ಅಪರೂಪದ ಶಸ್ತ್ರ ಚಿಕಿತ್ಸೆ: ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ
ಕೊಣಾಜೆ: ಮಂಗಳೂರಿನ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೃದಯ ಶಸ್ತ್ರ ಚಿಕಿತ್ಸಕರ ತಂಡವು ಇತ್ತೀಚೆಗೆ, ಅತ್ಯಂತ ಅಪರೂಪದ ಜನ್ಮಜಾತ ಖಾಯಿಲೆಯಾದ ಎಬ್ಸ್ಟೀನ್ ಅನಾಮಲಿ (ebstein anamoly) ಎನ್ನುವ ಹೃದಯದ ಬಲ ಭಾಗದ ಕವಾಟದ ದೋಷದ ಕ್ಲಿಷ್ಟಕರವಾದ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದರು.
ಎಬ್ಸ್ಟೀನ್ ಖಾಯಿಲೆಯಿಂದ ಬಳಲುತ್ತಿದ್ದ 36 ವರ್ಷದ ಚಿತ್ರದುರ್ಗದ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಯೆನೆಪೋಯ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನುರಿತ ಹೃದ್ರೋಗ ಶಸ್ತ್ರ ಚಿಕಿತ್ಸಕರ ತಂಡವು(ಡಾ.ಶಕ್ತಿವೇಲ್, ಡಾ.ಗಣೇಶ್ ಕಾಮತ್, ಅರ್ಜುನ್,ಡಾ.ನೀಲೇಶ್, ಡಾ.ಕೃಷ್ಣಪ್ರಸಾದ್, ಡಾ.ಮೋಹನದಾಸ್, ಡಾ.ವಿನಾಯಕ್) ಸೂಕ್ತಪರೀಕ್ಷೆಗಳ ನಂತರ ರೋಗಿಯನ್ನು "ಕೋನ್ ರಿಪೇರ್" ಎನ್ನುವ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿ ಕವಾಟವನ್ನು ಸರಿಪಡಿಸಿದರು.
ಇಂತಹ ಕ್ಲಿಷ್ಟಕರವಾದ ಶಸ್ತ್ರ ಚಿಕಿತ್ಸೆಯನ್ನು ನಿರ್ವಹಿಸುವ ಕರ್ನಾಟಕದ ಬೆರಳೆಣಿಕೆಯ ಕೇಂದ್ರಗಳಲ್ಲಿ ಯೆನೆಪೋಯ ಹೃದ್ರೋಗ ಕೇಂದ್ರವೂ ಒಂದಾಗಿದೆ. ಇದು ಇಂತಹ ಖಾಯಿಲೆಗೆ ಯೆನೆಪೋಯ ವೈದ್ಯಕೀಯ ಕಾಲೇಜಿನ ಹೃದ್ರೋಗ ತಂಡವು ಯಶಸ್ವಿಯಾಗಿ ನಿರ್ವಹಿಸಿದ ಈವರೆಗಿನ ಮೂರನೆಯ ಶಸ್ತ್ರ ಚಿಕಿತ್ಸೆಯಾಗಿದೆ. ಈ ತರಹದ ಶಸ್ತ್ರ ಚಿಕಿತ್ಸೆಯಲ್ಲಿ ಹೃದಯ ಬಡಿತದ ವ್ಯತ್ಯಾಸವಾಗಿ(ಹಾರ್ಟ್ ಬ್ಲಾಕ್), ಕೃತಕ ನಿಯಂತ್ರಕವನ್ನು(ಪೇಸ್ ಮೇಕರ್) ಅಳವಡಿಸಬೇಕಾದ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಅತ್ಯಂತ ಸೂಕ್ಷ್ಮತೆಯಿಂದ ಶಸ್ತ್ರ ಕ್ರಿಯೆಯನ್ನು ನಿಭಾಯಿಸುವ ಮೂಲಕ ಇದನ್ನು ತಡೆಯು ವಲ್ಲಿ ತಂಡವು ಯಶಸ್ವಿಯಾಗಿದೆ. ಈವರೆಗಿನ ಮೂರು ರೋಗಿಗಳಲ್ಲಿ ಇದು ಅತ್ಯಂತ ಕ್ಲಿಷ್ಟಕರವಾದ ಮೂರನೆಯ ವಿಧದ ಎಬ್ಸ್ಟೀನ್ ಖಾಯಿಲೆಯಾಗಿದ್ದು, ಶಸ್ತ್ರ ಚಿಕಿತ್ಸೆಯು ಅತ್ಯಂತ ಸವಾಲಿನಿಂದ ಕೂಡಿತ್ತು. ಸರಿಯಾದ ಹೃದಯ ಬಡಿತ, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಬಲ ಕವಾಟ ಹಾಗೂ ಹೃತ್ಕಕ್ಷಿಯೊಂದಿಗೆ ಗುಣಮುಖವಾಗಿ ಮಹಿಳೆಯು ಆಸ್ಪತ್ರೆಯಿಂದ ನಿರ್ಗಮಿಸಿದ್ದಾರೆ.
ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೃದ್ರೋಗ ಶಸ್ತ್ರ ಚಿಕಿತ್ಸಕರ ತಂಡವು ನುರಿತ ಹೃದಯ ಶಸ್ತ್ರ ಚಿಕಿತ್ಸ ಕರು, ಹೃದ್ರೋಗ ಅರವಳಿಕೆ ತಜ್ಞರು, ಪರ್ಫ್ಯೂಷನಿಷ್ಟ್, ಶುಷ್ರೂಶಕಿಯರು, ತಂತ್ರಜ್ಞರು ಹಾಗೂ ನುರಿತ ಶಸ್ತ್ರ ಚಿಕಿತ್ಸಾ ನಂತರದ ತೀವ್ರ ನಿಗಾ ಘಟಕವನ್ನು ಒಳಗೊಂಡಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಹಬೀಬ್ ರಹ್ಮಾನ್ ಅವರು ಹೇಳಿದರು.