ನ.19ರಂದು ಸ್ಮಾರ್ಟ್ ಸಿಟಿ ಅಧಿಕಾರಿ, ಜಿಲ್ಲಾಧಿಕಾರಿ, ಶಾಸಕರ ವಿರುದ್ಧ ಪ್ರತಿಭಟನೆ: ಎಮ್ಮೆಕೆರೆ ಹೋರಾಟ ಸಮಿತಿ ಎಚ್ಚರಿಕೆ
ಎಮ್ಮೆಕೆರೆ ಮೈದಾನ ಅಭಿವೃದ್ಧಿಪಡಿಸದೆ ಈಜುಕೊಳ ಉದ್ಘಾಟನೆ
Photo: freepik
ಮಂಗಳೂರು, ನ.14: ನಗರದ ಎಮ್ಮೆಕೆರೆ ಮೈದಾನವನ್ನು ಅಭಿವೃದ್ಧಿಪಡಿಸದೆ ಈಜುಕೊಳವನ್ನು ಉದ್ಘಾಟಿಸಲು ಸಜ್ಜಾಗಿರುವ ಮಂಗಳೂರು ಸ್ಮಾರ್ಟ್ ಸಿಟಿ ಅಧಿಕಾರಿ, ಜಿಲ್ಲಾಧಿಕಾರಿ, ಶಾಸಕರ ವಿರುದ್ಧ ನ.19ರಂದು ಬೆಳಿಗ್ಗೆ 11.30ಕ್ಕೆ ಎಮ್ಮೆಕೆರೆ ಮೈದಾನದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಎಮ್ಮೆಕೆರೆ ಹೋರಾಟ ಸಮಿತಿಯ ಅಧ್ಯಕ್ಷ, ನ್ಯಾಯವಾದಿ ದಿನಕರ ಶೆಟ್ಟಿ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ೨೦೧೭ರಲ್ಲಿ ಎಮ್ಮೆಕೆರೆಯನ್ನು ಮುಚ್ಚಿ ಅಂತರಾಷ್ಟ್ರೀಯ ಈಜುಕೊಳ ನಿರ್ಮಿಸಲು ಮುಂದಾದಾಗ ‘ಎಮ್ಮೆಕೆರೆ ಮೈದಾನ ಉಳಿಸಿ ಹೋರಾಟ ಸಮಿತಿ’ಯು ಹೋರಾಟ ನಡೆಸಿತ್ತು. ಆವಾಗ ಆಗಿನ ಶಾಸಕ ಜೆ.ಆರ್. ಲೋಬೋ ಈಜುಕೊಳವನ್ನು ಬೇರೆ ಕಡೆಗೆ ಸ್ಥಳಾಂತರಿಸಲು ತೀರ್ಮಾನಿಸಿದ್ದರು. ಆ ಬಳಿಕ ಬಂದ ಶಾಸಕ ವೇದವ್ಯಾಸ ಕಾಮತ್ ಎಮ್ಮೆಕೆರೆಯಲ್ಲೇ ಈಜುಕೊಳ ನಿರ್ಮಿಸಲು ಮುಂದಾದಾಗ ಹೋರಾಟ ಸಮಿತಿಯು ಪ್ರಬಲವಾಗಿ ವಿರೋಧ ವ್ಯಕ್ತಪಡಿಸಿತ್ತು. ಅದರಂತೆ ಶಾಸಕರು ಎರಡು ಎಕರೆ ಜಮೀನನ್ನು ಈಜುಕೊಳಕ್ಕೂ 1.57 ಸೆಂಟ್ಸ್ ಜಮೀನನ್ನು ಆಟದ ಮೈದಾನಕ್ಕೂ ಕಾದಿರಿಸುವುದಾಗಿ ಹೇಳಿದ್ದರು. ಅಲ್ಲದೆ ಈಜುಕೊಳ ಮತ್ತು ಆಟದ ಮೈದಾನವನ್ನು ನಿರ್ಮಿಸಿ ಜೊತೆಯಾಗಿ ಉದ್ಘಾಟಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಅಂತಾರಾಷ್ಟ್ರೀಯ ಈಜುಕೊಳದ ಉದ್ಘಾಟನೆಗೆ ಸರಕಾರ ಸಜ್ಜಾಗಿದೆ. ಆದರೆ ಆಟದ ಮೈದಾನವನ್ನು ಅಭಿವೃದ್ಧಿಪಡಿಸದೆ ಕ್ರೀಡಾಪಟುಗಳಿಗೆ ಅನ್ಯಾಯ ಎಸಗಲಾಗಿದೆ ಎಂದು ಆಪಾದಿಸಿದರು.
ನ.24ರಂದು ಉದ್ಘಾಟಿಸಲು ಮುಂದಾಗಿರುವ ಈಜುಕೊಳದ ಕಾಮಗಾರಿ ಕೂಡ ಸಂಪೂರ್ಣವಾಗಿಲ್ಲ. ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಿಲ್ಲ. ಅಧಿಕಾರಿಗಳು ಮೈದಾನ ನಿರ್ಮಾಣದ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗೆ ನೀಡದೆ ತರಾತುರಿಯಲ್ಲಿ ಈಜುಕೊಳದ ಉದ್ಘಾಟಿಸಲು ಮುಂದಾಗಿರುವುದು ಸ್ಥಳೀಯರಿಗೆ ಮಾಡಿದ ದ್ರೋಹವಾಗಿದೆ. ಈಗಾಗಲೆ ಕೆರೆಯನ್ನು ಮುಚ್ಚಿ ಈಜುಕೊಳ ನಿರ್ಮಿಸಿರುವುದು ಕೂಡ ಕಾನೂನು ಬಾಹಿರವಾಗಿದೆ ಎಂದು ದಿನಕರ ಶೆಟ್ಟಿ ಆಪಾದಿಸಿದರಲ್ಲದೆ, ಮೈದಾನ ಅಭಿವೃದ್ಧಿಪಡಿಸಿದ ಬಳಿಕವೇ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿ ಉದ್ಘಾಟನೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಎಮ್ಮೆಕೆರೆ ಫ್ರೆಂಡ್ಸ್ ಸರ್ಕಲ್ನ ಅಧ್ಯಕ್ಷ ಗಣೇಶ್, ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಮತ್ತಿತರರು ಉಪಸ್ಥಿತರಿದ್ದರು.