ಪುತ್ತೂರು: ಮನೆಯ ಮೇಲ್ಚಾವಣಿ ಕುಸಿದು ಕಾರ್ಮಿಕ ಮೃತ್ಯು
ಪುತ್ತೂರು: ನೂತನವಾಗಿ ನಿರ್ಮಾಣಗೊಳ್ಳುತ್ತಿದ್ದ ಮನೆಯ ಸಿಟೌಟ್‍ನಲ್ಲಿ ಸೆಂಟ್ರಿಂಗ್ ಕೆಲಸ ನಡೆಸುತ್ತಿದ್ದಾಗ ಮನೆಯ ಮೇಲ್ಚಾವಣಿ ಕುಸಿದು ಬಿದ್ದು ಓರ್ವ ಸೆಂಟ್ರಿಂಗ್ ಕಾರ್ಮಿಕ ಮೃತಪಟ್ಟು, ಕಂಟ್ರಾಕ್ಟರ್ ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಪಾದಲಾಡಿ ಎಂಬಲ್ಲಿ ನಡೆದಿದೆ.
ಪಾದಲಾಡಿ ನಿವಾಸಿ ಶೇಖರ್ ಕುಲಾಲ್ (45) ಮೃತಪಟ್ಟ ಸೆಂಟ್ರಿಂಗ್ ಕಾರ್ಮಿಕ. ತನ್ನ ಮನೆಯ ಸಮೀಪದಲ್ಲಿನ ಕಮಲ ಎಂಬವರು ನಿರ್ಮಿಸುತ್ತಿದ್ದ ಮನೆಯಲ್ಲಿ ಸೆಂಟ್ರಿಂಗ್ ಕೆಲಸ ನಡೆಯುತ್ತಿದ್ದು, ಅದರಲ್ಲಿ ಶೇಖರ್ ಕುಲಾಲ್ ಕೆಲಸ ನಿರ್ವಹಿಸುತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಶೇಖರ್ ಕುಲಾಲ್ ಅವರು ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದಾಗ ದಿಡೀರ್ ಆಗಿ ಮೇಲ್ಚಾವಣಿ ಕುಸಿದು ಕೆಳಕ್ಕೆ ಬಿದ್ದಿತ್ತು. ಇದರಿಂದಾಗಿ ಗಂಭೀರ ಗಾಯಗೊಂಡಿದ್ದ ಶೇಖರ್ ಕುಲಾಲ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ದಾರಿ ನಡುವೆ ಅವರು ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಮನೆಯ ಕಾಮಗಾರಿ ನಡೆಸುತ್ತಿದ್ದ ಕಂಟ್ರಾಕ್ಟರ್ ಸಂಜೀವ ಮೊಗೇರ ಎಂಬವರೂ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಮೃತರ ಸಹೋದರ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.