ಪುತ್ತೂರು| ಒಂಟಿ ಮಹಿಳೆಯನ್ನು ವಸತಿಗೃಹದಿಂದ ಹೊರ ಹಾಕಿದ ಎಪಿಎಂಸಿ: ಆರೋಪ
ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ವಿಕಲಚೇತನ ಕಾರ್ಮಿಕೆ
ಮನೆಯ ಮುಂಭಾಗದಲ್ಲಿ ಕುಳಿತಿರುವ ಜಾನಕಿ
ಪುತ್ತೂರು: ಎಪಿಎಂಸಿ ಪ್ರಾಂಗಣದ ಸರ್ಕಾರಿ ವಸತಿಗೃಹದಲ್ಲಿ ವಾಸವಾಗಿದ್ದ ವಿಕಲಚೇತನ ಒಂಟಿ ಮಹಿಳೆಯನ್ನು ಎಪಿಎಂಸಿ ಅಧಿಕಾರಿಗಳು ಹೊರಹಾಕಿ ಮನೆಗೆ ಬೀಜ ಜಡಿದಿದ್ದಾರೆ ಎನ್ನಲಾದ ಘಟನೆ ಬುಧವಾರ ನಡೆದಿದೆ.
ಇದರಿಂದಾಗಿ ತಡರಾತ್ರಿಯ ತನಕವೂ ಜೋರಾಗಿ ಸುರಿಯುವ ಮಳೆಯಲ್ಲಿ ಮನೆಯ ಹೊರಭಾಗದಲ್ಲಿ ಕುಳಿತ್ತಿದ್ದ ಮಹಿಳೆಯು ಅಸ್ವಸ್ಥಗೊಂಡ ಪರಿಣಾಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಪಿಎಂಸಿ ಪ್ರಾಂಗಣದೊಳಗೆ ಸರ್ಕಾರಿ ಹಲವು ವಸತಿಗೃಹಗಳಿದ್ದು, ಈ ಪೈಕಿ 003 ಸಂಖ್ಯೆಯ ಮನೆಯನ್ನು ಎಪಿಎಂಸಿ ಕಚೇರಿಯಲ್ಲಿ ಕಳೆದ 28 ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ವಿಕಲಚೇತನ ಜಾನಕಿ ಅವರಿಗೆ ಅಧಿಕಾರಿಗಳು ಕಳೆದ ಒಂದು ವರ್ಷದ ಹಿಂದೆ ನೀಡಿದ್ದರು.
ಒಂಟಿ ಮಹಿಳೆಯಾಗಿದ್ದ ಜಾನಕಿ ಅವರು ಆ ಮನೆಯಲ್ಲಿ ವಾಸವಾಗಿದ್ದರು. ಸರಕಾರಿ ನೌಕರರು ಅಲ್ಲದವರು ವಾಸವಾಗಿ ದ್ದಕ್ಕೆ ಕೆಲವರು ಜಾನಕಿ ವಿರುದ್ಧ ಆಕ್ಷೇಪ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಮನೆಯಿಂದ ವಾಸ ತೆರವು ಮಾಡುವಂತೆ 4 ತಿಂಗಳ ಹಿಂದೆ ಎಪಿಎಂಸಿ ಕಾರ್ಯದರ್ಶಿ ಜಾನಕಿ ಅವರಿಗೆ ನೋಟೀಸ್ ಜಾರಿಗೊಳಿಸಿದ್ದರು. ಆದರೆ ಜಾನಕಿ ಮನೆ ತೆರವು ಮಾಡಿರಲಿಲ್ಲ ಎನ್ನಲಾಗಿದ್ದು, ಎಪಿಎಂಸಿ ಅಧಿಕಾರಿಗಳ ತಂಡ ಬುಧವಾರ ವಸತಿಗೃಹಕ್ಕೆ ಬೀಗ ಜಡಿದಿದ್ದರು. ಈ ವೇಳೆ ಜಾನಕಿ ಎಪಿಎಂಸಿ ಕಚೇರಿಯಲ್ಲಿ ಕರ್ತವ್ಯ ನಿರತರಾಗಿದ್ದರು. ಸಿಬ್ಬಂದಿ ಮೂಲಕ ಜಾನಕಿ ಅವರನ್ನು ಸ್ಥಳಕ್ಕೆ ಕರೆಸಲು ಯತ್ನಿಸಿದಾಗ ಜಾನಕಿ ಬರಲು ನಿರಾಕರಿಸಿದ್ದರು. ಜಾನಕಿ ಅವರ ಅನುಪಸ್ಥಿತಿಯಲ್ಲಿ ವಸತಿಗೃಹಕ್ಕೆ ಬೀಗ ಜಡಿಯಲಾಗಿತ್ತು.
ಮಳೆಯಲ್ಲೇ ಕುಳಿತ ಮಹಿಳೆ
ಸಂಜೆ ತನ್ನ ಕೆಲಸ ಮುಗಿಸಿ ವಸತಿಗೃಹಕ್ಕೆ ಆಗಮಿಸಿದ ಜಾನಕಿ ಅವರು ತಾನಿದ್ದ ಮನೆಗೆ ಬೀಗ ಜಡಿದ ಕಾರಣ ಸುರಿಯುವ ಮಳೆಯಲ್ಲೇ ಮನೆ ಮುಂಭಾಗದಲ್ಲಿ ಕುಳಿತರು. ಮನೆಯ ಒಳಗೆ ಬೇಯಿಸಿಟ್ಟಿದ್ದ ಅನ್ನ ಆಹಾರವೂ ಅಲ್ಲೆ ಉಳಿದಿದ್ದು ಉಪವಾಸದಿಂದಲೇ ತಡರಾತ್ರಿ ತನಕವೂ ಮೌನ ಪ್ರತಿಭಟನೆ ಮುಂದುವರಿಸಿದ್ದರು.
"ನನ್ನ ಸಹೋದರ ಪೊಲೀಸ್ ಸಿಬ್ಬಂದಿ ಈ ವಸತಿಗೃಹಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಕೆಲವರ ಪಿತೂರಿಯಿಂದ ಅಧಿಕಾರಿಗಳು ವಸತಿ ಗೃಹ ನೀಡಿಲ್ಲ. ನನಗೆ ಗಂಡ, ಮಕ್ಕಳು ಯಾರೂ ಇಲ್ಲ. ನಾನು ವಿಕಲಚೇತನೆಯಾಗಿದ್ದೇನೆ. ನನಗೆ ತೊಂದರೆ ಕೊಡುತ್ತಿದ್ದೀರಿ" ಎಂದು ಹೇಳಿ ಕಣ್ಣೀರು ಸುರಿಸುತ್ತಿದ್ದ ಅವರು ತಡರಾತ್ರಿಯ ವೇಳೆಗೆ ತೀವ್ರ ಅಸ್ವಸ್ಥಗೊಂಡಿದ್ದರು. ಬಳಿಕ ಆಂಬುಲೆನ್ಸ್ ಮೂಲಕ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಎಪಿಎಂಸಿಯೇ ನೀಡಿದ್ದ ಮನೆ
ಎಪಿಎಂಸಿ ಪ್ರಾಂಗಣದಲ್ಲಿನ ಖಾಲಿ ಉಳಿದಿರುವ ಸರಕಾರಿ ವಸತಿಗೃಹವನ್ನು ಬೇರೆ ಇಲಾಖೆಯ ಸರಕಾರಿ ನೌಕರರಿಗೆ ನೀಡಲು ಕಾನೂನು ರೂಪಿಸಲಾಗಿತ್ತು. ಅದರಂತೆ ಹಿಂದಿನ ಕಾರ್ಯದರ್ಶಿ ಅವರು ಕೊಂಬೆಟ್ಟು ಸರಕಾರಿ ವಸತಿನಿಲಯದ ಅಡುಗೆ ಸಹಾಯಕಿ ಪ್ರೇಮ ಕುಮಾರಿ ಅವರಿಗೆ ಮನೆ ನೀಡಿದ್ದರು. ಇದೇ ಮನೆಯಲ್ಲಿ ಎಪಿಎಂಸಿ ಹೊರಗುತ್ತಿಗೆ ಸಿಬ್ಬಂದಿ ಜಾನಕಿ ಅವರು ಎಪಿಎಂಸಿಯ ಸಾಮಾನ್ಯ ಸಭೆಯ ಒಪ್ಪಿಗೆ ಪಡೆದು ವಸತಿಗೃಹಕ್ಕೆ ಬಂದು ವಾಸ್ತವ್ಯ ಹೂಡಿದರು. ಹೀಗಾಗಿ ಅವರಿಬ್ಬರಿಗೂ ಆ ಮನೆಯಲ್ಲಿ ಉಳಿಯಲು ಅವಕಾಶ ನೀಡಲಾಗಿತ್ತು. ಒಂದು ವರ್ಷದ ಹಿಂದೆ ಪ್ರೇಮಕುಮಾರಿ ಅವರು ತನಗೆ ಮನೆ ಬೇಡ ಎಂದು ಲಿಖಿತವಾಗಿ ತಿಳಿಸಿದ್ದರು ಎನ್ನಲಾಗಿದ್ದು, ಇದರಿಂದಾಗಿ ನಾಲ್ಕು ತಿಂಗಳ ಹಿಂದೆ ಮನೆಯಲ್ಲಿದ್ದ ಜಾನಕಿ ಅವರಿಗೆ ಮನೆ ತೆರವು ಮಾಡುವಂತೆ ಎಪಿಎಂಸಿಯ ಈಗಿನ ಕಾರ್ಯದರ್ಶಿ ಸೂಚನೆ ನೀಡಿದ್ದರು ಎನ್ನಲಾಗಿದೆ.
ಜಾನಕಿ ಹೇಳುವಂತೆ ಮೂರು ವರ್ಷಗಳ ಹಿಂದೆ ಗಂಡ ಮೃತಪಟ್ಟಿದ್ದರು. ನಾನು ಬಾಡಿಗೆ ಮನೆಯಲ್ಲಿ ಇದ್ದೆ. ಪ್ರಾಂಗಣದಲ್ಲಿದ್ದ ವಸತಿಗೃಹದಲ್ಲಿ ವಾಸವಾಗಿದ್ದ ಪ್ರೇಮ ಕುಮಾರಿ ಅವರ ಜತೆಗೆ ಇರಲು ಕೇಂದ್ರ ಕಚೇರಿಯ ಅನುಮತಿ ಯೊಂದಿಗೆ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಅವಕಾಶ ನೀಡಲಾಗಿತ್ತು. ಬಳಿಕದಿಂದ ಮಾಸಿಕ ರೂ.2,300 ಬಾಡಿಗೆ ಹಾಗೂ ವಿದ್ಯುತ್ ಬಿಲ್ನ್ನು ನಾನು ಪಾವತಿಸುತ್ತಿದ್ದೇನೆ. ಈಗಾಗಲೇ ಅಡುಗೆ ಸಹಾಯಕಿ ಪ್ರೇಮಾ ಅವರನ್ನು ಬೆದರಿಸಿ ವಸತಿಗೃಹದಿಂದ ಬಿಡುಗಡೆಗೊಳಿಸಿದ್ದರು. ಇದಾದ ಬಳಿಕ ನಿಯಮಾವಳಿಯಂತೆ ವಸತಿಗೃಹ ನೀಡುವಂತೆ ಪುತ್ತೂರಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯದಲ್ಲಿರುವ ನನ್ನ ಅಣ್ಣ ಎಪಿಎಂಸಿ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಿದ್ದರು. ಖಾಲಿಯಿರುವ ವಸತಿ ಗೃಹದಲ್ಲಿ ತನ್ನ ಸಹೋದರನಿಗೆ ಅವಕಾಶ ನೀಡಿದರೆ ನಾನು ಅವರ ಜತೆಗೆ ವಾಸಿಸುವುದಾಗಿ ಕೇಂದ್ರ ಕಚೇರಿಗೆ ಮನವಿ ಮಾಡಿದ್ದೆ. ವಸತಿ ಗೃಹ ನೀಡುವಂತೆ ಕೇಂದ್ರ ಕಚೇರಿಯಿಂದ ಜಂಟಿ ನಿರ್ದೇಶಕರು ಸೂಚನೆ ನೀಡಿದ್ದಾರೆ. ಇದೀಗ ವಸತಿಗೃಹಕ್ಕೆ ಬೀಗ ಜಡಿದಿದ್ದಾರೆ. ನಾನು ವಿಶೇಷಚೇತನೆ. ನನ್ನ ಬದುಕು ಬೀದಿಗೆ ಬಿದ್ದಿದೆ ಎನ್ನುತ್ತಾರೆ.
ಶಾಸಕರಿಂದ ಮನೆಯ ಭರವಸೆ
ಜಾನಕಿ ಅವರ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದುಕೊಂಡ ಪುತ್ತೂರು ಶಾಸಕ ಆಶೋಕ್ ಕುಮಾರ್ ರೈ ಅವರು ಜಾನಕಿ ಅವರಿಗೆ ಮನೆ ನಿರ್ಮಾಣಕ್ಕೆ ನಿವೇಶನ ಒದಗಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
(ಜಾನಕಿ ಅವರು ವಾಸ್ತವ್ಯವಿದ್ದ ಮನೆಗೆ ಅಧಿಕಾರಿಗಳು ಬೀಗ ಜಡಿಯುತ್ತಿರುವುದು)