ಪುತ್ತೂರು ತಾಲೂಕು ದಸರಾ ಕ್ರೀಡಾಕೂಟ
ಪುತ್ತೂರು; ದಸರಾ ಕ್ರೀಡಾಕೂಟ ಈ ನಾಡಿನ ಹೆಮ್ಮೆಯಾಗಿದೆ. ಗ್ರಾಮೀಣ ಭಾಗದ ಯುವಜನತೆಯ ಪ್ರತಿಭೆಗಳನ್ನು ಒರೆಗೆ ಹಚ್ಚುವ ಕ್ರೀಡಾಕೂಟದಲ್ಲಿ ನಡೆಯಲಿದೆ. ವಿದೇಶಗಳಲ್ಲಿ ಕ್ರೀಡೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಆದರೆ ಭಾರತ ದಲ್ಲಿ ಕ್ರೀಡೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿಲ್ಲ. ಮನುಷ್ಯನ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುವ ವ್ಯಾಯಾಮ ಮತ್ತು ಕ್ರೀಡೆಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯತೆ ಇದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಹೇಳಿದರು.
ಅವರು ಪುತ್ತೂರು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ನಡೆದ ತಾಲೂಕು ದಸರಾ ಕ್ರೀಡಾಕೂಟದ ಸಭಾ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದೇಶಗಳಲ್ಲಿ ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಹೆಚ್ಚಿನ ತರಬೇತಿಗಳನ್ನು ಆಯೋಜನೆ ಮಾಡುವ ಮೂಲಕ ಅವರ ಪ್ರಗತಿಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಮಾಡಲಾಗುತ್ತದೆ. ಆದರೆ ನಮ್ಮಲ್ಲಿ ಅಂತಹ ತರ ಬೇತಿ ದೊರೆಯಬೇಕಾದರೆ ಕ್ರೀಡಾಪಟುಗಳು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಬೇಕಾಗಿದೆ. ಹಾಗಾಗಿ ನಮ್ಮಲ್ಲಿ ಪ್ರತಿಭೆ ಇದ್ದರೂ ಬಹಳಷ್ಟು ಯುವಕ-ಯುವತಿಯರು ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ನಮ್ಮ ದೇಶ ಹೆಚ್ಚಿನ ಪ್ರಗತಿ ಸಾಧಿಸಬೇಕಾದರೆ ಕನಿಷ್ಠ ತಾಲೂಕು ಮಟ್ಟದಲ್ಲಿ ಕ್ರೀಡಾ ತರಬೇತಿ ಕೇಂದ್ರಗಳ ಸ್ಥಾಪನೆ ಯಾಗಬೇಕಾಗಿದೆ. ಗ್ರಾಮೀಣ ಬಾಗದ ಯುವ ಜನತೆಗೆ ಕ್ರೀಡಾ ಪರಿಕರಗಳು ಹಾಗೂ ಸೌಲಭ್ಯಗಳು ದೊರಕುವಂತಾಗ ಬೇಕಾಗಿದೆ ಎಂದು ಅವರು ಹೇಳಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ಮಾತನಾಡಿ, ಕ್ರೀಡೆ ಮಾನವನ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಪೂರಕ. ಆದರೆ ಕ್ರೀಡಾ ವ್ಯವಸ್ಥೆಯಲ್ಲಿ ಬಹಳಷ್ಟು ಪ್ರತಿಭೆಗಳು ಭಾಗವಹಿಸುತ್ತಿಲ್ಲ. ಗ್ರಾಮೀಣ ಭಾಗ ದಲ್ಲಿ ಹೆಚ್ಚು ಕ್ರೀಡಾಕೂಟಗಳು ನಡೆಯುವಂತಾದರೆ ಕ್ರೀಡಾಪಟುಗಳಿಗೆ ಪ್ರಯೋಜನವಾಗಬಹುದಾಗಿದೆ. ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಹೆಚ್ಚೆಚ್ಚು ಯುವ ಜನತೆ ಭಾಗವಹಿಸಬೇಕಾಗಿದೆ ಎಂದು ಹೇಳಿದರು.
ಕ್ರೀಡಾಧ್ವಜಾರೋಹಣ ನಡೆಸಿದ ನಗರಸಭಾ ಸದಸ್ಯ ಪಿ.ಜಿ.ಜಗನ್ನೀವಾಸ ರಾವ್ ಮಾತನಾಡಿದರು.
ವೇದಿಕೆಯಲ್ಲಿ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ವೈ ನಾಯಕ್, ಸುಳ್ಯ ನೋಡೆಲ್ ಅಧಿಕಾರಿ ದೇವರಾಜ ಮುತ್ಲಾಜೆ, ಜಿಲ್ಲಾ ಯುವಕನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲಿ ಯಾನ್, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ರೈ, ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸೀತಾರಾಮ ಗೌಡ, ಗ್ರೇಡ್ 2 ಶಿಕ್ಷಕರ ಸಂಘದ ಅಧ್ಯಕ್ಷ ಸುಧಾಕರ ರೈ, ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ಕೆಡಿಪಿ ಮಾಜಿ ಸದಸ್ಯ ಕೃಷ್ಣಪ್ರಸಾದ್ ಆಳ್ವ, ಪಟ್ಟೆ ಶ್ರೀಕೃಷ್ಣ ಯುವಕ ಮಂಡಲದ ಅಧ್ಯಕ್ಷ ಲಿಂಗಪ್ಪ ಗೌಡ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ರಾಷ್ಟ್ರ ಪುರಸ್ಕøತ ನಿವೃತ್ತ ದೈಹಿಕ ಶಿಕ್ಷಕ ದಯಾನಂದ ರೈ ಕೋರ್ಮಂಡ ಇದ್ದರು. ಪುತ್ತೂರು ಮತ್ತು ಕಡಬ ತಾಲೂಕು ದಸರಾ ಕ್ರೀಡಾಕೂಟದ ನೋಡೆಲ್ ಅಧಿಕಾರಿ ಎಂ.ಮಾಮಚ್ಚನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪುತ್ತೂರು ಮೇಲ್ವಿಚಾರಕ ಶ್ರೀಕಾಂತ್ ಬಿರಾವು ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.