'ಪರಿಹಾರ ಮೊತ್ತ ಸಿಗದೆ ಒಂದಿಂಚೂ ಜಾಗವನ್ನೂ ಹೆದ್ದಾರಿ ಅಗಲೀಕರಣಕ್ಕೆ ಬಿಟ್ಟು ಕೊಡೆವು'
ನಂತೂರಿನಲ್ಲಿ ರಾ.ಹೆ.169 ಭೂಮಾಲಕರ ಹೋರಾಟ ಸಮಿತಿಯಿಂದ ಧರಣಿ ಆರಂಭ
*ಆ.30ರೊಳಗೆ ಬೇಡಿಕೆ ಈಡೇರದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ*
ಮಂಗಳೂರು, ಆ.22: ಕುಲಶೇಖರಿಂದ ಕಾರ್ಕಳ (ಸಾಣೂರು)ವರೆಗಿನ ರಾ.ಹೆದ್ದಾರಿ 169ರ ಅಗಲೀಕರಣಕ್ಕಾಗಿ ಭೂಸ್ವಾಧೀನಗೊಂಡವರಿಗೆ ಸೂಕ್ತ ಪರಿಹಾರದ ಹಣ ಬ್ಯಾಂಕ್ ಖಾತೆಗೆ ಜಮಾ ಆಗುವವರೆಗೂ ಒಂದಿಂಚೂ ಜಾಗವನ್ನು ಬಿಡಲಾಗದು ಎಂದು ಭೂ ಮಾಲಕರ ಹೋರಾಟ ಸಮಿತಿ ಅಧ್ಯಕ್ಷೆ ಮರಿಯಮ್ಮ ಥಾಮಸ್ ಹೇಳಿದ್ದಾರೆ.
ನಂತೂರಿನ ತಾರೆತೋಟ ಬಳಿ ರಾಷ್ಟ್ರೀಯ ಹೆದ್ದಾರಿ ಯೋಜನಾಧಿಕಾರಿ ಕಚೇರಿ ಎದುರು ರಾಷ್ಟ್ರೀಯ ಹೆದ್ದಾರಿ 169 ಭೂಮಾಲಕರ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರದಿಂದ ಆ. 30ರವರೆಗೆ ಹಮ್ಮಿಕೊಳ್ಳಲಾಗಿರುವ ಪ್ರತಿಭಟನಾ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
2016ರಿಂದ ಭೂಮಿ ಸರಕಾರದ ಕೈಯಲ್ಲಿದೆ. 2020ರಿಂದ ಭೂ ಪರಿಹಾರ ನೀಡುವ ಪ್ರಕ್ರಿಯೆಗಳು ನಡೆಯುತ್ತಿದ್ದರೂ ಪರಿಹಾರ ಮಾತ್ರ ನೀಡಿಲ್ಲ. ಅಧಿಕಾರಿಗಳ ವಿಳಂಬ ನೀತಿಯಿಂದಾಗಿ 483 ಕೋಟಿ ರೂ.ಗಳಿದ್ದ ಪರಿಹಾರಧನ 1,113 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ರಸ್ತೆ ಕಾಮಗಾರಿ ನಡೆಯದೆ ಟ್ರಾಫಿಕ್ ಸಮಸ್ಯೆಯಿಂದ ಪ್ರತಿನಿತ್ಯ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ ಎಂದು ಮರಿಯಮ್ಮ ಥಾಮಸ್ ಆರೋಪಿಸಿದರು.
ಸರಕಾರವು ಭೂ ಕಳೆದುಕೊಂಡವರಿಗೆ ಪರಿಹಾರ ಹಣ ಭಿಕ್ಷೆ ನೀಡುವುದಲ್ಲ. ತಮ್ಮ ಮೌಲ್ಯಯುತ ಆಸ್ತಿಯನ್ನು ಕಳೆದುಕೊಂಡು ಮತ್ತೆ ಬದುಕು ಕಟ್ಟಿಕೊಳ್ಳಬೇಕಾದರೆ ಸೂಕ್ತ ಪರಿಹಾರ ಒದಗಿಸುವುದು ಸರಕಾರದ ಕರ್ತವ್ಯ. ರಸ್ತೆ ನಿರ್ಮಾಣದ ಬಳಿಕ ಅಲ್ಲಿ ಟೋಲ್ ಮೂಲಕ ಹಣ ಸಂಗ್ರಹಿಸುತ್ತಾರೆ. ಹಾಗಿರುವಾಗ ಭೂ ಸಂತ್ರಸ್ತರಿಗೆ ಪರಿಹಾರ ನೀಡಲು ಈ ರೀತಿಯ ವಿಳಂಬ ಧೋರಣೆ ಯಾಕೆ ಎಂದು ಅವರು ಪ್ರಶ್ನಿಸಿದರು.
9 ದಿನಗಳ ಕಾಲ ನಡೆಯಲಿರುವ ಪ್ರತಿಭಟನಾ ಧರಣಿಯ ಪ್ರಥಮ ದಿನವಾದ ಮಂಗಳವಾರದ ಪ್ರತಿಭಟನೆಯಲ್ಲಿ ಪದವು ಗ್ರಾಮ ಹಾಗೂ ಆಸುಪಾಸಿನ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದು, ಧರಣಿಯ ಉಳಿದ ದಿನಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿವಿಧ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಲಿದ್ದಾರೆ. ಈ ಒಂಭತ್ತು ದಿನಗಳಲ್ಲಿ ಬೇಡಿಕೆ ಈಡೇರದಿದ್ದರೆ ಮುಂದೆ ಅನಿರ್ದಿಷ್ಟಾವಧಿ ಮುಷ್ಕರವನ್ನು ನಡೆಸುವುದಾಗಿ ಅವರು ಹೇಳಿದರು.
ಸಂಚಾಲಕ ಪ್ರಕಾಶ್ಚಂದ್ರ, ವಿಶ್ವಜಿತ್, ರತ್ನಾಕರ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.
ದೀಪ ಬೆಳಗಿಸಿ ಪ್ರತಿಭಟನಾ ಧರಣಿಯ ಉದ್ಘಾಟನೆಗೂ ಮುನ್ನ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಶತಾಯುಷಿ ಸೀತಾರಾಮ ಶೆಟ್ಟಿ ಭಾಗಿ
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ತನ್ನ ಕೃಷಿ ಭೂಮಿಯನ್ನು ಕಳೆದುಕೊಳ್ಳುತ್ತಿರುವ ಶತಾಯುಷಿ ಸೀತಾರಾಮ ಶೆಟ್ಟಿಯವರು ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು.
‘ಗುರುಪುರ ಅಡ್ಡೂರು ಬಳಿ ಈಗಾಗಲೇ ಒಂದು ಸೇತುವೆ ಇದೆ. ಆ ಸೇತುವೆಯನ್ನು ಬಿಟ್ಟು ಮತ್ತೆ ಎರಡು ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಅಡ್ಡೂರಿನಿಂದ ಉಳಿಪಾಡಿವರೆಗೆ ಸುತ್ತುಬಳಸಿ ರಸ್ತೆ ಮಾಡಿರುವುದರಿಂದ ನಾಲ್ಕೈದು ಕಿ.ಮೀ. ಹೆಚ್ಚುವರಿ ರಸ್ತೆಯಾಗಿದೆ. ಇದರಿಂದ 125 ಕೋಟಿ ರೂ. ಹೆಚ್ಚುವರಿ ಜನರ ತೆರಿಗೆ ಹಣ ಬಳಕೆಯಾಗುತ್ತಿದೆ. ಕೆಲವೆಡೆ ಅನುಕೂಲಕ್ಕೆ ತಕ್ಕ ಹಾಗೆ ನಕ್ಷೆ ಬದಲಾವಣೆ ಮಾಡಲಾಗಿದೆ.’
-ಜಯರಾಂ ಪೂಜಾರಿ, ಬೆಳುವಾಯಿ ಗ್ರಾಮ.