ಕವಿ ಕನಕದಾಸರು ಹಲವು ವ್ಯಕ್ತಿತ್ವಗಳ ಸಂಗಮ: ಕಾ.ತ. ಚಿಕ್ಕಣ್ಣ
ಮಂಗಳೂರು: ಕನಕದಾಸರು ಕೇವಲ ಹರಿದಾಸರಷ್ಟೇ ಅಲ್ಲ. ಕವಿ, ಸಮಾಜ ಸುಧಾರಕ ಹೀಗೆ ಹಲವು ವ್ಯಕ್ತಿತ್ವಗಳು ಅವರಲ್ಲಿ ಸಮಾಗಮಗೊಂಡಿದೆ ಎಂದು ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಧೋಧನಾ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ಹೇಳಿದ್ದಾರೆ.
ನಗರದ ತುಳು ಸಾಹಿತ್ಯ ಅಕಾಡೆಮಿಯ ಸಭಾಭವನ‘ ತುಳು ಭವನ’ದಲ್ಲಿ ಬುಧವಾರ ನಡೆದ ಕನಕದಾಸ ಮತ್ತು ತತ್ವಪದ ಕಾರರ ಅಧ್ಯಯನ: ಮುನ್ನೂಟ, ವಿದ್ವಾಂಸರೊಂದಿಗೆ ಸಮಾಲೋಚನಾ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯ ಸರಕಾರ 2024-25 ನೇ ಸಾಲಿನಲ್ಲಿ ಕನಕ ಸಾಹಿತ್ಯದ ಜೊತೆಗೆ, ತತ್ವ ಪದಸಾಹಿತ್ಯ,ಕೀರ್ತನ ಸಾಹಿತ್ಯ ಮತ್ತು ಭಕ್ತಿ ಚಳವಳಿಯನ್ನು ಸೇರಿಸಿಕೊಂಡು ಕನಕ ಅಧ್ಯಯನದ ವ್ಯಾಪ್ತಿಯನ್ನು ವಿಸ್ತರಿಸಿದ್ದು, ಇದಕ್ಕಾಗಿ ಒಂದು ಕೋಟಿ ರೂ. ಅನುದಾನ ಮೀಸಲಿರಿದೆ ಎಂದು ಹೇಳಿದರು.
ಕನಕದಾಸರನ್ನು ಕೇಂದ್ರವಾಗಿಟ್ಟುಕೊಂಡು ಮಧ್ಯಕಾಲದ ಭಕ್ತಿ ಪರಂಪರೆಯ ಬಗೆಗೆ ಅಧ್ಯಯನ ಮತ್ತು ಹೊಸತಲೆಮಾರಿಗೆ ಅರಿವನ್ನು ಮೂಡಿಸುವ ಉದ್ದೇಶದಿಂದ ಕರ್ನಾಟಕ ಸರಕಾರದ ಸಂಸ್ಕೃತಿ ಇಲಾಖೆಯು ಬೆಂಗಳೂರಿನಲ್ಲಿ ರಾಷ್ಟ್ರೀಯ ಸಂತ ಕವಿ ಕನಕ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.ಕನಕ ಅಧ್ಯಯನದ ವ್ಯಾಪ್ತಿ ಈಗ ದೊಡ್ಡದಾ ಗಿದೆ. ಚಿಂತನೆಗಳು ವಿಸ್ತಾರವಾಗಿದೆ. ಕೇಂದ್ರದ ಚಟುವಟಿಕೆಗಳನ್ನು ವಿಸ್ತರಿಸಿ ತತ್ತ್ವಪದ, ದಾಸ ಸಾಹಿತ್ಯ, ಕರ್ನಾಟಕದ ಭಕ್ತಿಪರಂಪರೆಗಳನ್ನೂ ಒಳಗೊಂಡಂತೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಈ ನಿಟ್ಟಿನಲ್ಲಿ ಅಲ್ಲಲ್ಲಿ ಕಾರ್ಯಕ್ರಮ ನಡೆಸಿ ವಿದ್ವಾಂಸರಿಂದ ಸಲಹೆ ಸೂಚನೆ ಪಡೆಯಲಾಗುತ್ತಿದೆ ಎಂದರು.
ಕನಕದಾಸರ ಸಾಮಾಜಿಕ ಸಂವೇದನೆ, ಧಾರ್ಮಿಕ ಚಿಂತನೆ ಮತ್ತು ಭಕ್ತಿ ಪರಂಪರೆಯಲ್ಲಿ ಅವರು ಗುರುತಿಸಿಕೊಂಡು ಪ್ರತಿಪಾದಿಸಿದ ಸಾಮಾಜಿಕ ,ಸಾಂಸ್ಕೃತಿಕ ಮತ್ತು ವೈಚಾರಿಕ ಚಿಂತನೆಗಳು ಅತ್ಯಂತ ಪ್ರಸ್ತುತವಾಗಿದೆ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಪರಂಪರೆಯಾಗಿ ಬೆಳೆದು ಬಂದಿದಿರುವ ಕೀರ್ತನಾ ಸಾಹಿತ್ಯ ವನ್ನು ಜನಸಾಮಾನ್ಯರಿಗೆ ಪರಿಚಯಿಸಲು ಪುಸ್ತಕ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಪುಸ್ತಕ ಹೊರತಲಾಗಿದೆ.ತತ್ವ ಪದ ಸಾಹಿತ್ಯ ೫೦ ಸಂಪುಟಗಳಲ್ಲಿ ಬಂದಿದೆ. ಕರಾವಳಿಯಲ್ಲಿ ತತ್ವಪದ ಸಾಹಿತ್ಯದ ಸಂಪುಟ ವನು ್ನಹೊರತರುವ ಪ್ರಯತ್ನ ನಡೆಸಲಾಗುವುದು. ತತ್ವ ಪದಕಾರರ ಕಿರುಪರಿಚಯದ ಕಿರು ಗ್ರಂಥ ವನ್ನು ಹೊರತರುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಕಳೆದ 5 ವರ್ಷಗಳಲ್ಲಿ 250 ಕಾಲೇಜುಗಳಲ್ಲಿ 250 ಕಾರ್ಯಕ್ರಮ ನಡೆಸಲಾಗಿದ್ದು, 50 ಸಾವಿರ ಮಂದಿ ವಿದ್ಯಾರ್ಥಿಗಳಿಗೆ ಕನಕ ಚಿಂತನೆಯ ಅರಿವು ಮೂಡಿಸಲಾಗಿದೆ. ಫೆಲೋಶಿಪ್ ಮೂಲಕ 17 ಗ್ರಂಥಗಳು ಹೊರತರಲಾಗಿದೆ. ೮೦ ಪುಸ್ತಕಗಳು ಪ್ರಕಟವಾಗಿದೆ ಎಂದು ಮಾಹಿತಿ ನೀಡಿದರು.
ಕನಕ ಸಾಹಿತ್ಯ, ತತ್ತ್ವಪದ ಸಾಹಿತ್ಯ, ಕೀರ್ತನಾ ಸಾಹಿತ್ಯವನ್ನು ಅನುಭಾವಿಕ ನೆಲೆಗಳಲ್ಲಿ ಗುರುತಿಸಿ ತೌಲನಿಕ ಅಧ್ಯಯನ ಮಾಡುವುದು ಮತ್ತು ಈ ನಿಟ್ಟಿನಲ್ಲಿ ವಿಚಾರ ಸಂಕಿರಣ ಏರ್ಪಡಿಸಲಾಗುತ್ತಿದೆ.
ಕರ್ನಾಟಕ ಸರಕಾರ ಸಾಂಸ್ಕೃತಿಕ ನಾಯಕ ಎಂದು ಬಸವಣ್ಣನವರನ್ನು ಘೋಷಣೆ ಮಾಡಿ ಸಾಮಾಜಿಕ ಸಾಮರಸ್ಯ, ಸಹಬಾಳ್ವೆಯ ಮಹತ್ವವನ್ನು ಸಾರಿದೆ. ಈ ನಿಲುವು ಸಮೂಹದಲ್ಲಿ ಅನ್ವಯವಾಗುವಂತೆ ಮಾಡುವ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸಮಾಲೋಚನ ಸಭೆಯಲ್ಲಿ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವರಿಸ್, ತುಳು ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ, ಮಂಗಳೂರು ವಿವಿ ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ, ಉಡುಪಿ ಕನಕದಾಸ ಅಧ್ಯಯನ ಕೇಂದ್ರದ ಡಾ.ಜಗದೀಶ್ ಶೆಟ್ಟಿ, ಹಿರಿಯ ವಿದ್ವಾಂಸರಾದ ಪ್ರೊ.ಎ ವಿ ನಾವಡ, ಡಾ.ಶಿವರಾಮ ಶೆಟ್ಟಿ, ಪ್ರೊ. ಎ.ಎಸ್ ಕೃಷ್ಣಯ್ಯ ಉಡುಪಿ, ಡಾ.ಉದಯಕುಮಾರ್ ಇರ್ವತ್ತೂರು, ಪ್ರೊ.ಕೃಷ್ಣಮೂರ್ತಿ ಸುರತ್ಕಲ್, ಡಾ.ಮೀನಾಕ್ಷಿ ರಾಮಚಂದ್ರ, ಬೈಕಾಡಿ,ರೂಪಕಲಾ ಆಳ್ವ, ಡಾ.ಜ್ಯೋತಿ ಚೇಳ್ಯಾರ್, ಡಾ. ವಾಸುದೇವ ಬೆಳ್ಳೆ, ಬೆನೆಟ್ ಅಮ್ಮಣ್ಣ, ಡಾ.ಜಯಪ್ರಕಾಶ್ ಶೆಟ್ಟಿ, ಪ್ರೊ.ಅಕ್ಷಯ ಶೆಟ್ಟಿ, ಡಾ.ವಿಜಯಕುಮಾರ್ ಮೊಳೆಯಾರ, ಡಾ. ಸಂಪೂರ್ಣಾನಂದ ಬಳ್ಕೂರು ಮತ್ತಿತರರು ಭಾಗವಹಿಸಿದ್ದರು.
ಸಭೆಯಲ್ಲಿ ಕರಾವಳಿಯಲ್ಲಿರುವ ಭಜನಾ ಸಾಹಿತ್ಯ ಪರಂಪರೆಯ ಕುರಿತು ಅಧ್ಯಯನ ಮತ್ತು ಪ್ರಕಟಣೆ, ಸ್ಥಳೀಯ ಭಕ್ತಿ ಪರಂಪರೆಯ ಹಲವು ಧಾರೆಗಳ ಪರಿಚಯ ಕೃತಿ ಪ್ರಕಟನೆೆ, ತತ್ತ್ವಪದಕಾರರ ಕುರಿತು ಕೃತಿಗಳ ಪ್ರಕಟಣೆ, ಶಾಲಾ ಮಕ್ಕಳಿಗೆ ಕನಕದಾಸರನ್ನು ಪರಿಚಯಿಸುವ ಕಾರ್ಯಕ್ರಮಗಳ ಸಂಯೋಜನೆ, ಕರ್ನಾಟಕದ ಇತರೆ ಭಾಗದ ಭಕ್ತಿ ಪರಂಪರೆಯನ್ನು ಕರಾವಳಿಗೆ ಪರಿಚಯಿಸುವ ಕಾರ್ಯಕ್ರಮಗಳಿಗೆ ಒತ್ತು ಕೊಡಬೇಕೆಂಬ ಸೂಚನೆಗಳನ್ನು ವಿದ್ವಾಂಸರು ನೀಡಿದರು.
ಬೆಂಗಳೂರು ಕನಕದಾಸ ಕೇಂದ್ರದ ಕಾರ್ಯಾನುಷ್ಠಾನ ಮಂಡಳಿಯ ನಾಮನಿರ್ದೇಶಿತ ಸದಸ್ಯೆ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಸ್ವಾಗತಿಸಿ, ವಂದಿಸಿದರು.
‘‘ಕನಕದಾಸ ಅಧ್ಯಯನದ ವ್ಯಾಪ್ತಿಯನ್ನು ವಿಸ್ತರಿಸಿರುವುದು ದೊಡ್ಡ ಶಕ್ತಿ ತಂದಿದೆ. ಕನಕದಾಸರ ಅಧ್ಯಯನದ ಮೂಲಕ ಕರ್ನಾಟಕ ದಲ್ಲಿ ಹೊಸದೃಷ್ಟಿಕೋನ ಹುಟ್ಟಿಕೊಂಡಿದೆ. ತತ್ವಪದಗಳ ಬಗ್ಗೆ ಹಲವರಿಗೆ ಜ್ಞಾನ ಇಲ್ಲ. ಹೀಗಾಗಿ ಇದಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ"
-ಪ್ರೊ.ಎ.ವಿ.ನಾವಡ, ವಿದ್ವಾಂಸರು
‘‘ಪ್ರತಿವರ್ಷ ರಾಜ್ಯದ ತಾಲೂಕು, ಜಿಲ್ಲಾ ಮಟ್ಟದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಗಳಲ್ಲಿ ಭಕ್ತಿ ಪಂಥಕ್ಕೆ ಸಂಬಂಧಿಸಿ ಒಂದು ಗೋಷ್ಠಿಯನ್ನು ಮಾಡಿದರೆ ಅಲ್ಲಿ ಮಂಡನೆಯಾಗುವ ಪೇಪರ್‌ಗಳನ್ನು ಒಟ್ಟು ಸೇರಿಸಿದರೆ ದೊಡ್ಡ ಮಾಹಿತಿ ಕಣಜ ಸಂಗ್ರಹ ಸಾಧ್ಯ. -ಡಾ.ಉದಯ ಕುಮಾರ್ ಇರ್ವತ್ತೂರು , ನಿವೃತ್ತ ಪ್ರಾಂಶುಪಾಲರು
‘‘ಗಮಕ ಪರಂಪರೆ ದ.ಕ.ಜಿಲ್ಲೆಯಲ್ಲಿ ಪ್ರಸಿದ್ಧ ಪರಂಪರೆಯಾಗಿದೆ. ಭಜನೆ ಇಲ್ಲಿ ಪ್ರತಿಯೊಂದು ಕಾರ್ಯಗಳಲ್ಲಿ ಮುಖ್ಯ ವಾಗಿದೆ. ಹೀಗಾಗಿ ಸಾಂಪ್ರದಾಯಿಕ ಭಜನಾ ಕ್ರಮಗಳನ್ನು ದಾಖಲಿಸುವ ಪ್ರಯತ್ನ ಅಗತ್ಯ.
-ಪ್ರೊ.ಕೃಷ್ಣ ಮೂರ್ತಿ, ಪ್ರಾಂಶುಪಾಲರು ಗೋವಿಂದದಾಸ ಕಾಲೇಜು ಸುರತ್ಕಲ್
"ರಾಜ್ಯದ ವಿವಿಧ ಅಧ್ಯಯನ ಕೇಂದ್ರ ಕನಕ ಪರ ಅಧ್ಯಯನ ಕೇಂದ್ರಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಿದರೆ ಒಂದೇ ವಿಷಯದ ಬಗ್ಗೆ ಬೇರೆ ಬೇರೆ ಕೇಂದ್ರಗಳಿಂದ ಪುನರಾವರ್ತನೆ ತಪ್ಪುತ್ತದೆ ಮತ್ತು ಕನಕದಾಸರ ಚಿಂತನೆಗಳು ಪರಿಣಾಮಕಾರಿಯಾಗಿ ಜನರಿಗೆ ತಲುಪಲು ಕೇಂದ್ರಗಳ ಸಮನ್ವಯತೆಯ ಮೂಲಕ ಸಾಧ್ಯ".
-ಡಾ. ಧನಂಜಯ ಕುಂಬ್ಳೆ, ಮಂಗಳೂರು ವಿವಿ
‘‘ಈಗಾಗಲೇ ಕೈಗೆತ್ತಿಕೊಂಡಿರುವ ಕೆಲಸವನ್ನು ಅಧ್ಯಯನ ಕೇಂದ್ರದಿಂದ ಸಮರ್ಪಕವಾಗಿ ಮುಗಿಸಬೇಕು. ಸ್ಥಳೀಯ ಪರಂಪರೆಗಳಿಗೆ ಒತ್ತು ಕೊಡುವ ಕೆಲಸಗಳಾಗಬೇಕು. ಎಲ್ಲರನ್ನೂ ಒಂದುಗೂಡಿಸುವ ಭಜನೆಯ ಮೂಲಸ್ವರೂಪವನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನ ಅಗತ್ಯ"
-ಪ್ರೊ.ಶಿವರಾಮ ಶೆಟ್ಟಿ, ನಿವೃತ್ತ ಪ್ರಾಧ್ಯಾಪಕರು