ಪುತ್ತೂರು ಕನ್ನಡ ರಾಜ್ಯೋತ್ಸವ ಆಚರಣೆ
ಪುತ್ತೂರು: ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಭವ್ಯ ಇತಿಹಾಸವಿದೆ. ಪರಭಾಷೆಗೆ ಒಳಗಾಗಿ ಕನ್ನಡ ಭಾಷೆಯ ಅವಗಣನೆ ಮಾಡುತ್ತಿರುವುದು ಸರಿಯಲ್ಲ. ಭವ್ಯ ಇತಿಹಾಸವಿರುವ ಕನ್ನಡ ಭಾಷೆಯನ್ನು ಕನ್ನಡಿಗರಾದ ನಾವೆಲ್ಲ ಉಳಿಸು ವಲ್ಲಿ ಎಲ್ಲರ ಪ್ರಯತ್ನಗಳಾಗಬೇಕು ಎಂದು ಪುತ್ತೂರು ಉಪವಿಭಾಗದ ಸಹಾಯಕ ಅಯುಕ್ತ ಗಿರೀಶ್ ನಂದನ್ ಹೇಳಿದರು.
ಅವರು ಪುತ್ತೂರಿನ ಕಿಲ್ಲೆ ಮೈದಾನದ ಮಂಗಲ್ ಪಾಂಡೆ ಚೌಕದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದ ಆಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಭದ್ರತಾ ಪಡೆಗಳ ಗೌರವ ರಕ್ಷೆ ಸ್ವೀಕರಿಸಿ ರಾಜ್ಯೋತ್ಸವ ಸಂದೇಶ ನೀಡಿದರು.
ನಾನಾ ಪ್ರಾಂತ್ಯಗಳಲ್ಲಿ ಹಂಚಿ ಹೋಗಿದ್ದ ಕರುನಾಡನ್ನು ಕನ್ನಡ ಭಾಷೆಯ ಆಧಾರದಲ್ಲಿ ಏಕೀಕರಣ ಮಾಡಲು ಅನೇಕರು ಶ್ರಮಿಸಿದ್ದಾರೆ. ಅವರೆಲ್ಲರ ಹೋರಾಟದ ಫಲವಾಗಿ 1956ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾದಾಗ ಕನ್ನಡದ ಆಧಾರ ದಲ್ಲಿ ಏಕೀಕೃತ ಮೈಸೂರು ರಾಜ್ಯ ಉದಯವಾಯಿತು. 1973ರಲ್ಲಿ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರಿಡಲಾಯಿತು. ಕರ್ನಾಟಕ ನಾಮಕರಣಕ್ಕೆ ಐವತ್ತು ವರ್ಷವಾಗಿದ್ದು, ನಾವೆಲ್ಲ ಹೆಮ್ಮೆ ಪಡುವ ಕ್ಷಣ ಇದಾಗಿದೆ. ಹೆಸರಾಯಿತು ಕರ್ನಾಟಕ. ಉಸಿರಾಗಲಿ ಕನ್ನಡ ಎಂಬ ಘೋಷ ವಾಕ್ಯ ಅನುಷ್ಠಾನವಾಗಬೇಕು. ಇವತ್ತು ಕರ್ನಾಟಕ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದೆ. ವಿಶ್ವವನ್ನು ತನ್ನತ್ತ ಸೆಳೆಯುತ್ತಿದೆ. 8 ಜ್ಞಾನ ಪೀಠ ಪ್ರಶಸ್ತಿ ಕನ್ನಡ ಸಾಹಿತ್ಯಕ್ಕೆ ಬಂದಿದೆ. ಕನ್ನಡಿಗರಾದ ನಮಗೆಲ್ಲ ಇದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಬಳಿಕ ಕನ್ನಡ ಧ್ವಜಾರೋಹಣ ನೆರವೇರಿಸಿ ಪುರಭವನದಲ್ಲಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ಅವರು ಕರ್ನಾಟಕ ಏಕೀಕರಣ ಎಂಬುದು ಒಂದು ಭವ್ಯ ಇತಿಹಾಸ. ಜಾತಿ, ಮತ ಭೇದ ಮರೆತು ಕನ್ನಡಿಗರು ಎಂಬ ಭಾವನೆಯಲ್ಲಿ ಈ ನಾಡನ್ನು ಒಂದು ಮಾಡಿದ ಚಳುವಳಿ ಇದು. ಇಂದಿನ ಪೀಳಿಗೆ ಕರ್ನಾಟಕದ ಭವ್ಯ ಇತಿಹಾಸ ಅಧ್ಯಯನ ಮಾಡಬೇಕು. ಕನ್ನಡ ಭಾಷೆಯು ಕೇವಲ ಸಂವಹನ ಮಾತ್ರವಲ್ಲ ಇದೊಂದು ಇತಿಹಾಸ ಮತ್ತು ಗುರುತಿನ ಭಂಡಾರವಾಗಿದೆ. ಕನ್ನಡ ಭಾಷೆ ಮತ್ತು ಸಂಸ್ಕøತಿಯನ್ನು ಬೆಳೆಸುವಲ್ಲಿ ಪೂರ್ವಜರ ಕೊಡುಗೆ ಅಪಾರವಾಗಿದೆ ಎಂದರು.
10 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಡಾ.ಸುಬ್ರಾಯ ಭಟ್ (ವೈದ್ಯಕೀಯ), ಎ.ಪಿ. ಸದಾಶಿವ ಮರಿಕೆ(ಕೃಷಿ), ನಿರ್ಮಲಾ ಸುರತ್ಕಲ್ (ಸಾಹಿತ್ಯ), ನಾರಾಯಣ ಕೆ. (ಶಿಕ್ಷಣ), ದಯಾನಂದ ರೈ ಕೋರ್ಮಂಡ(ಕ್ರೀಡೆ), ಸುಂದರ ರೈ ಮಂದಾರ (ರಂಗಭೂಮಿ), ರೆ. ವಿಜಯ ಹಾರ್ವಿನ್ (ಶಿಕ್ಷಣ, ಸಮನ್ವಯ), ಡಾ. ಅಜಯ್ (ಸಮಾಜ ಸೇವೆ), ನಾರಾಯಣ ಕುಂಬ್ರ (ಸಾಹಿತ್ಯ ಸಂಘಟನೆ), ಸಿದ್ಧಿಕ್ ನೀರಾಜೆ (ಪತ್ರಿಕೋದ್ಯಮ) ಇವರಿಗೆ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ವತಿಯಿಂದ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸ ಲಾಯಿತು. ಪ್ರಶಸ್ತಿ ಪುರಸ್ಕøತರ ಪರವಾಗಿ ರಂಗಭೂಮಿ ಕಲಾವಿದ ಸುಂದರ ರೈ ಮಂದಾರ ಮಾತನಾಡಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಸೀಲ್ದಾರ್ ಶಿವಶಂಕರ್, ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುನ್ನ ಕನ್ನಡ ಭುವನೇಶ್ವರಿಯ ಭವ್ಯ ಮೆರವಣಿಗೆ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್. ಆರ್. ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ನಿರೂಪಿಸಿದರು.