ಗುರುಪುರ ಮೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ
ಮಂಗಳೂರು : ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ (ಜೆಸಿಟಿಯು) ವಿವಿಧ ಸಂಘಟನೆಗಳ ಒಕ್ಕೂಟ (ಎಸ್‌ಕೆಎಂ) ಇದರ ಗುರುಪುರ ವಲಯ ಸಮಿತಿಯ ನೇತೃತ್ವದಲ್ಲಿ ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಮತ್ತು ವಿದ್ಯುತ್ ಕ್ಷೇತ್ರದ ಖಾಸಗಿಕರಣದ ವಿರುದ್ಧ ದೇಶವ್ಯಾಪಿ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ಗುರುಪುರ ಬಂಗ್ಲಗುಡ್ಡೆ ಮೆಸ್ಕಾಂ ಸಹಾಯಕ ಇಂಜಿನಿಯರ್‌ರ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಯಿತು.
ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡುತ್ತಾ ಕಳೆದ ೯ ವರ್ಷದಿಂದ ಅಧಿಕಾರದಲ್ಲಿರುವ ಮೋದಿ ನೇತೃತ್ವದ ಸರಕಾರ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುತ್ತಿವೆ. ಇದರಿಂದ ಜನರಿಗೆ ಸಮಸ್ಯೆಗಳಾಗು ತ್ತಿದ್ದು, ಬದುಕು ದುಬಾರಿಯಾಗುತ್ತಿದೆ. ಇದೀಗ ಕೇಂದ್ರ ಸರಕಾರವು ದೇಶದ ಆರ್ಥಿಕತೆಯ ಜೀವಾಳವಾಗಿದ್ದ ರೈಲ್ವೆ, ವಿದ್ಯುತ್ ಕ್ಷೇತ್ರಗಳನ್ನು ಖಾಸಗಿಯವರಿಗೆ ಮಾರಲು ಹೊರಟಿದೆ. ಈ ಕಾಯ್ದೆಯ ಮೂಲಕ ಪ್ರಿಪೇಯ್ಡ್ ಸ್ಮಾರ್ಸ್ ಮೀಟರ್ ಅಳವಡಿಕೆ, ವಿದ್ಯುತ್ ವಲಯಗಳಿಗಾಗಿ ಪ್ರತ್ಯೇಕ ಪೊಲೀಸ್ ವ್ಯವಸ್ಥೆಯನ್ನು ರಚಿಸಿ ಬಳಕೆದಾರರ ಮೇಲೆ ದಬ್ಬಾಳಿಕೆ ನಡೆಸಿ ಅದಾನಿ ಹಾಗೂ ಟಾಟಾರಂತಹ ಕಾರ್ಪೊರೇಟ್ ಕುಳಗಳ ಜೇಬುಗಳಿಗೆ ದೇಶದ ಸಂಪತ್ತನ್ನು ತುಂಬಿಸುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಇದರ ಗುರುಪುರ ವಲಯ ಕಾರ್ಯದರ್ಶಿ ನೋಣಯ್ಯ ಗೌಡ, ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಗುರುಪುರ ವಲಯ ಅಧ್ಯಕ್ಷ ಸದಾಶಿವದಾಸ್ ಮಾತನಾಡಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಬಾಬು ಸಾಲ್ಯಾನ್, ಸಿಐಟಿಯು ಮುಖಂಡರಾದ ವಸಂತಿ ಕುಪ್ಪೆಪದವು, ಯಶೋಧಾ ಮಳಲಿ, ಆನಂದ ಇರುವೈಲು, ಹೊನ್ನಯ ಅಮೀನ್ ವಾಮಂಜೂರು, ಹೊನ್ನಯ ಅಂಚನ್ ವಾಮಂಜೂರು, ವಾರಿಜಾ ಕುಪ್ಪೆಪದವು, ಡಿವೈಎಫ್‌ಐ ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು ಪ್ರತಿಭಟನೆಗೆ ನೇತೃತ್ವ ನೀಡಿದ್ದರು.