ಕೆಥೊಲಿಕ್ ಶಿಕ್ಷಣ ಮಂಡಳಿಯ ನಿವೃತ್ತ ಶಿಕ್ಷಕ-ಶಿಕ್ಷಕೇತರರಿಗೆ ಸನ್ಮಾನ
ಮಂಗಳೂರು: ಶಿಕ್ಷಕರ ದಿನಾಚರಣೆಯ ಅಂಗವಾಗಿ ಕೆಥೋಲಿಕ್ ಶಿಕ್ಷಣ ಮಂಡಳಿಯ ಅಧೀನದ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಸೇವೆ ನೀಡಿ ನಿವೃತ್ತರಾದ ಶಿಕ್ಷಕ ಹಾಗೂ ಶಿಕ್ಷಕೇತರರನ್ನು ಸನ್ಮಾನಿಸುವ ಕಾರ್ಯಕ್ರಮ ಬಜ್ಜೋಡಿಯ ಶಾಂತಿಕಿರಣ ಸಭಾಭವನದಲ್ಲಿ ಮಂಗಳವಾರ ನಡೆಯಿತು.
ಕೆಥೋಲಿಕ್ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಹಾಗೂ ಕೆಥೋಲಿಕ್ ಶಿಕ್ಷಣ ಮಂಡಳಿಯ ಅಧ್ಯಕ್ಷ ರೆ.ಫಾ. ಡಾ. ಪೀಟರ್ ಪೌಲ್ ಸಲ್ಡಾನ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 2023-24ನೆ ಸಾಲಿನಲ್ಲಿ ಎಸೆಸೆಲ್ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಅಧಿಕ ಅಂಕ ಹಾಗೂ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಮತ್ತು ಶೇ. 100 ಫಲಿತಾಂಶ ಪಡೆದ ಸಂಸ್ಥೆಗಳನ್ನು ಸನ್ಮಾನಿಸಲಾಯಿತು.
ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜಿನ ಪ್ರಾಂಶುಪಾಲ ಫಾ. ಜೆರೋಮ್ ಡಿಸೋಜಾ, ತೆಂಕಕಾರಂದೂರು ಸೈಂಟ್ ರಫಾಯಲ್ ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಗ್ರೆಟ್ಟಾ ಕೋಸ್ಟಾ ನಿವೃತ್ತ ಶಿಕ್ಷಕರ ಪರವಾಗಿ ಅನಿಸಿಕೆ ವ್ಯಕ್ತಪಡಿಸಿದರು.
ಕೆಥೋಲಿಕ್ ಶಿಕ್ಷಣ ಮಂಡಳಿಯ ಕಚೇರಿಯಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸಿದ ನಿರ್ಮಲಾ ಪಿಂಟೋ, ವಿಜಯ್ ಫೆರ್ನಾಂಡಿಸ್‌ರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಉರ್ವಾದ ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳ ಪ್ರಾರ್ಥನಾ ನೃತ್ಯದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶಿಕ್ಷಣ ಮಂಡಳಿಯ ಕಾರ್ಯದರ್ಶಿ ರೆ.ಫಾ ಡಾ. ಪ್ರವೀಣ್ ಲಿಯೊ ಲಸ್ರಾದೊ ಸ್ವಾಗತಿಸಿ ದರು. ಬಿಜೈ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲ ರೆ.ಫಾ. ಜೋನ್ಸನ್ ಸಿಕ್ವೇರಾ ಅವರು ಕಳೆದ ಶೈಕ್ಷಣಿಕ ವರ್ಷದಲ್ಲಿ ನಿಧನರಾಗಿರುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಆತ್ಮಕ್ಕೆ ಚಿರಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಿದರು. ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಸದಸ್ಯ ಅಲೋಶಿಯಸ್ ಡಿಸೋಜಾ ವಂದಿಸಿದರು.
ಶಿಕ್ಷಕಿ ಮೆಟಿಲ್ಡಾ ಡಿಕೋಸ್ತಾ ಕಾರ್ಯಕ್ರಮ ನಿರೂಪಿಸಿದರು. ಪೆಟ್ರಿಶಿಯಾ ಲೋಬೋ, ಐರಿನ್ ಸಿಕ್ವೇರಾ, ತೆರೆಜಾ ಡಿಮೆಲ್ಲೋ, ಆಲಿಸ್ ಕೆಜೆ, ಗ್ರೆಟ್ಟಾ ಲೋಬೋ ಉಪಸ್ಥಿತರಿದ್ದರು.