ಪೋಕ್ಸೊ ಪ್ರಕರಣದ ಸಂತ್ರಸ್ತೆ ಪ್ರತಿಕೂಲ ಸಾಕ್ಷಿ ಹಿನ್ನೆಲೆ: ಪರಿಹಾರ ಧನ ವಾಪಸ್ ಪಡೆದು ಸರಕಾರದ ಖಾತೆಗೆ ಜಮೆ
ನ್ಯಾಯಾಲಯದ ಆದೇಶದಂತೆ ಸಮಾಜ ಕಲ್ಯಾಣ ಇಲಾಖೆ ಕ್ರಮ
ಮಂಗಳೂರು, ಜ.12: ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಪ್ರತಿಕೂಲ ಸಾಕ್ಷಿ ನುಡಿದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಪಾವತಿಸಿದ್ದ ಪರಿಹಾರ ಧನವನ್ನು ನ್ಯಾಯಾಲಯದ ಆದೇಶದಂತೆ ವಾಪಸ್ ಪಡೆದು ಸರಕಾರದ ಖಾತೆಗೆ ಜಮೆ ಮಾಡಿದ ಅಪರೂಪದ ವಿದ್ಯಮಾನ ನಡೆದಿದೆ.
ಪಣಂಬೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮನೋಜ್ ಕುಮಾರ್ ನಾಯಕ್ ಆರೋಪಿ ಮಂಜಪ್ಪ ಯಾನೆ ಮಂಜ (23) ಎಂಬಾತನ ವಿರುದ್ಧ ಸೆಕ್ಷನ್ 363, 376 ಹಾಗೂ ಪೋಕ್ಸೊ ಕಾಯ್ದೆಯಡಿ ಸೆ. 6 ಮತ್ತು ಪ.ಜಾ/ಪ.ಪಂ ದೌರ್ಜನ್ಯ ತಡೆ ಕಾಯ್ದೆಯಡಿ ಸೆ.3 (1)(ಡಬ್ಲ್ಯೂ)(1)(2), 3(2) (ವಿಎ)ಯಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ 39 ಸಾಕ್ಷಿದಾರರ ಸಹಿ ಸಂಗ್ರಹಿಸಿ ಮಂಗಳೂರಿನ ಒಂದನೇ ಹೆಚ್ಚುವರಿ ಹಾಗೂ ಜಿಲ್ಲಾ ತ್ವರಿತಗತಿಯ ನ್ಯಾಯಾಲಯ (ಎಫ್‌ಟಿಎಸ್‌ಸಿ-1)ಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶೆ ಮಂಜುಳಾ ಇಟ್ಟಿ 2023ರ ಅ.5ರಂದು ಪ್ರಕರಣದ ವಿಚಾರಣೆ ಆರಂಭಿಸಿ ನ.17ರಂದು ವಿಚಾರಣೆ ಪೂರ್ಣಗೊಳಿಸಿದ್ದರು. ವಿಚಾರಣೆಯ ಮಧ್ಯೆ ಸಂತ್ರಸ್ತೆ ಹಾಗೂ ಸಂತಸ್ತೆಯ ಕಡೆಯವರು ಪ್ರತಿಕೂಲ ಸಾಕ್ಷಿ ಹೇಳಿದ್ದರು. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ವಾದ ಮಂಡಿಸಿದ್ದರು.
ಪ್ರಕರಣದಲ್ಲಿ ಸಂತ್ರಸ್ತೆಗೆ ಆದ ಅನ್ಯಾಯಕ್ಕೆ ಸರಕಾರದಿಂದ ಎಫ್‌ಐಆರ್ ದಾಖಲಾದಾಗ 1.25 ಲಕ್ಷ ರೂ. ಹಾಗೂ ಪ್ರಕರಣದ ದೋಷಾರೋಪಣಾ ಪತ್ರ ಸಲ್ಲಿಸಿದಾಗ 2.50 ಲಕ್ಷ ರೂ. ಪರಿಹಾರ ಧನವನ್ನು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಮಂಜೂರು ಮಾಡಿದ್ದರು. ಸಂತ್ರಸ್ತೆಯು ಅಪ್ರಾಪ್ತಳಾಗಿದ್ದ ಕಾರಣ ಚಿಕ್ಕಮ್ಮನ ಖಾತೆಗೆ ಹಣ ಜಮೆ ಮಾಡಿದ್ದರು.
ಸಂತ್ರಸ್ತೆಗೆ ನೀಡಿದ 3.75 ಲಕ್ಷ ರೂ. ಪರಿಹಾರದ ಆದೇಶ ಪ್ರತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು, ಸಂತ್ರಸ್ತೆಯು ಪ್ರತಿಕೂಲ ಸಾಕ್ಷಿ ನುಡಿದಿದ್ದಾರೆ. ವಿಚಾರಣೆ ಮಾಡಿದ ತನಿಖಾಧಿಕಾರಿಯ ಸಾಕ್ಷ್ಯವನ್ನು ಆಧರಿಸಿ ಪರಿಹಾರದ ಮೊತ್ತವನ್ನು ಸರಕಾರಕ್ಕೆ ಹಿಂದಿರುಗಿಸಲು ಆದೇಶಿಸಬೇಕೆಂದು ಮನವಿ ಮಾಡಿದ್ದರು.
ನ್ಯಾಯಾಲಯವು ಪ್ರಕರಣದ ವಿಚಾರವನ್ನು ಪರಿಗಣಿಸಿ 2023ರ ಡಿ.26ರಂದು ಸಂತ್ರಸ್ತೆಗೆ ವಿತರಿಸಲಾಗಿದ್ದ ಪರಿಹಾರದ ಮೊತ್ತವನ್ನು ಉಪನಿರ್ದೇಶಕರು ವಸೂಲಿ ಮಾಡಿ ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ನೀಡುವಂತೆ ನಿರ್ದೇಶಿಸಿತ್ತು. ಅದರಂತೆ ಜ.4ರಂದು 3.75 ಲಕ್ಷ ರೂ.ವನ್ನು ಸಂತ್ರಸ್ತೆಯ ಚಿಕ್ಕಮ್ಮನಿಂದ ವಸೂಲು ಮಾಡಿ ಜಿಲ್ಲಾಧಿಕಾರಿ ಮತ್ತು ಉಪನಿರ್ದೇಶಕರ ಜಂಟಿ ಖಾತೆಗೆ ಇಲಾಖಾ ಉಪನಿರ್ದೇಶಕರು ಮರು ಜಮೆ ಮಾಡಿದ್ದಾರೆ.
ಪರಿಶಿಷ್ಟ ಜಾತಿ ಹಾಗೂ ಪಂಗಡದ ದೌರ್ಜನ್ಯ ತಡೆ ಪ್ರಕರಣಗಳಲ್ಲಿ ಇಂತಹ ಗಂಭೀರವಾದ ಅಪರಾಧಗಳು ಘಟಿಸಿದಾಗ ಪ್ರಕರಣದ ತನಿಖೆಯನ್ನು ಮೇಲ್ದರ್ಜೆಯ ಅಧಿಕಾರಿಗಳಾದ ಸಹಾಯಕ ಪೊಲೀಸ್ ಆಯುಕ್ತರು ಕೈಗೊಂಡು ದೋಷಾ ರೋಪಣೆ ಪತ್ರ ಸಲ್ಲಿಸುತ್ತಾರೆ. ಸರಕಾರವೂ ಕೂಡ ಅಪಾರ ಪ್ರಮಾಣದ ಮೊತ್ತವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡುತ್ತದೆ. ಈ ಎರಡೂ ಪ್ರಕ್ರಿಯೆಯ ಮೂಲ ಉದ್ದೇಶ ಪ.ಜಾ./ಪ.ಪಂ ದೌರ್ಜನ್ಯಕ್ಕೆ ಒಳಗಾಗಬಾರದು ಮತ್ತು ಸಂತ್ರಸ್ತರಿಗೆ ಸಮರ್ಪಕ ಆರ್ಥಿಕ ನೆರವು ಲಭಿಸಬೇಕು ಎಂಬುದಾಗಿತ್ತು. ಸಂತ್ರಸ್ತೆಯು ಪ್ರತಿಕೂಲ ಸಾಕ್ಷಿ ನುಡಿದ ಕಾರಣ ಪರಿಹಾರ ಧನವನ್ನು ವಾಪಸ್ ಪಡೆದು ಸರಕಾರದ ಖಾತೆಗೆ ಜಮೆ ಮಾಡಿರುವುದು ಅಪರೂಪದ ವಿದ್ಯಮಾನವಾಗಿದೆ. ಪರಿಹಾರದ ಮೊತ್ತವನ್ನು ಹಿಂದಿರುಗಿಸಬೇಕೆಂಬ ಭಯ ಸಂತ್ರಸ್ತರಲ್ಲಿ ಉಂಟಾದರೆ ಪ್ರತಿಕೂಲ ಸಾಕ್ಷಿ ನುಡಿಯುವ ಪರಿಪಾಠ ಸ್ಥಗಿತಗೊಂಡು ಉತ್ತಮ ರೀತಿಯ ನ್ಯಾಯದಾನ ದೊರಕುವ ಸಂದೇಶವನ್ನು ಈ ಅಪರೂಪದ ತೀರ್ಪು ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.