ಮತದಾರರ ಪಟ್ಟಿಯಲ್ಲಿ ಜಾಗರೂಕರಾಗಿ ನೋಂದಾಯಿಸಿಕೊಳ್ಳಲು ಮುಸ್ಲಿಂ ಮತದಾರರಿಗೆ ಕರೆ ನೀಡಿದ ಧಾರ್ಮಿಕ ನಾಯಕರು
ಸಾಂದರ್ಭಿಕ ಚಿತ್ರ
ಮಂಗಳೂರು: ಮತದಾನವು ಸಾಂವಿಧಾನಿಕ ಹಕ್ಕಾಗಿದ್ದು, ನಮ್ಮ ದೇಶಪ್ರೇಮದ ಸಾಕ್ಷಿಯಾಗಿದೆ. ನಮ್ಮ ನಾಗರಿಕತ್ವದ ಬಲವಾದ ಪುರಾವೆಯಾಗಿದೆ. ಹೀಗಾಗಿ ಮತದಾನದ ಸಂದರ್ಭದಲ್ಲಿ ಅರ್ಹ ಅಭ್ಯರ್ಥಿಗೆ ಮತ ಚಲಾಯಿಸುವ ಮೂಲಕ ಮುಸ್ಲಿಂ ಸಮುದಾಯವು ತನ್ನ ಸಾಂವಿಧಾನಿಕ ಹಕ್ಕನ್ನು ಸಮರ್ಪಕವಾಗಿ ಬಳಸಬೇಕು ಹಾಗೂ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳುವಾಗ ಜಾಗರೂಕರಾಗಿರಬೇಕು ಎಂದು ಮುಸ್ಲಿಂ ಧಾರ್ಮಿಕ ಮುಖಂಡರಾದ ಹಝ್ರತ್ ಮೌಲಾನಾ ಮುಫ್ತಿ ಅಬುಲ್ ಕಾಸಿಮ್ ನೌಮಾನಿ ಸಾಹೇಬ್, ಹಝ್ರತ್ ಮೌಲಾನಾ ಸೈಯದ್ ಅರ್ಷದ್ ಮದನಿ ಸಾಹೇಬ್ ಸೇರಿದಂತೆ ಹಲವು ನಾಯಕರು ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದ್ದಾರೆ.
ದೇಶದ ಅಭಿವೃದ್ಧಿಯನ್ನು ಆದ್ಯತೆಯಾಗಿಸಿಕೊಂಡಿರುವ ನ್ಯಾಯವಂತ ಹಾಗೂ ಸೌಮ್ಯ ಸ್ವಭಾವದ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಅಭ್ಯರ್ಥಿಗಳ ಪ್ರಮುಖ ಆದ್ಯತೆ ಮಾನವ ಜೀವಗಳು ಹಾಗೂ ಆಸ್ತಿಪಾಸ್ತಿಗಳನ್ನು ರಕ್ಷಿಸುವುದಾಗಿರಬೇಕು. ದ್ವೇಷವು ಅವರ ಪ್ರಮುಖ ಕಾರ್ಯಸೂಚಿಯಾಗುವುದಿಲ್ಲವೆಂದು ಅವರು ಖಾತ್ರಿಪಡಿಸಬೇಕು. ಅಂಥವರಿಗೆ ಮಾತ್ರ ಮತ ಚಲಾಯಿಸಬೇಕು ಎಂದು ಧಾರ್ಮಿಕ ನಾಯಕರು ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದ್ದಾರೆ.
ಮುಸ್ಲಿಮರಿಗೆ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು. ಶೇ. 100ರಷ್ಟು ಮಂದಿ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಇಲ್ಲವಾದರೆ ನಮ್ಮ ನಾಗರಿಕತ್ವದ ದಾಖಲೆಯು ದುರ್ಬಲವಾಗುತ್ತದೆ. ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಲು ಒದಗಿಸುವ ದಾಖಲೆಗಳಲ್ಲಿ ಇರುವಂತೆಯೇ ಮತದಾರರ ಪಟ್ಟಿಯಲ್ಲೂ ತಮ್ಮ ಹೆಸರುಗಳ ಅಕ್ಷರಗಳು ನಮೂದಾಗುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದೂ ಅವರು ಮುಸ್ಲಿಂ ಸಮುದಾಯಕ್ಕೆ ಕಿವಿಮಾತು ಹೇಳಿದ್ದಾರೆ.
ಕಾಲೇಜು ವಿದ್ಯಾರ್ಥಿಗಳು, ಇತರ ರಾಜ್ಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಹಾಗೂ ಶ್ರಮಿಕ ವರ್ಗಗಳೂ ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಇದರೊಂದಿಗೆ ಮೃತಪಟ್ಟಿರುವ ವ್ಯಕ್ತಿಗಳ ಹೆಸರನ್ನು ಮತದಾರರ ಪಟ್ಟಿಯಿಂದ ತಪ್ಪದೇ ತೆಗೆಸಬೇಕು ಎಂದೂ ಕೋರಲಾಗಿದೆ.
ಈ ಅಭಿಯಾನದಲ್ಲಿ ಸಮುದಾಯದ ಸದಸ್ಯರು, ಗ್ರಾಮಾಧಿಕಾರಿಗಳು, ಸಮುದಾಯದ ಬುದ್ಧಿಜೀವಿಗಳು ಪಾಲ್ಗೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಅಭಿಯಾನಕ್ಕೆ ಬೆಂಬಲಿಸಿದ ಧಾರ್ಮಿಕ ನಾಯಕರು:
ಮೌಲಾನಾ ಮುಫ್ತಿ ಅಬುಲ್ ಖಾಸಿಂ ನೌಮಾನಿ ಸಾಹೇಬ್ (ಮೊಹ್ತಮಿಮ್ ದಾರುಲ್ ಉಲೂಮ್ ದಿಯೋಬಂದ್ ಮತ್ತು ರುಕ್ನ್ ಆಮಿಲಾ ಜಮೀಯತ್ ಉಲೇಮಾ ಹಿಂದ್)
ಮೌಲಾನಾ ಸಯ್ಯದ್ ಅರ್ಷದ್ ಮದನಿ ಸಾಹೇಬ್ (ಸದ್ರುಲ್ ಮುದರ್ರಿಸೀನ್ ದಾರುಲ್ ಉಲೂಮ್ ದಿಯೋಬಂದ್ ಮತ್ತು ಅಧ್ಯಕ್ಷರು ಜಮೀಯತ್ ಉಲೇಮಾ ಹಿಂದ್)
ಮೌಲಾನ ಸೈಯ್ಯದ್ ಮುಹಮ್ಮದ್ ಅಶ್ರಫ್ ಸಾಹೇಬ್ (ಅಖಿಲ ಭಾರತ ಉಲಮಾ ಮತ್ತು ಮಶೈಖ್ ಮಂಡಳಿಯ ಅಧ್ಯಕ್ಷ)
ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ ಸಾಹೇಬ್ (ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಅಧ್ಯಕ್ಷರು ಮತ್ತು ಮೊಹ್ತಮಿಮ್ ಅಲ್ ಮಹದ್ ಅಲ್ ಆಲಿ ಇಸ್ಲಾಮಿ ಹೈದರಾಬಾದ್ ನ ಅಧ್ಯಕ್ಷ)
ಸೈಯದ್ ಮಹಮೂದ್ ಅಸದ್ ಮದನಿ ಸಾಹೇಬ್ (ಜಮೀಯತ್ ಎ ಉಲೇಮಾ ಅಧ್ಯಕ್ಷರು, ರುಕ್ನ್ ಶುರಾ ದಾರುಲ್ ಉಲೂಮ್ ದಿಯೋಬಂದ್)
ಮೌಲಾನಾ ಸಗೀರ್ ಅಹ್ಮದ್ ಖಾನ್ ಸಾಹೇಬ್ (ಅಮೀರ್-ಎ-ಶರೀಯತ್ ಕರ್ನಾಟಕ, ಮೊಹ್ತಮಿಮ್ ದಾರುಲ್ ಉಲೂಮ್ ಸಬೀಲುರ್ ರಶಾದ್, ಬೆಂಗಳೂರು)
ಮೌಲಾನಾ ಮುಫ್ತಿ ಅಹ್ಮದ್ ಖಾನಪುರಿ ಸಾಹೇಬ್ (ಶೈಖುಲ್ ಹದೀಸ್ ಜಾಮಿಯಾ ತಲೀಮುದ್ದೀನ್ ಇಸ್ಲಾಂ, ಭಹಾಬೆಲ)
ಮೌಲಾನಾ ಅಸ್ಗರ್ ಅಲಿ ಇಮಾಮ್ ಮಹ್ದಿ ಸಾಹೇಬ್ (ಅಖಿಲ ಭಾರತ ಜಮಿಯತ್ ಅಹ್ಲೆ-ಹದಿತ್ ಅಧ್ಯಕ್ಷ)
ಮೌಲಾನಾ ಸೈಯದ್ ಬಿಲಾಲ್ ಅಬ್ದುಲ್ ಹಸನಿ ಸಾಹೇಬ್ (ನಾಝಿಮ್ ದಾರುಲ್ ಉಲೂಮ್ ನದ್ವತುಲ್ ಉಲಮಾ, ಲಕ್ನೋ)
ಸಾದತುಲ್ಲಾಹ್ ಹುಸೈನಿ ಸಾಹೇಬ್ (ಅಮೀರ್, ಜಮಾಅತ್ ಎ ಇಸ್ಲಾಮಿ ಹಿಂದ್)
ಮೌಲಾನಾ ಮುಹಮ್ಮದ್ ಸುಫ್ಯಾನ್ ಸಾಹೇಬ್ ಖಾಸ್ಮಿ (ಮೊಹ್ತಮಿಮ್ ದಾರ್ ಉಲೂಮ್ ವಕ್ಫ್ ದಿಯೋಬಂದ್)
ಮೌಲಾನಾ ಸೈಯದ್ ತನ್ವೀರ್ ಅಹ್ಮದ್ ಹಶ್ಮಿ ಸಾಹೇಬ್ ( ಅಧ್ಯಕ್ಷ - ಜಮಾಅತ್ ಅಹ್ಲೆ ಸುನ್ನತ್, ಕರ್ನಾಟಕ)