‘ಪ್ರೈಡ್ ಆಫ್ ಕೆನರಾ, ಟ್ರೂ ಸನ್ ಆಫ್ ಇಂಡಿಯಾ, ಫಾ.ಜೆರೋಮ್ ಡಿಸೋಜ’ ಕೃತಿ ಬಿಡುಗಡೆ
ಮಂಗಳೂರು, ಆ.7: ಸಂತ ಅಲೋಶಿಯಸ್ ಪ್ರಕಾಶನ ಹೊರತಂದಿರುವ ‘ಪ್ರೈಡ್ ಆಫ್ ಕೆನರಾ, ಟ್ರೂ ಸನ್ ಆಫ್ ಇಂಡಿಯಾ, ಫಾ.ಜೆರೋಮ್ ಡಿಸೋಜ’ ಕೃತಿ ಬಿಡುಗಡೆ ಕಾರ್ಯಕ್ರಮವು ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ಬಿಡುಗಡೆಗೊಳಿಸಲಾಯಿತು.
ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಂಗಳೂರು ಧರ್ಮಪ್ರಾಂತದ ಬಿಷಪ್ ಪೀಟರ್ ಪೌಲ್ ಸಲ್ಡಾನ ಒಂದು ಪ್ರದೇಶದ ಶ್ರೇಷ್ಠ ವ್ಯಕ್ತಿತ್ವಗಳನ್ನು ತಿಳಿಯವುದೆಂದರೆ ಅಲ್ಲಿನ ಸಾಂಸ್ಕೃತಿಕ ಖಜಾನೆಯನ್ನು ಅರಿಯುವುದಕ್ಕೆ ಸಮಾನ ವಾಗಿದೆ. ಜೆರೋಮ್ ಒಂದು ಪೆನ್ಸಿಲ್‌ನಂತೆ ಇದ್ದರು. ಒಳ್ಳೆಯದನ್ನೇ ಮಾಡಿದ ಅವರು ಪದೇ ಪದೇ ತಮ್ಮನ್ನು ಮೊನಚು ಗೊಳಿಸುತ್ತ ಸಮಾಜಕ್ಕೆ ಅನುಕೂಲ ಆಗುವಂತೆ ಮಾಡಿಕೊಳ್ಳುತ್ತಿದ್ದರು. ನಾಡಿಗೆ ಗೌರವ ತಂದುಕೊಟ್ಟ ಅವರನ್ನು ಹೊರಜಗತ್ತಿಗೆ ತಿಳಿಸುವ ಅಗತ್ಯವಿತ್ತು. ಆ ಕಾರ್ಯ ಈ ಕೃತಿಯ ಮೂಲಕವಾಗಿದೆ ಎಂದರು.
ಭಾರತದ ಸಂವಿಧಾನ ರಚನಾ ಸಮಿತಿಯ ಸದಸ್ಯರೂ ಆಗಿದ್ದ ಜೆರೋಮ್ ಉತ್ಕೃಷ್ಟ ದೇಶಭಕ್ತರಾಗಿದ್ದರು. ಅಲ್ಪ ಸಂಖ್ಯಾತರ ಹಕ್ಕುಗಳಿಗಾಗಿ ಹೊರಾಡಿದ್ದರು. ಅವರ ಬದುಕಿನಲ್ಲಿ ನಡೆದ ಅನೇಕ ಕುತೂಹಲಕಾರಿ ಘಟನಾವಳಿಗಳಿಗೆ ಈ ಪುಸ್ತಕ ಕನ್ನಡಿ ಹಿಡಿದಿದೆ. ಇದನ್ನು ಓದುವ ಮೂಲಕ ಸಂವಿಧಾನದೊಳಗೆ ಪ್ರವೇಶಿಸಲು ಅವಕಾಶವಾಗುತ್ತದೆ ಎಂದು ಬಿಷಪ್ ಹೇಳಿದರು.
ಮುಲ್ಕಿ ಚರ್ಚ್‌ನ ಧರ್ಮಗುರು ಸಿಲ್ವಸ್ಟರ್ ಡಿಕೋಸ್ತ ಮಾತನಾಡಿ ಮುಲ್ಕಿಯ ಬಹುತೇಕ ಮಂದಿಗೆ ಫಾದರ್ ಜೆರೋಮ್ ಅವರ ಬಗ್ಗೆ ಗೊತ್ತಿಲ್ಲ. ಹೀಗಾಗಿ ಈ ಪುಸ್ತಕ ಪ್ರಕಟಿಸಿರುವುದು ಶ್ಲಾಘನೀಯ ಎಂದರು.
ಲೇಖಕ, ಕಾಲೇಜಿನ ಪ್ರೊಫೆಸರ್ ಎಡ್ಮಂಡ್ ಫ್ರಾಂಕ್ ಮಾತನಾಡಿ ಜೆರೋಮ್ ಅವರ ಬದುಕಿನ ಮಹತ್ವದ ಘಟನೆಗಳೆಲ್ಲದಕ್ಕೂ ಆಗಸ್ಟ್ ಸಾಕ್ಷಿಯಾಗಿದೆ. ಈ ತಿಂಗಳಲ್ಲೇ ಕೃತಿ ಬಿಡುಗಡೆಯಾಗಿರುವುದು ಕಾಕತಾಳೀಯ ಎಂದು ಹೇಳಿದರು.
ಕರ್ನಾಟಕ ಧರ್ಮಪ್ರಾಂತದ ಅಪೋಸ್ಟೊಲಿಕ್ ಕಾರ್ಮೆಲ್ ಸಿಸ್ಟರ್ ಮರಿಯಾ ಶಮಿತಾ, ಜೆರೋಮ್ ಡಿಸೋಜ ಅವರ ಮರಿ ಮೊಮ್ಮಗ ಎಡ್ವಿನ್ ಡಿಸೋಜ, ಕಾಲೇಜಿನ ಪ್ರಾಂಶುಪಾಲ ಫಾ.ಪ್ರವೀಣ್ ಮಾರ್ಟಿಸ್, ಪ್ರಕಾಶನದ ಸಂಚಾಲಕ ಆಲ್ವಿನ್ ಡೇಸಾ, ನಿರ್ದೇಶಕಿ ವಿದ್ಯಾ ವಿ. ಡಿಸೋಜ ಹಾಗೂ ಪತ್ರಕರ್ತ ರೊನಾಲ್ಡ್ ಫರ್ನಾಂಡಿಸ್ ಉಪಸ್ಥಿತರಿದ್ದರು.