ಸರಕಾರಿ ಶಾಲೆಗಳಲ್ಲಿ ಪರಿಸ್ಥಿತಿ ಸುಧಾರಣೆಗೆ ನಿರ್ದೇಶನ ನೀಡುವಂತೆ ಸಚಿವ ಪ್ರಿಯಾಂಕ್ ಖರ್ಗೆ ಗೆ ಮನವಿ
ಸಚಿವ ಪ್ರಿಯಾಂಕ್ ಖರ್ಗೆ
ಮಂಗಳೂರು: ಸರಕಾರಿ ಶಾಲೆಗಳಲ್ಲಿ ಈಗಿನ ಪರಿಸ್ಥಿತಿಯಲ್ಲಿ ಮಾಡಬೇಕಾದ ತುರ್ತು ಸುಧಾರಣೆಗೆ ಪಂಚಾಯತ್ ರಾಜ್ ಇಲಾಖೆಯಿಂದ ನಿರ್ದೇಶನ ನೀಡುವಂತೆ ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಸಮಿತಿ ಬುಧವಾರ ಮಂಗಳೂರಿ ನಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಯವರಿಗೆ ಮನವಿ ಸಲ್ಲಿಸಿದೆ.
ಸಚಿವರನ್ನು ಭೇಟಿಯಾದ ನಿಯೋಗವು ಅಕ್ಷರ ದಾಸೋಹದ ಸಿಬ್ಬಂದಿಗಳು ನಿಯಮಕ್ಕೆ ವಿರುದ್ಧವಾಗಿ ರಜೆಯನ್ನು ಮಾಡು ವುದರಿಂದ ಮಕ್ಕಳ ಹಕ್ಕುಗಳಲ್ಲಿ ಒಂದಾದಂತಹ ಪೌಷ್ಠಿಕ ಆಹಾರವನ್ನು ಮಕ್ಕಳಿಗೆ ಕೊಡುವಲ್ಲಿ ತೊಂದರೆ ಆಗುತ್ತಿದ್ದು, ಬದಲಿ ವ್ಯವಸ್ಥೆಯನ್ನು ಮಾಡಲು ಅನುಮತಿ ಕೊಡುವಂತೆ ಆಗ್ರಹಿಸಿದೆ.
ಸರಕಾರಿ ಶಾಲೆಗಳಲ್ಲಿ ಇರುವ ಶಿಕ್ಷಕರಿಗೆ ಸಂಬಳ, ಆಡುಗೆಯವರ ಆಯ್ಕೆ ಮತ್ತು ಸಂಬಳ,ಅತಿಥಿ ಶಿಕ್ಷಕರ ಆಯ್ಕೆ ಮತ್ತು ಸಂಬಳ ಅಲ್ಲದೆ ಎಲ್ಲಾ ವಿಧದ ಹಣಕಾಸಿನ ವ್ಯವಹಾರ, ಸರಕಾರದ ಅನುದಾನ ಎಲ್ಲವೂ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಎಸ್ಡಿಎಂಸಿ ಗಳ ಮೇಲ್ನೋಟದಲ್ಲಿ ನಡೆಯಲು ಕ್ರಮ ಕೈ ಗೊಂಡು, ಮುಖ್ಯ ಶಿಕ್ಷಕರಿಗೆ ಆಗುವ ಹೊರೆಯನ್ನು ಕಮ್ಮಿ ಮಾಡಬೇಕು.
ಶಿಕ್ಷಕರ ಹಾಜರಾತಿ,ಅಡುಗೆ ಸಿಬ್ಬಂದಿಗಳ ಹಾಜರಾತಿ,ಅತಿಥಿ ಶಿಕ್ಷಕರ ಹಾಜರಾತಿಗೆ ಬೇಕಾದ ಬಯೋಮೆಟ್ರಿಕ್ ವ್ಯವಸ್ತೆ ಯನ್ನು ಮಾಡುವುದು, ಅದರ ಉಸ್ತುವಾರಿಯನ್ನು ಎಸ್ಡಿಎಂಸಿ ಮತ್ತು ಪಂಚಾಯತ್ ಗಳಿಗೆ ವಹಿಸಬೇಕು.
ಸರಕಾರಿ ಶಾಲೆ ಹಾಗೂ ಸ್ಥಳೀಯ ಪಂಚಾಯತ್ ಗಳು ಒಂದಕ್ಕೊಂದು ಪೂರಕವಾಗಿ ಕಾರ್ಯ ನಿರ್ವಹಿಸ ಬೇಕಾಗಿದ್ದು ಮೂಲಭೂತ ಸೌಕರ್ಯವನ್ನು ಮಾಡಲು ಬೇಕಾದಷ್ಟು ಅನುದಾನವನ್ನು ಬಿಡುಗಡೆ ಮಾಡುವುದು. ಶಿಕ್ಷಕರು ಶಾಲಾ ಸಮಯದಲ್ಲಿ ಕಾರ್ಯಕ್ರಮಗಳ ಹೆಸರಲ್ಲಿ ಮಕ್ಕಳ ಶೈಕ್ಷಣಿಕ ವಿಷಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಡದೆ ಇರುವ ಬಗ್ಗೆ ಸ್ಥಳೀಯ ಪಂಚಾಯತ್ ಗಳು ಕೂಡ ಗಮನಹರಿಸುವುದು.
ನಾಗರಿಕ ಸೌಕರ್ಯ ಸಮಿತಿಯಲ್ಲಿರುವ ಶಾಲಾ ಎಸ್ಡಿಎಂಸಿಗಳಿಗೆ ಪಂಚಾಯತ್ ವ್ಯಾಪ್ತಿಯಲ್ಲಿ ತರಬೇತಿಯನ್ನು ಕೊಡಲು ಎಸ್ಡಿಎಂಸಿ ಸಮನ್ವಯ ಸಮಿತಿಯು ಆಸಕ್ತರಾಗಿದ್ದು, ರಾಜ್ಯದ ಎಲ್ಲಾ ಪಂಚಾಯತ್ ಗಳು ಕೂಡ ಸಹಕರಿಸಲು ನಿರ್ದೇಶನ ವನ್ನು ನೀಡುವಂತೆ ಸಚಿವರಿಗೆ ಮನವಿ ಮಾಡಲಾಗಿದೆ.
ಆರ್ಟಿ ಈ ಕಾಯ್ದೆ ಪ್ರಕಾರ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಸಮವಸ್ತ್ರವನ್ನು ಉಚಿತವಾಗಿ ನೀಡಬೇಕಿದೆ. ಆದರೆ ಈಗ ಕೇವಲ ಶೂ ಸಾಕ್ಸ್ ಹಾಗೂ ಸಮವಸ್ತ್ರಕ್ಕೆ ಬೇಕಾದ ಬಟ್ಟೆಯನ್ನು ಮಾತ್ರ ಕೊಡುತ್ತಿರುವ ಕಾರಣ ಅದನ್ನು ಹೊಲಿಸಲು ಸರಕಾರಿ ಶಾಲೆಯ ಹೆಚ್ಚಿನ ಪೋಷಕರಿಗೆ ಕಷ್ಟವಾಗುತ್ತಿದೆ. ಆದರಿಂದ ಸ್ಥಳೀಯ ಸರಕಾರವಾದ ಪಂಚಾಯತ್ ಗಳಿಂದ ಅದಕ್ಕೆ ಬೇಕಾದ ಅನುದಾನವನ್ನು ಒದಗಿಸಬೇಕು.
ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಸ್ಕಾಲರ್ ಶಿಪ್ , ಬಸ್ ಪಾಸ್ ಮೊದಲಾದ ಸರಕಾರದ ಅನುಕೂಲತೆ ಗಳನ್ನು ಪಡೆಯಲು ಪೋಷಕರಿಗೆ ಸಹಕಾರ ಆಗುವ ರೀತಿಯಲ್ಲಿ ಸ್ಥಳೀಯ ಪಂಚಾಯತ್ ಗಳಲ್ಲಿ ಉಚಿತವಾಗಿ ನೋಂದಾ ಯಿಸಲು ವ್ಯವಸ್ಥೆ ಕಲ್ಪಿಸುವುದು. ಯಾವುದೇ ರೀತಿಯ ಶಿಕ್ಷಕರ, ಎಸ್ಡಿಎಂಸಿ,ಹಾಗೂ ಮಕ್ಕಳ ತರಬೇತಿಗಳು ಕೂಡ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಸಲು ಕ್ರಮ ವಹಿಸಿ,ಗ್ರಾಮದ ಎಲ್ಲಾ ಶಾಲೆಗಳು ಪಾಲ್ಗೊಳ್ಳುವಿಕೆಯನ್ನು ಖಾತರಿ ಪಡಿಸುವುದು.
ಪುರಸಭೆ, ನಗರಸಭೆ ಮತ್ತು ಮಹಾ ನಗರಪಾಲಿಕೆ ವ್ಯಾಪ್ತಿಯಲ್ಲಿರುವ ಜಿಲ್ಲಾ ಪಂಚಾಯತ್ ಸರಕಾರಿ ಶಾಲೆಗಳಿಗೆ ಜಿಲ್ಲಾ ಪಂಚಾಯತ್,ತಾಲೂಕು ಪಂಚಾಯತ್ ಗಳಿಂದ ಯಾವುದೇ ರೀತಿಯ ಅನುದಾನಗಳು ಕೊಡದಿರುವ ಕಾರಣ ಅಭಿವೃದ್ದಿ ಕುಂಠಿತವಾಗಿದ್ದು , ಅನುದಾನವನ್ನು ಕೊಡಲು ನಿರ್ದೇಶಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದೆ.
ನಿಯೋಗದಲ್ಲಿ ಜಿಲ್ಲಾ ಉಪಾಧ್ಯಕ್ಷ ಉಮ್ಮರ್ ಫಾರೂಕ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೆಂಕಟರಮಣ ಪುಣಚ ಕಡಬ ತಾಲೂಕು ಅಧ್ಯಕ್ಷರಾದ ವಿನೀಶ್ ಕುಮಾರ್ ಕೈಕಂಬ,ಕಡಬ ತಾಲೂಕಿನ ರಾಮಕೃಷ್ಣ ಹೊಳ್ಳ, ಬೆಳ್ತಂಗಡಿ ತಾಲೂಕಿನ ಮಹಮ್ಮದ್ ಕುಂಞಿ ಜೋಗಿಬೆಟ್ಟು,ಲತೀಫ್ ಗುರುವಾಯನಕೆರೆ, ಮುಸ್ತಫಾ ಪಿಲಿಚಂಡುಕಲ್ಲು ಮಂಗಳೂರು ತಾಲೂಕು ಅಧ್ಯಕ್ಷ ದಯಾನಂದ್ ಶೆಟ್ಟಿ ಪಂಜಿಮೊಗರು , ಪುತ್ತೂರು ತಾಲೂಕಿನ ಫಾರೂಕ್ ಜಿಂದಗಿ, ಅಬ್ದುಲ್ ಮಜೀದ್ ಉಪ್ಪಿನಂಗಡಿ, ಬಂಟ್ವಾಳ ತಾಲೂಕಿನ ಹಸೈನಾರ್ ಕುಡ್ತಮುಗೆರು,ಅಬ್ದುಲ್ ಹಾರಿಫ್,ನಾಗರಾಜ್ ಶಂಭೂರು, ಮಧುಸೂದನ್ ಶಂಭೂರು, ಮಹಮ್ಮದ್ ಮುಸ್ತಫ,ಸಿದ್ದೀಕ್ ,ಸಫ್ವಾನ್,ಅಬೂಬಕ್ಕರ್ ಸಿದ್ದೀಕ್,ಹರ್ಷದ್,ಉಮ್ಮರ್ ಫಾರೂಕ್ ಕೆ, ಎಸ್ ಎ ಅಬ್ದುಲ್, ಅಬ್ದುಲ್ ರಶೀದ್ ಸಜೀಪ ಹಾಗೂ ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಸಮಿತಿಯ ಮೊಯ್ದಿನ್ ಕುಟ್ಟಿ ಉಪಸ್ಥಿತರಿದ್ದರು.