ಆತ್ಮವಿಶ್ವಾಸವೇ ಮುಸ್ಲಿಮರ ಬಹುದೊಡ್ಡ ಶಕ್ತಿ: ಲಕ್ಷ್ಮೀಶ ಗಬಲಡ್ಕ
ಮಂಗಳೂರು ಪುರಭವನದಲ್ಲಿ ಸಾರ್ವಜನಿಕ ಸಮಾವೇಶ
ಮಂಗಳೂರು, ನ.8: ಮುಸ್ಲಿಮರು ಭಾವನಾತ್ಮಕ ವಿಚಾರಗಳ ಬಗ್ಗೆ ಕ್ಷಣಾರ್ಧದಲ್ಲಿ ಉದ್ವೇಗಕ್ಕೆ ಒಳಗಾಗುತ್ತಿದ್ದಾರೆ. ಅದನ್ನು ಅರಿತುಕೊಂಡಿರುವ ಕೆಲವು ಶಕ್ತಿಗಳು ಉದ್ದೇಶಪೂರ್ವಕವಾಗಿ ಮುಸ್ಲಿಮರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದೆ. ಹಾಗಾಗಿ ಮುಸ್ಲಿಮರು ಯಾವ ಕಾರಣಕ್ಕೂ ಉದ್ವೇಗಕ್ಕೆ ಒಳಗಾಗದೆ ಸಂಯಮ ಪಾಲಿಸಬೇಕು. ಪ್ರವಾದಿ ಪೈಗಂಬರ್ ಕಲಿಸಿಕೊಟ್ಟಂತೆ ದೇವನ ಮೇಲೆ ಆತ್ಮವಿಶ್ವಾಸ ಹೆಚ್ಚಿಸಬೇಕು. ಅದುವೇ ಮುಸ್ಲಿಮರ ಬಹುದೊಡ್ಡ ಶಕ್ತಿಯಾಗಿದೆ ಎಂದು ದ.ಕ.ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯ ಲಕ್ಷ್ಮೀಶ ಗಬಲಡ್ಕ ಅಭಿಪ್ರಾಯಪಟ್ಟರು.
ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಇದರ ವತಿಯಿಂದ ‘ಪ್ರವಾದಿ ಮುಹಮ್ಮದ್(ಸ) ಪರಿಚಯಿಸಿದ ಆದರ್ಶ ಸಮಾಜ ಮತ್ತು ಇಂದಿನ ಸವಾಲುಗಳು’ ಎಂಬ ವಿಷಯದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಮುಸ್ಲಿಮರಲ್ಲಿ ಅಹಂಕಾರದ, ಅಹಂನ ಪ್ರಮಾಣ ತುಂಬಾ ಕಡಿಮೆ ಇದೆ. ದೇವನ ಮೇಲೆ ಅಚಲ ವಿಶ್ವಾಸ ಹೆಚ್ಚಾಗಿವೆ. ಹಾಗಾಗಿಯೇ ಮುಸ್ಲಿಮರಲ್ಲಿ ಇತರರಿಗಿಂತ ಆತ್ಮಹತ್ಯೆಯಂತಹ ಪ್ರಕರಣಗಳು ಕಡಿಮೆ ಪ್ರಮಾಣದಲ್ಲಿದೆ. ಮುಸ್ಲಿಮರು ಸದಾ ಸಂಘಟಿತರಾಗಿದ್ದಾರೆ. ಕೆಲವೊಮ್ಮೆ ಅದು ದೌರ್ಬಲ್ಯವಾಗುವ ಅಪಾಯವೂ ಇದೆ. ಯಾರದೋ ಮಾತಿಗೆ ಪ್ರಚೋದನೆಗೊಳಗಾಗುತ್ತಾರೆ ಮತ್ತು ಭಾವನಾತ್ಮಕವಾಗಿ ಬೇಗನೆ ಕೆರಳುತ್ತಾರೆ. ಕೆರಳಿಸುವವರಿಗೆ ಇದರಿಂದ ಲಾಭ ವಿದೆಯೇ ವಿನಃ ಕೆರಳಿದ ಮುಸ್ಲಿಮರಿಗೆ ಯಾವ ಲಾಭವೂ ಇಲ್ಲ. ಭಾವನಾತ್ಮಕವಾಗಿ ಕೆರಳವುದರಿಂದ ಮುಸ್ಲಿಂ ಯುವ ಸಮೂಹ ದಾರಿತಪ್ಪುವ ಸಾಧ್ಯತೆಯೂ ಇದೆ. ಅದನ್ನು ಮುಸ್ಲಿಂ ಸಮುದಾಯ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಲಕ್ಷ್ಮೀಶ ಗಬಲಡ್ಕ ಹೇಳಿದರು.
ಎಲ್ಲೇ ಅಪಘಾತಗಳಾಗಲಿ, ತಕ್ಷಣ ಮುಸ್ಲಿಂ ಯುವಕರು ಧಾವಿಸಿ ನೆರವಿಗೆ ಬರುತ್ತಾರೆ. ಅಪಘಾತದಲ್ಲಿ ಗಾಯಗೊಂಡವರು, ಮರಣ ಹೊಂದಿದವರು ಯಾರು ಎಂಬುದನ್ನು ಕೂಡ ನೋಡದೆ ಮಾನವೀಯ ನೆಲೆಯಲ್ಲಿ ಸಹಾಯ ಮಾಡುತ್ತಾರೆ. ಇದು ಮದ್ರಸ ಶಿಕ್ಷಣದ ಪರಿಣಾಮ ಎಂಬುದನ್ನು ನಾನು ಕಂಡುಕೊಂಡ ಸತ್ಯವಾಗಿದೆ. ಪ್ರವಾದಿ ಪೈಗಂಬರ್ (ಸ) ಕಲಿಸಿದ ಆದರ್ಶ ಸಮಾಜದ ಜೀವನ ಮೌಲ್ಯವೂ ಇದಾಗಿದೆ ಎಂದು ಲಕ್ಷ್ಮೀಶ ಗಬಲಡ್ಕ ನುಡಿದರು.
ಪ್ರವಾದಿ ಮುಹಮ್ಮದ್ (ಸ) ಆದರ್ಶ ಸಮಾಜದ ಕನಸು ಕಂಡಿದ್ದಲ್ಲದೆ, ನವ ಸಮಾಜವನ್ನು ಕಟ್ಟಿದ್ದರು. ನುಡಿದಂತೆ ನಡೆದಿದ್ದರು. ಅವರು ಎಂದೂ ಕೂಡಾ ಧರ್ಮವನ್ನು, ಆಧ್ಯಾತ್ಮವನ್ನು ವ್ಯಾಪಾರದ ಸರಕುಗಳನ್ನಾಗಿಸಿರಲಿಲ್ಲ. ಕುಟುಂಬ, ಸಮಾಜದ ಮಧ್ಯೆ ಬೆರೆತು ಅಲ್ಲಾಹನ ಸಂದೇಶವನ್ನು ಜನರಿಗೆ ತಲುಪಿಸಿದರು. ಉತ್ಪ್ರೇಕ್ಷೆಗೆ ಅವಕಾಶ ನೀಡದೆ ಸಮಾಜದಲ್ಲಿ ಸಮತೋಲನ ಪಾಲಿಸಿದರು. ಆರ್ಥಿಕ ಸಮಾನತೆಗೆ ಹೆಚ್ಚು ಒತ್ತುಕೊಟ್ಟಿದ್ದರು. ಆದರೆ ಪ್ರಸಕ್ತ ದೇಶದ ಆರ್ಥಿಕ ಚಿತ್ರಣವನ್ನು ಅವಲೋಕಿಸುವಾಗ ಸಂಪನ್ಮೂಲಗಳು ಕೆಲವೇ ಮಂದಿಗಳ ಕೈಯಲ್ಲಿವೆ. ಆರ್ಥಿಕವಾಗಿ ಹಿಂದುಳಿದವರನ್ನು ಮತ್ತಷ್ಟು ಶೋಷಿಸಲಾಗುತ್ತಿದೆ. ಬಲಾಢ್ಯರನ್ನು ಸದಾ ಪೋಷಿಸಲಾಗುತ್ತದೆ. ಹಾಗಾಗಿಯೇ ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ.37ರಷ್ಟಿದೆ. 5 ವರ್ಷ ಪ್ರಾಯಕ್ಕಿಂತ ಕಡಿಮೆಯಿರುವ ದೇಶದ ಶೇ.40ರಷ್ಟು ಮಂದಿ ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ. ಶೇ.10ರಷ್ಟು ಮಂದಿ ಆಹಾರವಿಲ್ಲದೆ ಮರಣ ಹೊಂದುತ್ತಿದ್ದಾರೆ. ಪ್ರವಾದಿಯ ಆರ್ಥಿಕ ನೀತಿಯನ್ನು ಅನುಸರಿಸಿದ್ದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ದೇಶದ ಪ್ರಮುಖ ಪಕ್ಷಗಳು ದೇಶದ ಆರ್ಥಿಕ ಚಿತ್ರಣದ ಬಗ್ಗೆ ಚರ್ಚಿಸಲು ಆಸಕ್ತಿ ವಹಿಸುತ್ತಿಲ್ಲ. ಅವುಗಳು ಬಾಬರಿ ಮಸ್ಜಿದ್, ತ್ರಿವಳಿ ತಲಾಖ್, ಲವ್‌ಜಿಹಾದ್, ಕವ್ ಜಿಹಾದ್, ವಕ್ಫ್ ಕಾಯ್ದೆಯ ಬಗ್ಗೆ ಗುಲ್ಲೆಬ್ಬಿಸುತ್ತಿರುವುದು ವಿಪರ್ಯಾಸ ಎಂದು ʼವಾರ್ತಾಭಾರತಿʼಯ ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಮ್ ಪುತ್ತಿಗೆ ತಿಳಿಸಿದರು.
ತನ್ನ ಧರ್ಮದ ಗ್ರಂಥದ ಬಗ್ಗೆ ಕಿಂಚಿತ್ತೂ ಅರಿಯದವರು ಇತರ ಧರ್ಮದ ಬಗ್ಗೆ ವಿಮರ್ಶಿಸಲು ಆಸಕ್ತಿ ತೋರುತ್ತಿರುವುದು ವಿಪರ್ಯಾಸ. ರೈತರ ಭೂಮಿಯನ್ನು ವಕ್ಫ್ ಆಸ್ತಿಯನ್ನಾಗಿ ಪರಿವರ್ತಿಸಲಾಗಿದೆ ಎಂದು ಆರೋಪಿಸುವವರು ಅದೇ ಭೂಮಿ ಮಠ-ಮಂದಿರಗಳ ಆಸ್ತಿಗಳಾಗಿಯೂ ಪರಿವರ್ತನೆಗೊಂಡಿರುವುದು ತಿಳಿಯದ ವಿಚಾರವಲ್ಲ. ನಾವು ಇತರ ಧರ್ಮದ ಸೂಕ್ಷ್ಮತೆಯನ್ನು ಟೀಕಿಸುವ ಮುನ್ನ ಅದರ ಅರ್ಥ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕಿದೆ. ಆವಾಗಲೇ ಆದರ್ಶ ಸಮಾಜ ರೂಪುಗೊಳ್ಳಲಿದೆ ಎಂದು ಸಾಮಾಜಿಕ ಹೋರಾಟಗಾರ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.
ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ನ ಪದಾಧಿಕಾರಿಗಳಾದ ಸಈದ್ ಇಸ್ಮಾಯೀಲ್, ಅಬ್ದುಲ್ ಗಫೂರ್ ಕುಳಾಯಿ, ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಸಂಚಾಲಕಿ ಸುಮಯ್ಯ ಹಮೀದುಲ್ಲಾ, ಝೀನತ್ ಇಸ್ಮಾಯೀಲ್ ಉಪಸ್ಥಿತರಿದ್ದರು.
ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರ ಅಧ್ಯಕ್ಷ ಇಸಾಕ್ ಪುತ್ತೂರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶರೀಫ್ ನಿರ್ಮುಂಜೆ ಸ್ತುತಿಗೀತೆ ಹಾಡಿದರು. ಬಿ.ಎ.ಮುಹಮ್ಮದಲಿ ಕಮ್ಮರಡಿ ಕಾರ್ಯಕ್ರಮ ನಿರೂಪಿಸಿದರು.