ಕ್ಲಿನಿಕ್, ಆಸ್ಪತ್ರೆಗಳ ನೋಂದಣಿ ಕಡ್ಡಾಯ; ಅರ್ಹತೆ ಇಲ್ಲದವರು ಲೈಂಗಿಕ ಸಮಸ್ಯೆಗಳಿಗೆ ಪರಿಹಾರ ನೀಡುವಂತಿಲ್ಲ: ಡಾ.ದೀಪಾ ಪ್ರಭು
ಮಂಗಳೂರು: ವೈದ್ಯಕೀಯ ವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ಸೇವೆಗಳನ್ನು ನೀಡುವ ವ್ಯಕ್ತಿ ಮತ್ತು ಸಂಸ್ಥೆಗಳು ಆರೋಗ್ಯ ಇಲಾಖೆಯಲ್ಲಿ ನೋಂದಾಯಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ದೀಪಾ ಪ್ರಭು ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯ ಕುಟುಂಬ ಮತ್ತು ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ನಡೆದ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಡೆಂಟಲ್,ಆಯುಷ್, ಹೋಮಿಯೋಪಥಿ, ಫಿಸಿಯೋಥೆರಿಪಿ, ನ್ಯಾಚುರೋಪತಿ ಸೇರಿದಂತೆ ವ್ಯೆದ್ಯಕೀಯ ಸೇವೆ ನೀಡುವ ಪ್ರತಿಯೊಂದು ಕ್ಲಿನಿಕ್,ಆಸ್ಪತ್ರೆ ಮತ್ತು ವ್ಯಕ್ತಿಗಳು,ಪ್ರಯೋಗಾಲಯ, ಪರೀಕ್ಷಾ ಕೇಂದ್ರಗಳು, ಅಲ್ಟ್ರಾಸೌಂಡ್ ಸಂಸ್ಥೆಗಳು ಕಡ್ಡಾಯವಾಗಿ ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನೆ ಕಾಯ್ದೆ(ಕೆಪಿಎಂಇಎ) ಅಡಿ ನೋಂದಣಿಗೊಳ್ಳಬೇಕಿದೆ.ನೋಂದಣಿ ಯಾಗದೆ ಕ್ಲಿನಿಕ್, ಆಸ್ಪತ್ರೆ, ಸಂಸ್ಥೆಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಲೈಂಗಿಕ ಸಮಸ್ಯೆ ಪರಿಹಾರ ಕೇಂದ್ರ: ಲೈಂಗಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ಹೆಸರಿನಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುವ ಕೇಂದ್ರಗಳನ್ನು ಮುಚ್ಚಿಸಲು ಕಾರ್ಯಾಚರಣೆ ನಡೆಸಲಾಗುವುದು. ಲೈಂಗಿಕ ಸಮಸ್ಯೆಗಳ ಚಿಕಿತ್ಸೆ ಆರೋಗ್ಯ ವ್ಯವಸ್ಥೆಯಡಿ ಬರುತ್ತದೆ.ಲೈಂಗಿಕ ಸಮಸ್ಯೆಗಳನ್ನು ಪರಿಹರಿಸುವ ಅಥವಾ ಚಿಕಿತ್ಸೆ ನೀಡುವ ಕೇಂದ್ರಗಳು ಆರೋಗ್ಯ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಣಿಗೊಳ್ಳಬೇಕಿದ್ದು, ಚಿಕಿತ್ಸೆ ನೀಡುವ ವ್ಯಕ್ತಿಗಳು ಸೂಕ್ತ ಅರ್ಹತೆ ಪಡೆದಿರಬೇಕಿದೆ.ಯಾವುದೇಅರ್ಹತೆ ಇಲ್ಲದೆ ಅನಧಿಕೃತ ವ್ಯಕ್ತಿಗಳು ಲೈಂಗಿಕ ಸಮಸ್ಯೆಗಳಿಗೆ ಪರಿಹಾರ ಅಥವಾ ಚಿಕಿತ್ಸೆ ಕೊಡಲು ಅವಕಾಶವಿಲ್ಲ ಎಂದು ತಿಳಿಸಿದರು.
ಜನನ ಪೂರ್ವ ಲಿಂಗ ನಿರ್ಣಯ: ಜಿಲ್ಲೆಯಲ್ಲಿರುವ ಎಲ್ಲಾ ಸ್ಕ್ಯಾನಿಂಗ್ ಕೇಂದ್ರಗಳು ಕಡ್ಡಾಯವಾಗಿ ಆರೋಗ್ಯಇಲಾಖೆಯಿಂದ ಲೈಸನ್ಸ್ ಪಡೆದಿರಬೇಕು. ಸ್ಕ್ಯಾನಿಂಗ್ ಕೇಂದ್ರಗಳು ಹೊಸ ಯಂತ್ರಖರೀದಿಸಲು ಮತ್ತು ಹಳೆ ಯಂತ್ರ ಬದಲಾಯಿಸಲು ಇಲಾಖೆಯ ಅನುಮತಿ ಪಡೆಯಬೇಕು ಎಂದು ಡಾ.ದೀಪಾ ಪ್ರಭು ತಿಳಿಸಿದರು.
ಜನನ ಪೂರ್ವ ಲಿಂಗಪತ್ತೆಗೆ ಯಾವುದೇ ಕಾರಣಕ್ಕೂ ಅವಕಾಶವಿಲ್ಲ, ಯಾವುದೇ ಸ್ಕ್ಯಾನಿಂಗ್ ಕೇಂದ್ರಗಳು ಭ್ರೂಣ ಲಿಂಗ ಪತ್ತೆ ನಡೆಸಿದರೆ, ಅಂತಹ ಕೇಂದ್ರಗಳನ್ನು ಮುಚ್ಚಿಸಲು ಕ್ರಮ ಕೈಗೂಳ್ಳಲಾಗುವುದು ಎಂದು ಅವರು ತಿಳಿಸಿದರು.
ದ.ಕ.ಜಿಲ್ಲಾ ಸಮಿತಿ ಅಧ್ಯಕ್ಷೆ ಡಾ.ವತ್ಸಲಾ ಕಾಮತ್ ಅಧ್ಯಕ್ಷತೆ ವಹಿಸಿದ್ದರು, ಲೇಡಿಗೋಷನ್‌ಆಸ್ಪತ್ರೆಯ ಅಧೀಕ್ಷಕ ಡಾ.ದುರ್ಗಾಪ್ರಸಾದ್, ಸದಸ್ಯರಾದ ಡಾ.ಅನಂತರಾಜ ಟ್, ಡಾ.ರವಿಚಂದ್ರ, ಡಾ.ಚಿದಾನಂದ, ಡಾ.ಶೆಲ್ಲಿ ಥಾಮಸ್, ಡಾ.ರೀಟಾ ನೊರೋನ್ಹಾ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಗುಲ್ಜಾರ್ ಮತ್ತಿತ್ತರರು ಸಭೆಯಲ್ಲಿ ಉಪಸ್ಥಿತರಿದ್ದರು.