ಪುತ್ತೂರು: ಅಡಕೆ ಕಳ್ಳತನ ಪ್ರಕರಣ; ನಾಲ್ವರು ಆರೋಪಿಗಳ ಬಂಧನ
ಪುತ್ತೂರು: ಬಡಗನ್ನೂರು ಗ್ರಾಮದ ಕೊಯ್ಲ ಎಂಬಲ್ಲಿ ಹಳೆಯ ಮನೆಯೊಂದರ ಅಟ್ಟದಲ್ಲಿ ಗೋಣಿಯಲ್ಲಿ ಕಟ್ಟಿ ಇರಿಸಲಾಗಿದ್ದ ಅಡಕೆಯನ್ನು ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ಅವರಿಂದ ರೂ. 4,15,925 ಮೌಲ್ಯದ ಸೊತ್ತು ವಶಕ್ಕೆ ಪಡೆದುಕೊಂಡಿದ್ದಾರೆ.
ಬಡಗನ್ನೂರು ನಿವಾಸಿಗಳಾದ ಶ್ರವಣ್ ಕೆ, (20), ಜಯಚಂದ್ರ, (21) ನಿಡ್ಪಳ್ಳಿ ನಿವಾಸಿಗಳಾದ ಅಶೋಕ, (24) ಮತ್ತು ಪುನೀತ್ (20) ಬಂಧಿತ ಆರೋಪಿಗಳು.
ಬಂಧಿತರಿಂದ ಸುಮಾರು ರೂ 1,55,925 ಮೌಲ್ಯದ ಅಡಿಕೆ ಹಾಗೂ ಕಳವು ಮಾಡಲು ಉಪಯೋಗಿಸಿದ ಕಾರು ಮತ್ತು ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿರುತ್ತಾರೆ. ವಶಪಡಿಸಿಕೊಂಡಿರುವ ಸೊತ್ತುಗಳ ಒಟ್ಟು ಮೌಲ್ಯ ಸುಮಾರು ರೂ 4,15,925 ಎಂದು ಅಂದಾಜಿಸಲಾಗಿದೆ.
ಕೊಯ್ಲದ ನವೀನ್ ರೈ ಎಂಬವರು ತನ್ನ ಹಳೆಯ ಮನೆಯ ಅಟ್ಟದ ಮೇಲೆ ಸುಮಾರು 32 ಗೋಣಿ ಸುಲಿಯದ ಅಡಕೆಯನ್ನು ದಾಸ್ತಾನು ಇರಿಸಿದ್ದರು. ಈ ಅಡಕೆಯನ್ನು ಕಳವು ನಡೆಸಿರುವ ಬಗ್ಗೆ ಗ್ರಾಮಾಂತರ ಠಾಣೆಗೆ ಅ. 26ರಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸುತ್ತಿದ್ದರು.
ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕ ಧನಂಜಯ ಬಿ.ಸಿ ರವರ ನೇತೃತ್ವದ ತನಿಖಾ ತಂಡವು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.