ್ನು ಚಿತ್ರಾಪುರ ಪಾಂಡುರಂಗ ಬಜನಾ ಮಂದಿರ ಬಳಿಯ ನಿವಾಸಿ ನಾಗೇಶ್ (62) ಎಂದು ತಿಳಿದು ಬಂದಿದೆ.
ನಾಗೇಶ ಅವರು ಪಣಂಬೂರು ಎಂಸಿಎಫ್ ಬಳಿ ಇದ್ದ ಸಂದರ್ಭ ಲಾರಿಯೊಂದು ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಅವರು ಸ್ವಲ್ಪ ದೂರ ಎಸೆಯಲ್ಪಟ್ಟಿದ್ದು ಗಂಭೀರ ಗಾಯಗೊಂಡಿದ್ದರು.
ಈ ವೇಳೆ ಅದೇ ದಾರಿಯಾಗಿ ಮಣಿಪಾಲದಿಂದ ಮಂಗಳೂರಿಗೆ ತೆರಳುತ್ತಿದ್ದ ಎಕೆಎಂಎಸ್ ಬಸ್ ಸಿಬ್ಬಂದಿ ಗಮನಿಸಿ ತಕ್ಷಣ ತಮ್ಮ ಬಸ್‌ನಲ್ಲೇ ಗಾಯಾಳು ನಾಗೇಶ್ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆಯ ಬಳಿಕ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿ ಈ ವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಮಂಗಳೂರು ಉತ್ತರ ಸಂಚಾರ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ.