ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಧರಣಿ: ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್ ವಿರುದ್ಧ ಪ್ರಕರಣ ದಾಖಲು
ಕೂಳೂರು: ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ ಹಾಗೂ ಹೆದ್ದಾರಿ ಪೂರ್ಣ ಪ್ರಮಾಣದಲ್ಲಿ ಶೀಘ್ರ ದುರಸ್ತಿಗೊಳಿಸಿ ಡಾಮರೀಕರಣ ಮಾಡಲು ಆಗ್ರಹಿಸಿ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಮಂಗಳವಾರ ನಡೆಸಿದ್ದ ಧರಣಿಯಲ್ಲಿ ಭಾಗವಹಿಸಿದ್ದ ಹೊರಾಟಗಾರರ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳರನ್ನು ಎ1 ಆರೋಪಿ ಎಂದು ಗುರುತಿಸಲಾಗಿದ್ದು, ಇತರರು ಎ2 ಆರೋಪಿಗಳೆಂದು ಗುರುತಿಸಲಾಗಿದೆ.
ಕಾವೂರು ಪೊಲೀಸ್ ಠಾಣೆಯ ಗುಪ್ತ ವಾರ್ತೆ ವಿಭಾಗದ ಸಿಬ್ಬಂದಿ ರಾಘವೇಂದ್ರ ನೀಡಿರುವ ದೂರಿನಂತೆ ಈ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ನಂತೂರು- ಸುರತ್ಕಲ್ ರಾಷ್ಟ್ರಿಯ ಹೆದ್ದಾರಿಯನ್ನು ಪೂರ್ಣ ಪ್ರಮಾಣದಲ್ಲಿ ದುರಸ್ತಿ ಮಾಡುಬೇಕು ಮತ್ತು ಕೂಳೂರು ಸೇತುವೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಮತ್ತು ಇತರರು ಕೂಳೂರು ಸೇತುವೆಯ ಬಳಿ ಗುಂಪುಗೂಡಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿ ಕೂಳೂರು ಸೇತುವೆಯ ಬಳಿ ಧರಣಿ ನಡೆಸಿದ್ದಾರೆ. ಅಲ್ಲದೆ, ಎಚ್ಚರಿಕೆ ನೀಡುವ ಘೋಷಣೆಗಳನ್ನು ಕೂಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಂತೂರು- ಸುರತ್ಕಲ್ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ ಹಾಗೂ ಶೀಘ್ರ ಹೆದ್ದಾರಿ ಪೂರ್ಣ ಪ್ರಮಾಣದದಲ್ಲಿ ದುರಸ್ತಿಗೊಳಿಸಿ ಡಾಮರೀಕರಣ ಮಾಡಬೇಕು. ನಂತೂರು ಕೂಳೂರು ಸೇತುವೆಯನ್ನು ಕಾಲಮಿತಿಯಲ್ಲಿ ನಿರ್ಮಿಸಬೆಕೆಂದು ಆಗ್ರಹಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್ ವತಿಯಿಂದ ಮಂಗಳವಾರ ಕೂಳೂರು ಸೇತುವೆ ಬಳಿ ಧರಣಿ ನಡೆಸಲಾಗಿತ್ತು.