ಪುತ್ತೂರು : ನಿವೃತ್ತ ಕೆಎಸ್ಸಾರ್ಟಿಸಿ ಟಿಸಿ ಶಾಂತಾರಾಮ ಶೆಟ್ಟಿ ಆತ್ಮಹತ್ಯೆ

ಶಾಂತಾರಾಮ ಶೆಟ್ಟಿ
ಪುತ್ತೂರು : ಪುತ್ತೂರು ಕೆಎಸ್ಸಾರ್ಟಿಸಿ ಘಟಕದಲ್ಲಿ ಸಂಚಾರ ನಿಯಂತ್ರಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಭಾರತೀಯ ಮಜ್ದೂರ್ ಸಂಘದ ಮುಖಂಡ ಶಾಂತಾರಾಮ ಶೆಟ್ಟಿ ವಿಟ್ಲ (62) ಅವರು ಶುಕ್ರವಾರ ಸಂಜೆ ಪುತ್ತೂರು ನಗರದ ಬಪ್ಪಳಿಗೆಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಶಾಂತಾರಾಮ ಶೆಟ್ಟಿ ವಿಟ್ಲ ಅವರು ಮೂಲತಃ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಸಾಲೆತ್ತೂರಿನವರಾಗಿದ್ದು, ಪುತ್ತೂರಿನ ಬಪ್ಪಳಿಗೆಯಲ್ಲಿ ನೆಲೆಸಿದ್ದರು. ಶುಕ್ರವಾರ ಪತ್ನಿ ಕಾರ್ಯಕ್ರಮವೊಂದರ ನಿಮಿತ್ತ ಹೊರ ಹೋಗಿದ್ದ ಸಂದರ್ಭದಲ್ಲಿ ಅವರು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಶಾಂತಾರಾಮ ವಿಟ್ಲ ಅವರು ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗದಲ್ಲಿ ಹಲವು ವರ್ಷಗಳ ಕಾಲ ಬಸ್ ನಿರ್ವಾಹಕರಾಗಿ, ಬಳಿಕ ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಸಂಚಾರ ನಿಯಂತ್ರಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದರು. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಪುತ್ತೂರಿನ ಭವಾನಿಶಂಕರ ದೇವಳ ರಸ್ತೆಯಲ್ಲಿ ಓನ್ಲೈನ್ ಸೇವೆಗಳ ಅಂಗಡಿ ತೆರೆದಿದ್ದರೂ ಕಳೆದ ಒಂದು ವಾರದಿಂದ ಅಂಗಡಿಯನ್ನು ಮುಚ್ಚಲಾಗಿತ್ತು.
ಕೆಎಸ್ಸಾರ್ಟಿಸಿ ಮಜ್ದೂರ್ ಸಂಘದ ಜಿಲ್ಲಾ ವಕ್ತಾರ ಹಾಗೂ ರಾಜ್ಯ ಕಾರ್ಯದರ್ಶಿಯಾಗಿದ್ದ ಶಾಂತಾರಾಮ ವಿಟ್ಲ ಅವರು ಹಲವು ಸಂದರ್ಭಗಳಲ್ಲಿ ಕೆಎಸ್ಸಾರ್ಟಿಸಿ ನೌಕರರ ಪರವಾಗಿ ಹೋರಾಟ ನಡೆಸಿ ನ್ಯಾಯ ಒದಗಿಸುವ ಕೆಲಸ ಮಾಡಿದ್ದರು. ಕಾಂಟ್ರಕ್ಟ್ ಕ್ಯಾರೇಜ್ ಬಸ್ ವ್ಯವಸ್ಥೆಯ ವಿರುದ್ಧವಾಗಿ ಪುತ್ತೂರಿನಲ್ಲಿ ಹಲವಾರು ಬಾರಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಇದರೊಂದಿಗೆ ಸಮಾಜಮುಖಿ-ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ ಹಾಗೂ ಉದ್ಯೋಗದಲ್ಲಿರುವ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಪುತ್ತೂರು ನಗರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.