ಪಾವೂರು: ಹಲವು ಸಂಘಟನೆಗಳ ಸಹಯೋಗದಲ್ಲಿ ಗ್ರಾಮದಾದ್ಯಂತ ಬೃಹತ್ ಸ್ವಚ್ಚತಾ ಆಂದೋಲನ
ಉಳ್ಳಾಲ: ಪಾವೂರು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಎಸ್ಕೆಎಸ್ಸೆಸ್ಸೆಫ್ ವಿಖಾಯ, ಎಸ್ಸೆಸ್ಸೆಫ್, ಎಸ್ ವೈಎಸ್, ಸಂಜೀವಿನಿ ಒಕ್ಕೂಟ, ಅಲೋಶಿಯಸ್ ಕಾಲೇಜಿನ ರಾಷ್ಟ್ರೀಯ ಸೇವಾದಳ, ಹಸಿರುದಳ, ಎಸ್ ಡಿಪಿಐ, ಶಿವಾಜಿ ಭಂಡಾರಮನೆ, ಅಂಗನವಾಡಿ ಕಾರ್ಯಕರ್ತೆಯರ ಭಾಗವಹಿಸುವಿಕೆಯಲ್ಲಿ ಗ್ರಾಮದಾದ್ಯಂತ ಏಕಕಾಲದಲ್ಲಿ ಬೃಹತ್ ಸ್ವಚ್ಚತಾ ಆಂದೋಲನ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಸಾತ್ಕೋ ಮಾತನಾಡಿ, ಒಂದೂವರೆ ತಿಂಗಳ ಹಿಂದೆ ಕಸ ಸಂಗ್ರಹ ಆರಂಭಗೊಂಡಿದ್ದು, ಮೊದಲ ತಿಂಗಳಲ್ಲೇ ನಗರ ಪ್ರದೇಶದಲ್ಲೂ ಆಗದ ರೀತಿಯಲ್ಲಿ 70 ಸಾವಿರ ರೂಪಾಯಿ ಶುಲ್ಕ ಸಂಗ್ರಹ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸ್ವಚ್ಚತೆಯಲ್ಲಿ ಮಾದರಿಯಾಗುವ ಆಶಾಭಾವನೆ ಇದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್ ಅನ್ಸಾರ್ ಇನೋಳಿ ಮಾತನಾಡಿ, ಈಗಾಗಲೇ ಒಂದೂವರೆ ಸಾವಿರ ಮನೆಗಳಿಂದ ಕಸ ಸಂಗ್ರಹ ಮಾಡಲಾಗುತ್ತಿದ್ದು ಶೇ.80 ಮನೆಗಳಿಂದ ಮಾಸಿಕ ಶುಲ್ಕ ಸಂಗ್ರಹಿಸಲಾಗಿದೆ. ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಶೂನ್ಯ ಶುಲ್ಕ ಆಗುವ ನಿರೀಕ್ಷೆ ಇದೆ ಎಂದರು.
ಅಲೋಶಿಯಸ್ ಕಾಲೇಜಿನ ಪ್ರತಿನಿಧಿ ಆಲ್ವಿನ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣ ಕುಮಾರ್ ಕೆ., ಕಾರ್ಯದರ್ಶಿ ಇಸ್ಮಾಯಿಲ್, ಉಪಾಧ್ಯಕ್ಷೆ ಮೆಹರುನ್ನಿಸಾ, ಹರೇಕಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಪಿ.ಅಬ್ದುಲ್ ಮಜೀದ್, ಗಂಗಾ ಸಂಜೀವಿನಿ ಒಕ್ಕೂಟದ ಕಾಂಚನಾ, ಪಾವೂರು ಗ್ರಾ.ಪಂ.ಸದಸ್ಯರಾದ ದಯಾನಂದ, ರಿಯಾಝ್ ಅಹ್ಮದ್ ಗಾಡಿಗದ್ದೆ, ರಿಝ್ವಾನ್ ಮಲಾರ್, ರವಿಕಲಾ, ಚೆನ್ನಮ್ಮ, ಖತೀಜಾ ಬಾನು, ಮಾಜಿ ಅಧ್ಯಕ್ಷೆ ಖಮರುನ್ನಿಸಾ ಮೊದಲಾದವರು ಉಪಸ್ಥಿತರಿದ್ದರು.
ಹಸಿರುದಳದ ಸಂಯೋಜಕ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.