ಸೌಜನ್ಯ, ಮಾವುತ ಸಾವಿನ ಪ್ರಕರಣಗಳ ನೈಜ ಆರೋಪಿಗಳ ರಕ್ಷಣೆ: ಹೋರಾಟ ಸಮಿತಿ ಆರೋಪ
ಮಂಗಳೂರು, ಜೂ.22: ಬೆಳ್ತಂಗಡಿಯಲ್ಲಿ 2012ರ ಅಕ್ಟೋಬರ್ 9ರಂದು ನಡೆದ ಸೌಜನ್ಯ ಕೊಲೆ ಪ್ರಕರಣ ಹಾಗೂ ಧರ್ಮಸ್ಥಳದ ಪುರ್ಜೆಬೈಲು ಎಂಬಲ್ಲಿ ನಡೆದ ಮಾವುತ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅಮಾಯಕರನ್ನು ಆರೋಪಿಗಳನ್ನಾಗಿಸಿ ನೈಜ ಆರೋಪಿಗಳನ್ನು ರಕ್ಷಣೆ ಮಾಡುವ ಕಾರ್ಯ ನಡೆದಿದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ಹೋರಾಟ ಸಮಿತಿ ಆರೋಪಿಸಿದೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಈ ಆರೋಪ ಮಾಡಿದ ಹೋರಾಟ ಸಮಿತಿಯ ಪ್ರಮುಖರಾದ ಗಿರೀಶ್ ಮಟ್ಟಣ್ಣನವರ್, ಸೌಜನ್ಯ ಪ್ರರಣ ಹಾಗೂ ಮಾವುತ ಕೊಲೆ ನಡೆದ ಸಮಯದಲ್ಲಿ ಎರಡೂ ಪ್ರಕರಣಗಳ ಪ್ರಭಾರಿ ತನಿಖಾಧಿಕಾರಿ, ಸಂತೋಷ್ ರಾವ್ ಅವರನ್ನೇ ಆರೋಪಿ ಮಾಡಿ ಭಿನ್ನ ವರದಿ ಸಲ್ಲಿಸಿರುವುದು ನ್ಯಾಯಾಲಯದ ದಾಖಲೆಗಳಿಂದ ಸಾಬೀತುಗೊಂಡಿದೆ ಎಂದು ಹೇಳಿದರು.
ಸೌಜನ್ಯ ಕೊಲೆ ಪ್ರಕರಣಕ್ಕೆ 21 ದಿನಗಳ ಮುಂಚಿತವಾಗಿ ನಾರಾಯಣ ಮಾವುತ ಹಾಗೂ ಯಮುನಾ ಜೋಡಿ ಕೊಲೆ ಪ್ರಕರಣ ನಡೆದಿತ್ತು. ಈ ಪ್ರಕರಣದ ನೈಜ ಆರೋಪಿಗಳನ್ನು ಪೊಲೀಸ್ ಇಲಾಖೆ 11 ವರ್ಷವಾದರೂ ಪತ್ತೆ ಹಚ್ಚದೆ ಸಿ ವರದಿ ನೀಡಿ ಮೌನವಾಗಿದೆ. ಇದೀಗ ಸಿ ವರದಿ ಸಂಪೂರ್ಣ ದೃಢೀಕೃತ ದಾಖಲೆಯನ್ನು ಸಮಿತಿಯು ಪಡೆದಿದೆ. ಮಾವುತ ಕುಟುಂಬದ ಜೋಡಿ ಕೊಲೆ ಪ್ರಕರಣದಲ್ಲಿಯೂ ಸೌನ್ಯ ಪ್ರಕರಣದಲ್ಲಿ ಪ್ರಸ್ತುತ ನಿರ್ದೋಷಿಯಾಗಿ ನ್ಯಾಯಾಲಯದಿಂದ ಬಿಡುಗಡೆಯಾಗಿರುವ ಸಂತೋಷ್ ರಾವ್ರನ್ನೇ ಆರೋಪಿ ಮಾಡಲಾಗಿದೆ. ಆ ಮೂಲಕ ಪ್ರರಕರಣದ ದಿಕ್ಕು ತಪ್ಪಿಸಿ ನೈಜ ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ಸಿ ವರದಿಯ ಅಧ್ಯಯನದಿಂದ ಬಹಿರಂಗಗೊಂಡಿದೆ ಎಂದು ಆರೋಪಿಸಿದರು.
ಸಿ ವರದಿಯ ಪ್ರಕಾರ ಸಂತೋಷ್ ರಾವ್ ನನ್ನು ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿ 2012ರ ಅಕ್ಟೋಬರ್ 18ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪಂಚರ ಸಮಕ್ಷಮ ರಕ್ತದ ಮಾದರಿ ಪಡೆಯಲಾಗಿದೆ. ಮಾದರಿಯನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದೆ. ಮಾವುತ ಜೋಡಿ ಕೊಲೆ ನಡೆದ 2012ರ ಸೆಪ್ಟಂಬರ್ 20 ರಾತ್ರಿ ಸಂತೋಷ್ ರಾವ್ ಧರ್ಮಸ್ಥಳದಲ್ಲಿಯೇ ಇದ್ದ ಬಗ್ಗೆ ವರದಿ ನೀಡಿದ್ದರೆ, ಸೌಜನ್ಯ ಪ್ರಕರಣದಲ್ಲಿ ಸಂತೋಷ್ ರಾವ್ ಘಟನೆಯ ದಿನ ಅಂದರೆ ಅಕ್ಟೋಬರ್ 9ರಂದು ಕುಕ್ಕೆ ಸುಬ್ರಹ್ಮಣ್ಯದಿಂದ ಬಂದಿರುವುದಾಗಿ ಹೇಳಲಾಗಿದೆ. ಮಾವುತ ಕೊಲೆ ಪ್ರಕರಣದಲ್ಲಿ ಸಂತೋಷ್ ರಾವ್ ನನ್ನು ದಸ್ತಗಿರಿ ಮಾಡಿದಾಗ ಆತನಿಂದ ರಕ್ತದ ಕಲೆ ಇರುವ ಬಟ್ಟೆಗಳನ್ನು ವಶಪಡಿಸಲಾಗಿತ್ತು. ಸೌಜನ್ಯ ಪ್ರಕರಣದಲ್ಲಿ ರಕ್ತದ ಕಲೆ ಇರುವ ಬಟ್ಟೆಯ ಉಲ್ಲೇಖವಿಲ್ಲ. ಮಾವುತ ಕೊಲೆ ಪ್ರಕರಣದಲ್ಲಿ ರಾಜೇಂದ್ರ ರೈ ಎಂಬ ವ್ಯಕ್ತಿಯಿಂದ ದೂರು ಪಡೆದು ಎಫ್ಐಆರ್ ಮಾಡಲಾಗಿದೆ. ಮೃತನ ಸಂಬಂಧಿಕರು ದೂರು ನೀಡಲು ಲಭ್ಯವಿದ್ದರೂ ದೂರು ಪಡೆದಿಲ್ಲ. ಜಾಗದ ತಕರಾರಿನಲ್ಲಿ ತಮ್ಮ ಪತಿ ಹಾಗೂ ಯಮುನಾ ಎಂಬವರ ಕೊಲೆ ನಡೆದಿರುವುದಾಗಿ ಮೃತ ನಾರಾಯಣ ಪತ್ನಿ ಸುಂದರಿ ಅವರು ಆ ಸಂದರ್ಭ ಎಸ್ಪಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಆರೋಪಿಸಿರುವ ವ್ಯಕ್ತಿಗಳನ್ನು ಕರೆಸಿ ವಿಚಾರಿಸುವ ವಿವರಣೆ ಸಿ ವರದಿಯಲ್ಲಿ ಇಲ್ಲ. ಕೊಲೆ ನಡೆದ ಸ್ಥಳ ಪಂಚನಾಮೆಯಲ್ಲಿ ನಾರಾಯಣನ ಮನೆ ಹಾಗ ಸುತ್ತಲಿನ ಜಾಗ ಮೃತರಿಗೆ ಸೇರಿದ್ದು ಎಂದು ಪಂಚರ ಸಮಕ್ಷಮ, ಕಂದಾಯ ಇಲಾಖೆ ದಾಖಲೆ ಪರಿಶೀಲನೆ ಮಾಡಿ ವರದಿ ಮಾಡಲಾಗಿದೆ. ಪ್ರಸಕ್ತ ಆ ಜಾಗದಲ್ಲಿ ಹೊಟೇಲ್ ನಿರ್ಮಾಣವಾಗಿದೆ ಎಂದರು.
ಎರಡೂ ಪ್ರಕರಣಗಳಲ್ಲಿ ಪ್ರಭಾರಿ ತನಿಖಾಧಿಕಾರಿ, ಸಂತೋಷ್ ರಾವ್ ಧರ್ಮಸ್ಥಳದಲ್ಲೇ ಇದ್ದ ಬಗ್ಗೆ ಭಿನ್ನ ವರದಿ ನೀಡಿದ್ದಾರೆ. ಮಾವುತ ಜತೆ ಮೃತಪಟ್ಟಿದ್ದ ಯಮುನಾ ಎಂಬಾಕೆಯ ಮೇಲೆ ಅತ್ಯಾಚಾರ ನಡೆದ ಸಾಧ್ಯತೆ ಬಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿ, ವರದಿಯಲ್ಲಿ ತಿಳಿಸಿ ಎಫ್ಎಸ್ಎಲ್ ವರದಿಗೆ ಶಿಫಾರಸ್ಸು ಮಾಡಿದ್ದಾರೆ. ಆದರೆ ಅತ್ಯಾಚಾರ ಪ್ರಕರಣದಲ್ಲಿ ಸಂತೋಷ್ ರಾವ್ ಪಾತ್ರ ಇಲ್ಲ ಎಂದು 2015ರ ಡಿಸೆಂಬರ್ ನಲ್ಲಿ ಸಂತೋಷ್ ರಾವ್ ನನ್ನು ಪ್ರಕರಣದಿಂದ ಕೈ ಬಿಡಲಾಗುತ್ತದೆ. ಈ ಮೂಲಕ ನೈಜ ಆರೋಪಿಗಳ ಮಾದರಿ ರಕ್ತ ಪರಿಶೀಲನೆ ಮಾಡದೆ ಕೇವಲ ಸಂತೋಷ್ ರಾವ್ ನನ್ನು ಆರೋಪಿಯನ್ನಾಗಿ ಮಾಡಿರುವುದು ನೈಜ ಆರೋಪಿಗಳ ರಕ್ಷಣೆ ಎನ್ನುವುದು ಸಿ ವರದಿಯಿಂದ ದೃಢವಾಗುತ್ತದೆ ಎಂದು ಗಿರೀಶ್ ಮಟ್ಟಣ್ಣನವರ್ ವಿವರಿಸಿದರು.
ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್, ರಾಜ್ಯ ಸರಕಾರದ ಸಿಐಡಿ ತನಿಖೆ ಮತ್ತು ಕೇಂದ್ರ ಸರಕಾರದ ಸಿಬಿಐ ತನಿಖೆಯ ಬಗ್ಗೆ ಅನುಮಾನವಿದೆ. ಸಿಐಡಿ ತನಿಖೆಯ ಕನ್ನಡ ವರದಿಯನ್ನು ಇಂಗ್ಲಿಷ್ ಗೆ ಅನುವಾದಿಸುವ ಕೆಲಸವನ್ನು ಮಾತ್ರವೇ ಸಿಬಿಐ ತನಿಖೆಯಲ್ಲಿ ಮಾಡಲಾಗಿದೆ ಎಂದು ಆರೋಪಿಸಿದ ಅವರು, ನೈಜ ಆರೋಪಿಗಳ ತನಿಖೆ ನೆಡೆಸಿ ಸಂತ್ರಸ್ತರಿಗೆ ನ್ಯಾಯ ಕೊಡಿಸಬೇಕು ಅವರು ಆಗ್ರಹಿಸಿದರು.
ಸೌಜನ್ಯ ಹೋರಾಟದ ಜತೆಗೆ ಸ್ವಸಹಾಯ ಸಂಘದ ಹೆಸರಿನಲ್ಲಿ ನಡೆಯುತ್ತಿರುವ ಬಡ್ಡಿ ದಂಧೆಯ ಬಗ್ಗೆಯೂ ರಾಜ್ಯಾದ್ಯಂತ ಹೋರಾಟ ನಡೆಸಲಿದ್ದೇವೆ. ಬಡ್ಡಿ ವ್ಯವಹಾರದ ರೂವಾರಿಗಳ ವಿರುದ್ಧ ಎಲ್ಲೂರಿನ ವಿಶ್ವನಾಥ ದೇವರ ಎದುರು ಮೊರೆ ಹೋಗಲಿದ್ದೇವೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ತಮ್ಮಣ್ಣ ಶೆಟ್ಟಿ, ಜಯಂತ ಟಿ., ಅನಿಲ್ ಮೊದಲಾದವರು ಉಪಸ್ಥಿತರಿದ್ದರು.