ಜಾನಪದ ವಿದ್ವಾಂಸ ಅಮೃತ ಸೋಮೇಶ್ವರ ಅಂತ್ಯಕ್ರಿಯೆ
ಮಂಗಳೂರು: ಶನಿವಾರ ಬೆಳಗ್ಗೆ ವಿಧಿವಶರಾದ ಹಿರಿಯ ಜಾನಪದ ವಿದ್ವಾಂಸ, ಸಂಶೋಧಕ, ಅನುವಾದಕ, ವಿಮರ್ಶಕ, ಡಾ. ಅಮೃತ ಸೋಮೇಶ್ವರ ಅವರ ಅಂತ್ಯಕ್ರಿಯೆಯು ರವಿವಾರ ಕೋಟೆಕಾರ್ ಸಮೀಪದ ಮಾಡೂರಿನ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.
ಅಂತಿಮ ದರ್ಶನಕ್ಕೆ ನೂರಾರು ಹಿತೈಷಿಗಳು, ಸಾಹಿತಿಗಳು, ಒಡನಾಡಿಗಳು, ಜನಪ್ರತಿನಿಧಿಗಳು, ಅಭಿಮಾನಿಗಳು ಸೋಮೇಶ್ವರದ ಅವರ ನಿವಾಸ ‘ಒಲುಮೆ’ಗೆ ತೆರಳಿ ಅಂತಿಮ ದರ್ಶನ ಪಡೆದರು. ಪೂ.11:30ಕ್ಕೆ ‘ಒಲುಮೆ’ಯಿಂದ ಪಾರ್ಥಿವ ಶರೀರವನ್ನು ಕೋಟೆಕಾರು ಮಾಡೂರಿನ ರುದ್ರಭೂಮಿಗೆ ಕೊಂಡು ಹೋಗಿ ಅಲ್ಲಿ ಅಂತಿಮ ಸಂಸ್ಕಾರದ ವಿಧಿವಿದಾನಗಳನ್ನು ನಡೆಸಲಾಯಿತು.
ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಡಾ. ಭರತ್ ಶೆಟ್ಟಿ, ಮಾಜಿ ಶಾಸಕರಾದ ಕೆ. ಜಯರಾಮ ಶೆಟ್ಟಿ, ಜೆ.ಆರ್. ಲೋಬೋ, ಐವನ್ ಡಿ.ಸೋಜ, ವಿಶ್ರಾಂತ ಕುಲಪತಿಗಳಾದ ಡಾ. ಬಿ.ಎ. ವಿವೇಕ್ ರೈ, ಡಾ.ಕೆ. ಚಿನ್ನಪ್ಪಗೌಡ, ಯಕ್ಷಗಾನ ವಿದ್ವಾಂಸ ಡಾ.ಪ್ರಭಾಕರ ಜೋಷಿ, ಸಾಹಿತಿ ಡಾ. ತಾಳ್ತಾಜೆ ವಸಂತ ಕುಮಾರ್ ಮತ್ತಿತರರು ಅಂತಿಮ ನಮನ ಸಲ್ಲಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತಾಪ: ಹಿರಿಯ ವಿದ್ವಾಂಸ ಡಾ. ಅಮೃತ ಸೋಮೇಶ್ವರ ಅವರ ನಿಧನಕ್ಕೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಂತಾಪ ಸೂಚಿಸಿದ್ದಾರೆ. ನೂರಾರು ಸಾಹಿತಿ, ಸಂಶೋಧನಾಸಕ್ತರಿಗೆ ಸದಾ ಕಾಲ ಪ್ರೇರಕ, ಮತ್ತು ಮಾರ್ಗದರ್ಶಕರಾಗಿದ್ದ ಪ್ರೊ. ಅಮೃತ ಸೋಮೇಶ್ವರ ಅವರ ಅಗಲಿಕೆಯು ನಾಡಿಗೆ ತುಂಬಲಾರದ ನಷ್ಟ.ವಾಗಿದೆ. ಮೃತರ ಕುಟುಂಬ, ಶಿಷ್ಯ ವೃಂದಕ್ಕೆ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ತನ್ನ ಸಂತಾಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.