ಪುತ್ತೂರು : ಮನೆಯಂಗಳದ ಉಗ್ರಾಣದಿಂದ ಅಡಿಕೆ ಕಳವು; ಇಬ್ಬರು ಆರೋಪಿಗಳ ಬಂಧನ
ಪುತ್ತೂರು : ಕೃಷಿಕರೊಬ್ಬರ ಮನೆಯಂಗಳ ಉಗ್ರಾಣದಿಂದ 2 ಕ್ವಿಂಟಾಲ್ ಒಣ ಅಡಿಕೆ ಮತ್ತು ಹುಲ್ಲು ತೆಗೆಯುವ ಯಂತ್ರ ಕಳವಾದ ಘಟನೆ ಪುತ್ತೂರು ತಾಲ್ಲೂಕಿನ ಮಾಡ್ನೂರು ಗ್ರಾಮದ ಕಾವು ಸಮೀಪದ ಅಮ್ಚಿನಡ್ಕ ಎಂಬಲ್ಲಿ ನಡೆದಿದೆ.
ಪುತ್ತೂರು ತಾಲೂಕಿನ ಕಾವು ಅಮ್ಚಿನಡ್ಕ ನಿವಾಸಿಗಳಾದ ಕಿರಣ್ ಕುಮಾರ್ ಮತ್ತು ಸಂತೋಷ್ ಕಳವು ಆರೋಪಿಗಳು ಎಂದು ಗುರುತಿಸಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ.
ಮಾಡ್ನೂರು ಗ್ರಾಮದ ಅಮ್ಚಿನಡ್ಕ ಎಂಬಲ್ಲಿನ ವಿಷ್ಣು ಕಲ್ಲೂರಾಯ ಅವರ ಮನೆಯಂಗಳದ ಉಗ್ರಾಣದಿಂದ ಅಡಿಕೆ ಕಳವು ನಡೆದಿದ್ದು, ಈ ಕುರಿತು ಅವರು ಸಂಪ್ಯ ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು. ಕಳವಾದ ಅಡಿಕೆ ಮತ್ತು ಹುಲ್ಲು ತೆಗೆಯುವ ಯಂತ್ರದ ಒಟ್ಟು 75 ಸಾವಿರ ರೂ. ಮೌಲ್ಯದ ಸೊತ್ತುಗಳು ಕಳವಾಗಿದೆ ಎಂದು ವಿಷ್ಣು ಕಲ್ಲೂರಾಯ ಅವರು ದೂರಿನಲ್ಲಿ ತಿಳಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಸಂಪ್ಯ ಠಾಣೆಯ ಪೊಲೀಸರು ಘಟನೆಗೆ ಸಂಬಂಧಿಸಿ ಶನಿವಾರ ಇಬ್ಬರು ಆರೋಪಿಗಳನ್ನು ಬಂಧಿಸಿ, ಆರೋಪಿಗಳಿಂದ ಕಳವು ಮಾಡಿದ್ದ ಅಡಿಕೆಯ ಪೈಕಿ 51 ರೂ. ಸಾವಿರ ಮೌಲ್ಯದ 1.20 ಕ್ವಿಂಟಾಲ್ ಅಡಿಕೆ, 5 ಸಾವಿರ ಮೌಲ್ಯದ ಹುಲ್ಲು ತೆಗೆಯುವ ಯಂತ್ರ ಹಾಗೂ ಕಳವಿಗೆ ಬಳಸಿದ್ದ ಓಮ್ನಿ ಕಾರನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಇನ್ನೊಬ್ಬ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.