ದೇಶದ ಸುಸ್ಥಿರ ಅಭಿವೃದ್ಧಿಗೆ ಜನಸಂಖ್ಯೆ ನಿಯಂತ್ರಣ ಆವಶ್ಯಕ-ಗಿರೀಶ್ ನಂದನ್
ಪುತ್ತೂರು: ದೇಶದಲ್ಲಿರುವ ಸಂಪನ್ಮೂಲಗಳನ್ನು ಸಮಗ್ರತೆಯಿಂದ ಬಳಸಿಕೊಳ್ಳಬೇಕು. ಸಂಪನ್ಮೂಲಗಳನ್ನು ಮುಂದಿನ ಪೀಳೀಗೆಗೆ ಕೊಂಡೊಯ್ಯವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಂಪನ್ಮೂಲಗಳು ಉಳಿಸಿ ದೇಶದ ಸುಸ್ಥಿರ ಅಭಿವೃದ್ಧಿಯಾಗಬೇಕಾದರೆ ಜನಸಂಖ್ಯೆ ನಿಯಂತ್ರಣ ಅತೀ ಆವಶ್ಯಕ ಎಂದು ಸಹಾಯಕ ಆಯುಕ್ತ ಗಿರೀಶ್ ನಂದನ್ ಹೇಳಿದರು.
ತಾಲೂಕು ಆರೋಗ್ಯಾಧಿಕಾರಿಯವರ ಕಚೇರಿ, ಪ್ರಗತಿ ಪ್ಯಾರಮೆಡಿಕಲ್ ಕಾಲೇಜು ಮತ್ತು ಹೆಚ್.ಪಿ.ಆರ್ ಪ್ಯಾರ ಮೆಡಿಕಲ್ ಕಾಲೇಜು ಇದರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಪುತ್ತೂರಿನ ಪುರಭವನದಲ್ಲಿ ನಡೆದ ವಿಶ್ವಜನ ಸಂಖ್ಯಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಸಂಖ್ಯೆಯು ದಿನೇ ದಿನೇ ಬೆಳೆಯುತ್ತಿದೆ. ವಿಶ್ವದ ಜನಸಂಖ್ಯೆ 800ಕೋಟಿ ಆಗಿದೆ. ಅದರ ಪರಿಣಾಮ ನಮ್ಮ ಹಿಂದೇಯೇ ಇದೆ. ಜನಸಂಖ್ಯೆ ಏರಿಕೆ ಯಿಂದ ಭೂಮಿ ಕ್ಷೀಣಿಸುತ್ತಾ ಹೋಗುತ್ತದೆ. ಇರುವಂತ ಸಂಪನ್ಮೂಲಗಳನ್ನೇ ಬಳಸುವುದು ಅಧಿಕವಾಗುತ್ತದೆ. ಸಂಪನ್ಮೂಲಗಳ ಕೊರತೆ ತಡೆಯುವ ನಿಟ್ಟಿನಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸಬೇಕು. ಇದಕ್ಕಾಗಿ ಆರೋಗ್ಯ ಇಲಾಖೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಎಲ್ಲರ ಸಹಕಾರ ದಿಂದ ಮಾತ್ರ ಸಾಧ್ಯ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಡಾ ನರೇಂದ್ರ ರೈ ದೇರ್ಲ ಮಾತನಾಡಿ, ಜನಸಂಖ್ಯಾ ದಿನಾಚರಣೆಯನ್ನು ಪ್ರತಿಯೊಬ್ಬ ಎಚ್ಚರಿಕೆಯಿಂದ ಆಚರಿಸಬೇಕು. ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಆವಶ್ಯಕವಾಗಿ ಭಾಗವಹಿಸಬೇಕು. ಆಧುನಿ ಕರಣದಿಂದ ಪರಿಸರಕ್ಕೆ ದುಸ್ವಪ್ನಗಳಾಗಿದ್ದೇವೆ. ಸಿಲಿಕಾನ್ ಸಿಟಿಯ ತನಕ ಬಂದಿದ್ದರೂ ಅಪಾಯಕಾರಿ ಸ್ಥಿತಿಯಲ್ಲಿದ್ದೇವೆ. ಜನರಿಂದ ಜನರಿಗೆ ಪರಿಸರಕ್ಕೆ ತೊಂದರೆ ಆಗುತ್ತದೆ. ಅತಿವೃಷ್ಠಿ, ಅನಾವೃಷ್ಠಿಯಿಂದ ಆಯ ತಪ್ಪುವ ದಿನ ಹತ್ತಿರದಲ್ಲಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ನಗರ ಸಭಾ ಪೌರಾಯುಕ್ತ ಮಧು ಎಸ್.ಮನೋಹರ್, ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ಪ್ರೀತಾ ಮಾತನಾಡಿದರು. ತಹಶಿಲ್ದಾರ್ ಜೆ.ಶಿವಶಂಕರ್, ಹೆಚ್.ಪಿ.ಆರ್ ಪ್ಯಾರಾ ಮೆಡಿಕಲ್ ಕಾಲೇಜಿನ ಇಮ್ನೀಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಸರಕಾರದಿಂದ ಶ್ರೇಷ್ಠ ವೈದ್ಯ ಪ್ರಶಸ್ತಿ ಪುರಸ್ಕೃತ ಸರಕಾರಿ ಆಸ್ಪತ್ರೆಯ ಎಲುಬು ತಜ್ಞ ಡಾ.ಅಜೇಯ್, ಅತೀ ಹೆಚ್ಚು ಪುರುಷ ಸಂತಾನ ಹರಣ ಶಸ್ತ್ರಚಿಕಿತ್ಸೆಯಲ್ಲಿ ಪ್ರಮುಖ ಸೇವೆ ಸಲ್ಲಿಸಿದ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಿಖಿಲ್, ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಪಕಿ ನಂದಿನಿ, ಶಿರಾಡಿ ಪ್ರಾಥಮನಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಕುಸುಮಾವತಿ ಹಾಗೂ ಅತೀ ಹೆಚ್ಚು ಮಹಿಳಾ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸುವಲ್ಲಿ ಸೇವೆ ಸಲ್ಲಿಸಿದ ಡಾ.ನವೀನ್ ಅವರನ್ನು ಸನ್ಮಾನಿಸಲಾಯಿತು.
ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಮಿತ್ ಸ್ವಾಗತಿಸಿದರು. ಉಪ್ಪಿನಂಗಡಿ ಸಿ.ಆರ್.ಪಿ ಅಶ್ರಫ್ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಾವತಿ ವಂದಿಸಿದರು.