ಕೇರಳದ ಬಗ್ಗೆ ಮಲತಾಯಿ ಧೋರಣೆ ಹೊಂದಿಲ್ಲ: ನಿರ್ಮಲಾ ಸೀತಾರಾಮನ್
ಸಿಟಿಝನ್ ಕೌನ್ಸಿಲ್ ಮಂಗಳೂರು ಘಟಕದ ವತಿಯಿಂದ ಸಂವಾದ ಕಾರ್ಯಕ್ರಮ
ಮಂಗಳೂರು: ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯದ ಬಗ್ಗೆ ಕೇಂದ್ರ ಸರಕಾರ ಮಲತಾಯಿ ಧೋರಣೆ ಹೊಂದಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಅವರು ಸಿಟಿಝನ್ ಕೌನ್ಸಿಲ್ ಮಂಗಳೂರು ಘಟಕದ ವತಿಯಿಂದ ನಗರದ ಟಿ.ವಿ.ರಮಣ್ ಪೈ ಸಭಾಂಗಣದಲ್ಲಿ ಬುಧವಾರ ಹಮ್ಮಿ ಕೊಂಡ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ದೇಶದಲ್ಲಿ ಬಿಹಾರ, ಆಂಧ್ರಪ್ರದೇಶಗಳಲ್ಲಿ ಪ್ರಾಕೃತಿಕ ವಿಕೋಪಗಳ ಸಂದರ್ಭ ಕೇಂದ್ರ ಸಹಾಯ ನೀಡಿದೆ. ಆದರೆ ಮಣಿಪುರ, ಕೇರಳದಲ್ಲಿ ಏನು ಮಾಡುತ್ತಿಲ್ಲ. ಕರ್ನಾಟಕ, ಕೇರಳದ ಬಗ್ಗೆ ಕೇಂದ್ರ ಸರಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದರು.
ಯುವಜನರ ಕೌಶಲ್ಯ ಅಭಿವೃದ್ಧಿಗೆ ಕೇಂದ್ರ ಸರಕಾರದ ಮೂಲಕ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ದೇಶದಲ್ಲಿ ಸಾಕಷ್ಟು ಐಟಿಐ ಸೇರಿದಂತೆ ತಾಂತ್ರಿಕ ಸಂಸ್ಥೆ ಗಳಲ್ಲಿ ಶಿಕ್ಷಣ ಪಡೆದವರು ನಿರುದ್ಯೋಗಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಯುವ ಜನರ ಕೌಶಲ್ಯ ಅಭಿವೃದ್ಧಿಗೆ ದೇಶದ ಸುಮಾರು 500 ಕಂಪೆನಿಗಳ ಮೂಲಕ ಇಂಟರ್ನ್ಶಿಪ್ ಅವಕಾಶವನ್ನು ನೀಡಿ ಅವರು ಮುಂದೆ ಉದ್ಯೋಗ ಪಡೆಯಲು ಸರಕಾರ ಬೆಂಬಲ ನೀಡುತ್ತಿದೆ. ದೇಶದಲ್ಲಿ ಕೃತಕ ಬುದ್ಧಿಮತ್ತೆಯ ಕೌಶಲಗಳನ್ನು ಐಟಿಐ ಹಂತದಲ್ಲಿ ಕಲಿಸಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಪೂರಕವಾಗಿ ದೇಶದ ಮೂರು ಉನ್ನತ ಐಐಟಿಗಳನ್ನು ಗುರುತಿಸಲಾಗಿದೆ. ಈ ಐಐಟಿಗಳಲ್ಲಿ ಒಂದರಲ್ಲಿ ಕೃಷಿ ಕೇತ್ರಕ್ಕೆ ಸಂಬಂಧಿಸಿದ ಸಂಶೋಧನೆ, ಇನ್ನೊಂದರಲ್ಲಿ ಆರೋಗ್ಯ ಕ್ಷೇತ್ರ ಹಾಗೂ ನಗರದ ಜೀವನಕ್ಕೆ ಪೂರಕವಾದ ಸೌಲಭ್ಯಗಳನ್ನು ಕೃತಕ ಬುದ್ಧಿಮತ್ತೆಯ ಮೂಲಕ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಂಶೋಧನೆ ನಡೆಸಲಾಗುತ್ತಿದೆ. ದೇಶದಲ್ಲಿ ಅನು ಸಂಧಾನ್ ಕೋಶದ ಮೂಲಕ ಯುವ ಸಂಶೋಧಕರು ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಲಾಗುತ್ತಿದೆ. ಈ ಸಾರ್ವಜನಿಕ ಸಹಭಾಗಿತ್ವವನ್ನು ಪಡೆದುಕೊಳ್ಳಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಡಿಜಿಟಲ್ ಸಾರ್ವಜನಿಕ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಹೂಡಿಕೆಯನ್ನು ಮಾಡಲು ಸರಕಾರ ಪ್ರೋತ್ಸಾಹ ನೀಡುತ್ತಿದೆ. ಸರಕಾರ ಎಲ್ಲರನ್ನೂ ಒಳಗೊಂಡ ಆರ್ಥಿಕ ಅಭಿವೃದ್ಧಿ, ಸಾರ್ವಜನಿಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಹೂಡಿಕೆಗೆ ಒತ್ತು ನೀಡುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ದೇಶದ ಶೇಕಡಾ 60 ರಷ್ಟು ಭಾಗ ಜಿಡಿಪಿಯಲ್ಲಿ ಐಟಿ ಮತ್ತು ಸೇವಾ ಕ್ಷೇತ್ರದ ಕೊಡುಗೆ ಇದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ದೇಶದಲ್ಲಿ ಕೋವಿಡ್ ನಂತರ ಹಲವು ಸವಾಲುಗಳಿದ್ದರೂ ಭಾರತ ವೇಗವಾಗಿ ಆರ್ಥಿಕ ಅಭಿವೃದ್ಧಿ ಸಾಧಿಸುತ್ತಿರುವ ದೇಶವಾಗಿದೆ. ಇದರ ಹಿಂದೆ ದೇಶದ ವಿವಿಧ ಕ್ಷೇತ್ರಗಳ ಜನರ ಕೊಡುಗೆ ಇದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಸಿಟಿಜನ್ ಕೌನ್ಸಿಲ್ ಮಂಗಳೂರು ಘಟಕದ ಉಪಾಧ್ಯಕ್ಷ ವಾಸುದೇವ ಕಾಮತ್ ಸ್ವಾಗತಿಸಿದರು.