ಪುತ್ತೂರು: ನಾರಾಯಣಗುರು ಜಯಂತಿ ದಿನಾಚರಣೆ
ಮೌಲ್ಯವಿಲ್ಲದ ಶಿಕ್ಷಣ ಸಮಾಜಕ್ಕೆ ಸಹಕಾರಿಯಾಗಲಾರದು-ಗಿರೀಶ್ ನಂದನ್
ಪುತ್ತೂರು: ಇಂದಿನ ಯುವ ಜನಾಂಗಕ್ಕೆ ವಿದ್ಯೆ ಸಿಗುತ್ತದೆ. ಆದರೆ ಮೌಲ್ಯದ ಕೊರತೆ ಇದೆ. ಶಿಕ್ಷಣದ ಜತೆಗೆ ಮೌಲ್ಯ ಬಹಳ ಪ್ರಮುಖವಾಗಿದೆ. ಮೌಲ್ಯವಿಲ್ಲದ ವಿದ್ಯೆ ಸಮಾಜಕ್ಕೆ ಸಹಕಾರಿಯಾಗಲಾರದು ಎಂದು ಪುತ್ತೂರು ಉಪವಿಬಾಗಾಧಿಕಾರಿ ಗಿರೀಶ್ ನಂದನ್ ಹೇಳಿದರು.
ಅವರು ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಬಿಲ್ಲವ ಸಂಘದ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ತಾಲೂಕು ಆಡಳಿತ ಸೌಧದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ `ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಜಯಂತಿ ದಿನಾಚರಣೆ' ಕಾರ್ಯಕ್ರಮದಲ್ಲಿ ಸಂಸ್ಮರಣಾ ಜ್ಯೋತಿ ಪ್ರಜ್ವಲನೆ ನಡೆಸಿ ಮಾತನಾಡಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯ ಜೊತೆಗೆ ಜಗತ್ತನ್ನು ಒಂದೇ ಜಾತಿ ಒಂದೇ ಮತ ಒಂದೇ ಧರ್ಮದಲ್ಲಿ ಕಂಡ ಅವರ ವ್ಯಕ್ತಿತ್ವವನ್ನು ನೆನಪಿಸುವುದು ಹಾಗೂ ಅವರ ತತ್ವ ಆದರ್ಶಗಳನ್ನು ಪಾಲನೆ ಮಾಡುವುದು ನಮ್ಮ ಜವಾಬ್ದಾರಿಯಾಗಬೇಕು ಎಂದು ಹೇಳಿದರು.
ಸಂಸ್ಮರಣಾ ಉಪನ್ಯಾಸ ನೀಡಿದ ಕುಂಬ್ರ ಮೂರ್ತೆದಾರರ ಸಹಕಾರ ಸಂಘದ ಅಧ್ಯಕ್ಷ ಆರ್.ಸಿ ನಾರಾಯಣ್ ಅವರು ಬ್ರಹ್ಮಶ್ರೀ ನಾರಾರಯಣ ಗುರುಗಳು ಧರ್ಮದ ಜಾಗೃತಿ ಜತೆಗೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಕೆಲಸ ಮಾಡಿದ್ದಾರೆ. ಮಾತೃಸ್ವರೂಪಿ ಚಿಂತನೆ ಭೋದಿಸುತ್ತಾ ಧರ್ಮ ಸ್ಥಾಪನೆಗಾಗಿ 40ಕ್ಕೂ ಅಧಿಕ ದೇವಳಗಳನ್ನು ನಿರ್ಮಿಸಿ ಧಾರ್ಮಿಕತೆಯ ಪುನರುತ್ಥಾನಗೊಳಿಸಿದ್ದಾರೆ. ತ್ರಿಭಾಷಾ ಸೂತ್ರವನ್ನು ಜಗತ್ತಿಗೆ ಭೋದಿಸಿ ಮಾತೃಭಾಷೆಯ ಜತೆಗೆ ಸಂಸ್ಕøತ ಮತ್ತು ಇಂಗ್ಲೀಷ್ ಭಾಷೆ ಕಲಿಯಲು ಪ್ರೇರಣೆ ನೀಡಿದ್ದಾರೆ.
ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅವರು ಮಾತನಾಡಿ, ನಾರಾಯಣಗುರುಗಳ ಕ್ರಾಂತಿ ಕಾರಿ ನಡೆ ಹಿಂದುಳಿದ ವರ್ಗಕ್ಕೆ ಮಾತ್ರವಲ್ಲದೆ ಎಲ್ಲಾ ಸಮುದಾಯಕ್ಕೂ ಇಂದಿಗೂ ಪ್ರಸ್ತುತವಾಗಿದೆ. ಅವರ ತತ್ವದಲ್ಲಿ ಹಲವು ಧರ್ಮಗಳು ಒಟ್ಟಾಗಿ ಜೀವಿಸುವ ಹಾಗೂ ದೇಶದ ಅಖಂಡತೆಯನ್ನು ಪ್ರತಿಪಾದಿಸುವ ಚಿಂತನೆ ಅಡಗಿದೆ ಎಂದರು.
ಇತಿಹಾಸ ಪ್ರಸಿದ್ಧ ಕೋಟಿಚೆನ್ನಯರ ಹುಟ್ಟೂರಾದ ಪುತ್ತೂರಿನ ಪಡುಮಲೆ ಅಭಿವೃದ್ಧಿಗೆ ಈ ಹಿಂದೆ ಸರ್ಕಾರದಿಂದ ರೂ.5 ಕೋಟಿ ಮಂಜೂರು ಆಗಿದ್ದು, ಈ ಹಣ ಸಮರ್ಪಕವಾಗಿ ಬಳಕೆಯಾಗದೆ ಬಾಕಿ ಉಳಿದಿದೆ. ಸ್ವಲ್ಪಮಟ್ಟಿನ ಅಭಿವೃದ್ಧಿ ಮಾತ್ರ ಆಗಿದೆ. ಈ ಅನುದಾನವನ್ನು ಶಾಸಕರ ನೇತೃತ್ವದಲ್ಲಿ ಅಭಿವೃದ್ಧಿ ರೂಪುರೇಷೆ ಮಾಡಿ ಬಳಕೆ ಮಾಡಬೇಕು ಎಂದು ಉಪವಿಗಾಧಿಕಾರಿ ಅವರಲ್ಲಿ ಮನವಿ ಮಾಡಿದರು.
ವೇದಿಕೆಯಲ್ಲಿ ಗ್ರೇಡ್ 2 ತಹಶೀಲ್ದಾರ್ ಲೋಕೇಶ್, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಉಪಸ್ಥಿತರಿದ್ದರು. ತಾಲೂಕು ಕಚೇರಿ ಸಿಬಂದಿ ದಯಾನಂದ ಕಾರ್ಯಕ್ರಮ ನಿರೂಪಿಸಿದರು.