ಓದುವ ಹವ್ಯಾಸ ಪ್ರತಿ ಮನೆಗಳಲ್ಲಿರಲಿ: ವಿದ್ಯಾಲಕ್ಷ್ಮೀ ಪ್ರಭು
ಉಪ್ಪಿನಂಗಡಿಯಲ್ಲಿ ಪುಸ್ತಕ ಹಬ್ಬಕ್ಕೆ ಚಾಲನೆ
ಉಪ್ಪಿನಂಗಡಿ: ಪ್ರತಿ ಮನೆಯಲ್ಲೂ ಪುಸ್ತಕಗಳನ್ನು ಓದುವ ಹವ್ಯಾಸ ಮುಂದುವರಿದಾಗ ಸಾಹಿತ್ಯದ ಬೆಳವಣಿಗೆಯೊಂದಿಗೆ ಜ್ಞಾನ ವೃದ್ಧಿಯೂ ನಮ್ಮದಾಗಲಿದೆ ಎಂದು ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ವಿದ್ಯಾಲಕ್ಷ್ಮೀ ಪ್ರಭು ತಿಳಿಸಿದರು.
ಕರ್ನಾಟಕ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ವತಿಯಿಂದ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಮಿತ್ರಂಪಾಡಿ ಜಯರಾಮ್ ರೈ ಅವರ ಮಹಾಪೋಷಕತ್ವದಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಸಭಾಂಗಣದಲ್ಲಿ ಸೆ.29ರಿಂದ ಮೂರು ದಿನಗಳ ಕಾಲ ನಡೆಯುವ ಪುಸ್ತಕ ಹಬ್ಬ, ಪುಸ್ತಕ ದಾನಿಗಳ ಸಮಾವೇಶ ಹಾಗೂ ಉಪ್ಪಿನಂಗಡಿ ಗ್ರಾಮ ಸಾಹಿತ್ಯ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಾಹಿತ್ಯ ಸಂಭ್ರಮವೆನ್ನುವುದು ಮನೆ-ಮನೆಯ ಹಬ್ಬವಾಗಬೇಕು. ಕಸಾಪದಿಂದ ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆದಾಗ ಕನ್ನಡ ಸಾಹಿತ್ಯ ಲೋಕವು ಬೆಳೆಯಲು ಸಾಧ್ಯ ಎಂದರು.
ಪುಸ್ತಕ ದಾನ ನೀಡಿ ಮಾತನಾಡಿದ ಹಿರಿಯ ಸಾಹಿತಿ ಡಾ. ತಾಳ್ತಜೆ ವಸಂತ ಕುಮಾರ, ನಮ್ಮ ಮಾತೃ ಭಾಷೆಗಳು ಬೇರೆಯಾಗಿದ್ದರೂ, ಕನ್ನಡ ಭಾಷೆಯಲ್ಲಿ ಪ್ರಾದೇಶಿಕವಾಗಿ ಭಿನ್ನತೆಯಿದ್ದರೂ ನಾವೆಲ್ಲಾ ಕನ್ನಡದ ಪ್ರದೇಶದಲ್ಲಿರುವ ನಾವೆಲ್ಲರೂ ಕನ್ನಡಿಗರೇ. ಕನ್ನಡ ನಾಡಿನ ಪರಂಪರೆ ಉದಾತ್ತವಾಗಿದ್ದು, ವಿಭಜನೆಯಿಂದಾಗಿ ಕನ್ನಡ ನಾಡಿನ ಸೀಮೆ ಈಗ ಸಣ್ಣದಾಗಿದ್ದರೂ, ಗಡಿ ಭಾಗಕ್ಕೆ ಹೊಂದಿಕೊಂಡ ನಮ್ಮ ನೆರೆಹೊರೆಯವರು ಕೂಡಾ ಕನ್ನಡಿಗರೇ. ಪುಸ್ತಕದಾನವೆನ್ನುವುದು ಇಂದು-ನಿನ್ನೆಯದ್ದಲ್ಲ. 10 ನೇ ಶತಮಾನದಲ್ಲಿಯೇ ದಾನಚಿಂತಾಮಣಿಯೆಸಿಕೊಂಡಿದ್ದ ಅತ್ತಿಮಬ್ಬೆಯವರಿಂದ ಆರಂಭವಾಗಿದೆ. ಅಜ್ಜಿ ಕಥೆಗಳು ಸೇರಿದಂತೆ ಬಾಲ್ಯದಲ್ಲಿ ನಮಗೆ ಸಿಗುತ್ತಿದ್ದ ಮೌಖಿಕ ಸಾಹಿತ್ಯದಿಂದ ಇಂದಿನ ಮಕ್ಕಳು ವಂಚಿತರಾಗುತ್ತಿದ್ದು, ಆದ್ದರಿಂದ ಓದುವ ಮನೋಧರ್ಮ ಕಡಿಮೆಯಾಗುತ್ತಿದೆ ಎಂದರು.
ಸಾಧಕರನ್ನು ಅಭಿನಂದಿಸಿ ಮಾತನಾಡಿದ ಉಪ್ಪಿನಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಕೆ.ವಿ. ಪ್ರಸಾದ, ಆಸ್ತಕ್ತಿಯ ಕ್ಷೇತ್ರದಲ್ಲಿ ಹೊಸತನದೊಂದಿಗೆ ಕೆಲಸ ಮಾಡಿದಾಗ ಆತ ಸಾಧಕನಾಗಿ ಗುರುತಿಸಿಕೊಳ್ಳಲು ಸಾಧ್ಯ. ನಮ್ಮ ನಾಡು ಸಂಗೀತ ಕಲೆಗಳ ಬೀಡಾಗಿದ್ದು, ಇದನ್ನು ಇನ್ನಷ್ಟು ಬೆಳೆಸುವ ಕಾರ್ಯವಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ಕನ್ನಡ ಸಾಹಿತ್ಯವು ಎಲ್ಲರ ಮನೆಬಾಗಿಲನ್ನು ತಟ್ಟಿ, ಅವರ ಮನಸ್ಸು ಮುಟ್ಟಿ ಬರಬೇಕು ಎಂಬ ಉದ್ದೇಶದಿಂದ ಗ್ರಾಮ ಸಾಹಿತ್ಯ ಸಂಭ್ರಮ ಎಂಬ ಘೋಷವಾಕ್ಯದಲ್ಲಿ ಐದು ವರ್ಷಗಳ ಕಾಲ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ಕಾರ್ಯಕ್ರಮದಲ್ಲೂ ಅಲ್ಲಿನ ಸಾಧಕರನ್ನು ಗುರುತಿಸುವ ಕೆಲಸ ನಡೆಸಲಾಗುತ್ತದೆ. ಕನ್ನಡ ಸಾಹಿತ್ಯ ಲೋಕ ಇನ್ನಷ್ಟು ಬೆಳೆಯಬೇಕು. ಎಲ್ಲರನ್ನೂ ತಲುಪಬೇಕಾಗಿದ್ದು, ಇದಕ್ಕೆ ಈ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಗ್ರಾ.ಪಂ. ಮಾಜಿ ಅಧ್ಯಕ್ಷೆ ಉಷಾ ಮುಳಿಯ, ಉಪ್ಪಿನಂಗಡಿ ರೋಟರಿ ಕ್ಲಬ್‍ನ ಅಧ್ಯಕ್ಷೆ ಅನುರಾಧ ಆರ್. ಶೆಟ್ಟಿ, ಸತ್ಯಶಾಂತ ಪ್ರತಿಷ್ಠಾನದ ಅಧ್ಯಕ್ಷೆ ಶಾಂತಾ ಕುಂಟಿನಿ, ಉಪ್ಪಿನಂಗಡಿ ಗ್ರಾ.ಪಂ. ಕಾರ್ಯದರ್ಶಿ ಗೀತಾ ಶೇಖರ್ ಮಾತನಾಡಿ ಶುಭ ಹಾರೈಸಿದರು.
ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲಲಿತ ಪುಸ್ತಕ ಮೇಳವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಚಲನಚಿತ್ರ ನಟ, ನಿರ್ದೇಶಕ ಎಂ.ಕೆ. ಮಠ, ಹಿರಿಯ ಸಾಹಿತಿ ಜಲೀಲ್ ಮುಕ್ರಿ, ಹವ್ಯಾಸಿ ಯಕ್ಷಗಾನ ಕಲಾವಿದ ತಲೆಂಗಳ ಕೃಷ್ಣ ಭಟ್, ವರ್ಣ ಚಿತ್ರ ಕಲಾವಿದ ಬಾಲಕೃಷ್ಣ ರೈ, ಕಿರು ಚಲನಚಿತ್ರ ನಿರ್ಮಾಪಕ, ಯುವ ನಿರ್ದೇಶಕ ಅಚಲ್ ಉಬರಡ್ಕ, ದಿ. ಕಜೆ ಈಶ್ವರ ಭಟ್ ಸ್ಥಾಪಿಸಿದ ಕನ್ನಡ ಸಂಗಮ ಸಂಸ್ಥೆಯ ಪರವಾಗಿ ಅವರ ಪುತ್ರ ಡಾ. ಗೋವಿಂದ ಪ್ರಸಾದ ಕಜೆ, ಜಿಲ್ಲಾ ಪ್ರಶಸ್ತಿ ಪುರಸ್ಕೃತ `ಅಮಲು' ಕಿರು ಚಿತ್ರವನ್ನು ನಿರ್ಮಿಸಿದ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ತಂಡವನ್ನು ಸನ್ಮಾನಿಸಿ, ಗೌರವಿಸಲಾಯಿತು.
ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಸುರೇಶ್ ಅತ್ರೆಮಜಲು, ರೋಟರಿ ವಲಯ ಸೇನಾನಿ ರವೀಂದ್ರ ದರ್ಬೆ, ಹಿರಿಯ ಸಾಹಿತಿ ಬಿ.ವಿ. ಅರ್ತಿಕಜೆ, ಪ್ರಮುಖರಾದ ಜಯಂತಿ ಪೊರೋಳಿ, ವಿದ್ಯಾಧರ ಜೈನ್, ಮಹಾಲಿಂಗೇಶ್ವರ ಭಟ್, ಶ್ರೀಮತಿ ದುರ್ಗಾಮಣಿ ಮತ್ತಿತರರು ಉಪಸ್ಥಿತರಿದ್ದರು.
ಕಸಾಪ ಉಪ್ಪಿನಂಗಡಿ ಹೋಬಳಿಯ ನಿಯೋಜಿತ ಅಧ್ಯಕ್ಷ ಕರುಣಾಕರ ಸುವರ್ಣ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಉದಯಕುಮಾರ್ ಯು.ಎಲ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಸುಬ್ಬಪ್ಪ ಕೈಕಂಬ ವಂದಿಸಿದರು. ಯುವ ಸಾಹಿತಿ ಜ್ಯೋತಿ ರಾಮಕುಂಜ ಸನ್ಮಾನಿತರನ್ನು ಪರಿಚಯಿಸಿದರು. ಕಸಾಪ ಸದಸ್ಯ ಅಬ್ದುರ್ರಹ್ಮಾನ್ ಯುನಿಕ್ ಕಾರ್ಯಕ್ರಮ ನಿರೂಪಿಸಿದರು.