ಮಂಗಳೂರು: ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರ ಬಂಧನ ಖಂಡಿಸಿ ಪ್ರತಿಭಟನೆ
ಮಂಗಳೂರು: ಅಕ್ರಮವಾಗಿ ಹಣ ವರ್ಗಾವಣೆ ಆರೋಪದಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿರುವುದನ್ನು ವಿರೋಧಿಸಿ ಮಂಗಳೂರಿನಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಎಸ್‌ಡಿಪಿಐ ಕಾರ್ಯಕರ್ತರು ಮಂಗಳವಾರ ಸಂಜೆ ಬೀದಿಗಿಳಿದು ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದರು.
ಬೃಹತ್ ಸಂಖ್ಯೆಯಲ್ಲಿ ಆಗಮಿಸಿದ್ದ ಎಸ್‌ಡಿಪಿಐ ನಾಯಕರು ಮತ್ತು ಕಾರ್ಯಕರ್ತರು ರಾಷ್ಟ್ರೀಯ ಅಧ್ಯಕ್ಷರ ಬಂಧನದ ವಿರುದ್ಧ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು, ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಕೆತ್ತಿಕಲ್, ಪ್ರಮುಖರಾದ ಸಿದ್ದೀಕ್ ಬೆಂಗ್ರೆ, ಉಸ್ಮಾನ್ ಗುರುಪುರ, ಶಾಹುಲ್ ಕಾಶಿಪಟ್ಣ, ಇರ್ಶಾದ್ ಹಳೆಯಂಗಡಿ, ಶಮೀನಾ ತುಂಬೆ, ಅಶ್ಪಕ್ ಪಾಂಡೇಶ್ವರ , ಇರ್ಫಾನ್ ಅಡ್ಯಾರ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಗುರುಪುರ ಕೈಕಂಬ ಜಂಕ್ಷನ್, ಸುರತ್ಕಲ್, ದೇರಳಕಟ್ಟೆ, ಕಲ್ಲೇರಿ, ಹಾಸನ, ಶಿವಮೊಗ್ಗ, ವಿಟ್ಲ, ಮೈಸೂರು, ಸುಳ್ಯ, ಬೆಳ್ತಂಗಡಿ, ದಾವಣಗೆರೆ, ಉಡುಪಿ, ಹುಬ್ಬಳ್ಳಿ ಜಂಕ್ಷನ್ ಸೇರಿದಂತೆ ರಾಜ್ಯಾದ್ಯಂತ ಎಸ್‌ಡಿಪಿಐ ಪ್ರತಿಭಟನೆ ನಡೆಸಿರುವುದು ವರದಿಯಾಗಿದೆ.