ಪುತ್ತೂರು: ಕೊಳೆತ ಸ್ಥಿತಿಯಲ್ಲಿ ವೃದ್ಧನ ಮೃತದೇಹ ಪತ್ತೆ; ಸ್ಥಳೀಯರಿಂದ ಅಂತ್ಯಕ್ರಿಯೆ
ಪುತ್ತೂರು: ವಾರದ ಹಿಂದೆ ಮೃತಪಟ್ಟಿದ್ದ ವೃದ್ಧರೊಬ್ಬರ ಮೃತದೇಹವನ್ನು ಸೆ.18 ಬುಧವಾರ ಅಂತ್ಯಕ್ರಿಯೆ ನಡೆಸಿದ ಘಟನೆ ತಾಲೂಕಿನ ಬಲ್ನಾಡು ಗ್ರಾಮದ ದೇರಾಜೆ ಎಂಬಲ್ಲಿ ನಡೆದಿದೆ.
ಬಲ್ನಾಡು ಗ್ರಾಮದ ದೇರಾಜೆ ಅಟ್ಲಾರು ನಿವಾಸಿ ರಮೇಶ್ ರಾವ್ (70) ಮೃತಪಟ್ಟವರು. ಮಕ್ಕಳಿಲ್ಲದ ದಂಪತಿ ಮಾತ್ರ ಮನೆಯಲ್ಲಿದ್ದರು. ಪತ್ನಿ ತೀವ್ರ ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದು ಪತಿಯೇ ಮನೆಯ ದೈನಂದಿನ ಜವಾಬ್ದಾರಿ ನಿರ್ವಹಿಸುತ್ತಿದ್ದರು. ವಾರದ ಹಿಂದೆಯೇ ವೃದ್ಧ ಪತಿ ಮನೆಯೊಳಗೆ ಮೃತಪಟ್ಟಿದ್ದರೂ ಅನಾರೋಗ್ಯ ಪೀಡಿತ ಪತ್ನಿಗೆ ಗೊತ್ತಾಗದ ಕಾರಣ ಕೊಳೆತು ಹೋಗಿತ್ತು ಎಂದು ತಿಳಿದು ಬಂದಿದೆ.
ರಮೇಶ್ ರಾವ್ ಅವರೇ ಅಡುಗೆ ಮಾಡಿ ಪತ್ನಿಗೆ ಉಣಬಡಿಸುತ್ತಿದ್ದರು. ಆದರೆ ಕೆಲವು ದಿನಗಳ ಹಿಂದೆ ಅವರು ಮೃತಪಟ್ಟಿದ್ದು, ಆದರೆ ಈ ಸಂಗತಿ ಗೊತ್ತಾಗದ ಪತ್ನಿ ಮನೆಯೊಳಗೇ ಇದ್ದು ಆಹಾರ ಇಲ್ಲದೆ ಬಳಲಿದ್ದರು. ಬುಧವಾರ ಬೆಳಗ್ಗೆ ಹತ್ತಿರದ ಮನೆಗೆ ಬಂದು ಊಟ ನೀಡುವಂತೆ ಕೇಳಿದ್ದರು. ಆಗ ಆ ಮನೆಯವರು ಪರಿಶೀಲಿಸಿದಾಗ ಮನೆ ಯಜಮಾನ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಮೃತದೇಹವನ್ನು ಸೆ. 18ರಂದು ಸ್ಥಳೀಯರು ಪುತ್ತೂರು ಮಡಿವಾಳಕಟ್ಟೆ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ. ಇದೀಗ ಅನಾಥೆಯಾಗಿರುವ ಮಹಿಳೆ ಯನ್ನು ತಾತ್ಕಾಲಿಕವಾಗಿ ಸ್ಥಳೀಯರೇ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಂಪ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.